ಭಾರತ ಎದುರು ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಮೂರು ಮಾದರಿಯಲ್ಲೂ ಶತಕ': ರೋಹಿತ್ ಶರ್ಮಾ ಜತೆ ಎಲೈಟ್ ಕ್ಲಬ್ ಸೇರಿದ ಕಿವೀಸ್ ಬ್ಯಾಟರ್..!

Published : Nov 20, 2026, 11:33 AM IST
Glenn Phillips joins Rohit Sharma Elite Group

ಸಾರಾಂಶ

ನ್ಯೂಜಿಲೆಂಡ್ ಬ್ಯಾಟರ್ ಗ್ಲೆನ್ ಫಿಲಿಪ್ಸ್ 2026ರ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ20 ಮಾದರಿಗಳಲ್ಲಿ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ರೋಹಿತ್ ಶರ್ಮಾ ಬಳಿಕ ಈ ಸಾಧನೆ ಮಾಡಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

ವೆಲ್ಲಿಂಗ್ಟನ್(ನ.20): ಭಾರತ ಕ್ರಿಕೆಟ್ ತಂಡದ ವಿರುದ್ಧ 2026ರ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಸೇರಿದಂತೆ ಮೂರೂ ಮಾದರಿಗಳಲ್ಲೂ ಶತಕ ಸಿಡಿಸುವ ಮೂಲಕ ನ್ಯೂಜಿಲೆಂಡ್ ಬ್ಯಾಟರ್ ಗ್ಲೆನ್ ಫಿಲಿಪ್ಸ್ ಇತಿಹಾಸ ನಿರ್ಮಿಸಿದ್ದಾರೆ. ಭಾರತ ಎದುರು ಈ ಅಪರೂಪದ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ಶುಕ್ರವಾರ ಆರಂಭವಾದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಫಿಲಿಪ್ಸ್ ಅಮೋಘ 118 ರನ್ ಗಳಿಸಿದರು. ಈ ಮೂಲಕ 2026ರಲ್ಲಿ ಭಾರತದ ವಿರುದ್ಧ ಏಕದಿನ ಮತ್ತು ಟಿ20 ಮಾದರಿಗಳಲ್ಲಿ ದಾಖಲಿಸಿದ್ದ ಶತಕಗಳ ಜೊತೆಗೆ ಟೆಸ್ಟ್‌ನಲ್ಲೂ ಮೂರಂಕಿ ಮೊತ್ತ ತಲುಪಿದರು.

ಇದಕ್ಕೂ ಮೊದಲು ಜನವರಿಯಲ್ಲಿ ಇಂದೋರ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಫಿಲಿಪ್ಸ್ 106 ರನ್ ಗಳಿಸಿದ್ದರು. ಬಳಿಕ ಅಕ್ಟೋಬರ್‌ನಲ್ಲಿ ಆಕ್ಲೆಂಡ್‌ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ 107 ರನ್ ಸಿಡಿಸಿದ್ದರು. ಇದೀಗ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ 118 ರನ್ ಗಳಿಸುವ ಮೂಲಕ ಒಂದೇ ವರ್ಷದಲ್ಲಿ ಭಾರತದ ವಿರುದ್ಧ ಮೂರೂ ಮಾದರಿಗಳಲ್ಲೂ ಶತಕ ದಾಖಲಿಸಿದ ಸಾಧನೆ ಮಾಡಿದ್ದಾರೆ.

ರೋಹಿತ್ ಶರ್ಮಾ ಬಳಿಕ ಫಿಲಿಪ್ಸ್‌ಗೆ ಈ ಗೌರವ

ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಫಿಲಿಪ್ಸ್ ಪಾತ್ರರಾಗಿದ್ದಾರೆ. ಈ ಹಿಂದೆ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ 2017ರಲ್ಲಿ ಶ್ರೀಲಂಕಾ ವಿರುದ್ಧ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಮೂರೂ ಮಾದರಿಗಳಲ್ಲೂ ಶತಕ ದಾಖಲಿಸಿದ್ದರು. ಇದೀಗ ಫಿಲಿಪ್ಸ್ ಈ ಅಪರೂಪದ ಸಾಧನೆ ಮಾಡಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಫಿಲಿಪ್ಸ್ ದಾಖಲಿಸಿದ ಎರಡನೇ ಶತಕದ ನೆರವಿನಿಂದ ಪಂದ್ಯದ ಎರಡನೇ ದಿನದ ಆರಂಭಿಕ ಹಂತದಲ್ಲೇ ನ್ಯೂಜಿಲೆಂಡ್ ತಂಡದ ಮೊತ್ತ 300ರ ಗಡಿ ದಾಟಿತು. ಮೊದಲ ದಿನದ ಊಟದ ವಿರಾಮದ ವೇಳೆಗೆ 70 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆತಿಥೇಯ ತಂಡಕ್ಕೆ ಫಿಲಿಪ್ಸ್ ಮತ್ತು ಹೆನ್ರಿ ನಿಕೋಲ್ಸ್ ಆಸರೆಯಾದರು. ಇವರಿಬ್ಬರ ನಡುವೆ ಮುರಿಯದ 216 ರನ್‌ಗಳ ಜೊತೆಯಾಟ ಮೂಡಿಬಂದಿತು. ಅಂತಿಮವಾಗಿ ಭಾರತದ ವೇಗಿ ಆಕಾಶ್ ದೀಪ್ ಈ ಗಟ್ಟಿಯಾದ ಜೊತೆಯಾಟವನ್ನು ಮುರಿದರು. ಹೊರಕ್ಕೆ ಚಲಿಸಿದ ಚೆಂಡನ್ನು ಆಡಲು ಮುಂದಾದ ಫಿಲಿಪ್ಸ್ ಅವರ ಬ್ಯಾಟ್‌ನ ಹೊರ ಅಂಚಿಗೆ ತಾಗಿ ಚೆಂಡು ವಿಕೆಟ್‌ಕೀಪರ್ ಕೈ ಸೇರಿತು. ಅಂತಿಮವಾಗಿ ಹೆನ್ರಿ ನಿಕೋಲ್ಸ್ ಅಜೇಯ 175 ರನ್‌ಗಳ ನೆರವಿನಿಂದ ನ್ಯೂಜಿಲೆಂಡ್ ತಂಡವು 368 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು.

ಭಾರತ ತಂಡದಿಂದ ದಿಟ್ಟ ಆರಂಭ:

ಇನ್ನು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ಕೂಡಾ ಉತ್ತಮ ಆರಂಭವನ್ನೇ ಪಡೆದಿದೆ. ಮೊದಲ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಹಾಗೂ ಕೆ ಎಲ್ ರಾಹುಲ್ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿ ಕೊಟ್ಟಿತು. ಮೊದಲ ವಿಕೆಟ್‌ಗೆ ಈ ಜೋಡಿ 130 ರನ್‌ಗಳ ಜತೆಯಾಟವಾಡಿತು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ 89 ಎಸೆತಗಳನ್ನು ಎದುರಿಸಿ 16 ಬೌಂಡರಿ ಸಹಿತ 85 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಕನ್ನಡಿಗ ಜೋಡಿ ಕೆ ಎಲ್ ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಸದ್ಯ ಕೆ ಎಲ್ ರಾಹುಲ್ ಅಜೇಯ 52 ರನ್ ಬಾರಿಸಿದ್ದು, ಮತ್ತೊಂದು ತುದಿಯಲ್ಲಿ ದೇವದತ್ ಪಡಿಕ್ಕಲ್ 16 ರನ್ ಗಳಿಸಿ ಮೂರನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಎರಡನೇ ದಿನದಂತ್ಯಕ್ಕೆ ಭಾರತ ತಂಡವು ಒಂದು ವಿಕೆಟ್ ಕಳೆದುಕೊಂಡು 159 ರನ್ ಗಳಿಸಿದ್ದು, ಇನ್ನೂ 209 ರನ್‌ಗಳ ಹಿನ್ನಡೆಯಲ್ಲಿದೆ.

ಡಬ್ಲ್ಯುಟಿಸಿ ಫೈನಲ್ ಮೇಲೆ ನ್ಯೂಜಿಲೆಂಡ್ ಕಣ್ಣು

ಮುಂದಿನ ವರ್ಷ ಲಂಡನ್‌ನ ದಿ ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವ ಗುರಿಯೊಂದಿಗೆ ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆಯನ್ನು ಮತ್ತಷ್ಟು ವಿಸ್ತರಿಸಲು ಪ್ರಯತ್ನಿಸಲಿದೆ. ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡ ಎರಡನೇ ಸ್ಥಾನದಲ್ಲಿದೆ. ಆತಿಥೇಯ ತಂಡ ಭಾರತಕ್ಕಿಂತ ಎರಡು ಸ್ಥಾನ ಮೇಲಿದ್ದು, ಫೈನಲ್ ತಲುಪುವ ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IND Vs NZ: ಯಾರ ಮಾತು ಕೇಳದೆ ಮತ್ತೆ ಎಡವಿದ ಗಿಲ್; ಕ್ಯಾಪ್ಟನ್ ಅಂತ ಏನ್ ಬೇಕಾದ್ರೂ ಮಾಡೋದಾ ಎಂದು ಕೆಂಡವಾದ ಫ್ಯಾನ್ಸ್
72 ವರ್ಷಗಳ ವಿಶ್ವ ದಾಖಲೆಯನ್ನು ಮುರಿದ ತೆಂಬಾ ಬವುಮಾ! ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಿದ ನಾಯಕ