4ನೇ ದಿನದಾಟದಲ್ಲಿ ತಾನು ಮಾಡಿದ ತಪ್ಪನ್ನು ಐದನೇ ದಿನದಾಟದಲ್ಲಿ ತಿದ್ದಿಕೊಂಡ ಜಡೇಜಾ! ಕೊನೆಗೂ ತಣ್ಣಗಾದ ಗೌತಮ್ ಗಂಭೀರ್ ಕೋಪ

Published : Aug 19, 2026, 12:53 PM IST
Ravindra Jadeja

ಸಾರಾಂಶ

ಭಾರತ-ಶ್ರೀಲಂಕಾ ಟೆಸ್ಟ್ ಪಂದ್ಯದ ನಾಲ್ಕನೇ ದಿನ ರವೀಂದ್ರ ಜಡೇಜಾ ನೋ ಬಾಲ್ ಎಸೆದು ವಿಕೆಟ್ ಕೈಚೆಲ್ಲಿದ್ದು ಕೋಚ್ ಗೌತಮ್ ಗಂಭೀರ್ ಕೋಪಕ್ಕೆ ಕಾರಣವಾಗಿತ್ತು. ಆದರೆ, ಕೊನೆಯ ದಿನದಾಟದಲ್ಲಿ ಅದೇ ಜಡೇಜಾ ಅಪಾಯಕಾರಿಯಾಗಿದ್ದ ಧನಂಜಯ ಡಿ ಸಿಲ್ವಾ ವಿಕೆಟ್ ಪಡೆಯುವ ಮೂಲಕ ತಮ್ಮ ತಪ್ಪನ್ನು ತಿದ್ದಿಕೊಂಡರು.

ಗಾಲೆ: ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಗೆಲುವಿನತ್ತ ದಾಪುಗಾಲಿಡುತ್ತಿದೆ. ಆದರೆ ನಾಲ್ಕನೇ ದಿನದಾಟದ ವೇಳೆಯಲ್ಲಿ ರವೀಂದ್ರ ಜಡೇಜಾ ಮಾಡಿದ ಒಂದು ಯಡವಟ್ಟು ಟೀಂ ಇಂಡಿಯಾ ಹೆಡ್‌ ಕೋಚ್ ಗೌತಮ್ ಗಂಭೀರ್ ಸಿಟ್ಟು ನೆತ್ತಿಗೇರುವಂತೆ ಮಾಡಿತ್ತು. ಇದೀಗ ಕೊನೆಯ ದಿನದಾಟದ ವೇಳೆಯಲ್ಲಿ ಜಡ್ಡು ಆ ತಪ್ಪನ್ನು ತಾವೇ ಸರಿ ಪಡಿಸುವ ಮೂಲಕ ಕೋಚ್ ಕೋಪ ತಣಿಸುವ ಕೆಲಸ ಮಾಡಿದ್ದಾರೆ.

ಜಡ್ಡು ನೋ ಬಾಲ್‌ ಕಂಡು ಸಿಡಿಮಿಡಿಗೊಂಡ ಗೌತಿ:

ಗಾಲೆ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದ ವೇಳೆಯಲ್ಲಿ ಜಡೇಜಾ ಬೌಲಿಂಗ್‌ನಲ್ಲಿ ಲಂಕಾದ ಬ್ಯಾಟರ್ ಧನಂಜಯ ಡಿ ಸಿಲ್ವಾ ಬ್ಯಾಟ್ ಅಂಚನ್ನು ಸವರಿದ ಚೆಂಡು ನೇರವಾಗಿ ಫಸ್ಟ್‌ ಸ್ಲಿಪ್‌ನಲ್ಲಿದ್ದ ಆಟಗಾರನ ಕೈ ಸೇರಿತು. ವಿಕೆಟ್ ಕಬಳಿಸಿದ ಜಡ್ಡು ಸಂತೋಷ ಹೆಚ್ಚುಹೊತ್ತು ಉಳಿಯಲಿಲ್ಲ. ಯಾಕೆಂದರೆ ಆ ಎಸೆತ ನೋ ಬಾಲ್ ಆಗಿತ್ತು. ಹೀಗಾಗಿ ಧನಂಜಯ ಡಿ ಸಿಲ್ವಾ ನಾಟೌಟ್ ಆಗಿ ಕ್ರೀಸ್‌ನಲ್ಲಿ ಉಳಿದುಕೊಂಡರು.

ಇದು ಟೀಂ ಇಂಡಿಯಾ ಆಟಗಾರರ ಪಾಳಯದಲ್ಲಿ ನಿರಾಸೆಯನ್ನುಂಟು ಮಾಡಿತು. ಧನಂಜಯ ಆಗ 22 ಎಸೆತಗಳನ್ನು ಎದುರಿಸಿ ಕೇವಲ 8 ರನ್‌ ಗಳಿಸಿದ್ದರು. ನಿನ್ನೆಯೇ ಧನಂಜಯ ವಿಕೆಟ್ ಪತನವಾಗಿದ್ದರೇ ಲಂಕಾ ಮತ್ತಷ್ಟು ಒತ್ತಡಕ್ಕೆ ಸಿಲುಕುವ ಸಾಧ್ಯತೆಯಿತ್ತು. ಇಂತಹ ಸಂದರ್ಭದಲ್ಲಿ ಸ್ಪಿನ್ ಬೌಲರ್ ನೋ ಬಾಲ್ ಎಸೆದಿದ್ದು ಕೋಚ್ ಗಂಭೀರ್ ತಾಳ್ಮೆ ಕಳೆದುಕೊಳ್ಳುವಂತೆ ಮಾಡಿತ್ತು.

ಕೊನೆಯ ದಿನ ತಪ್ಪು ತಿದ್ದಿಕೊಂಡ ಜಡೇಜಾ:

ಇನ್ನು ತಮಗೆ ಸಿಕ್ಕ ಜೀವದಾನವನ್ನು ಎರಡೂ ಕೈಗಳಿಂದ ಬಾಚಿಕೊಂಡ ಧನಂಜಯ ಡಿ ಸಿಲ್ವಾ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಭಾರತೀಯ ಬೌಲರ್‌ಗಳನ್ನು ಕಾಡಿದರು. ಆರನೇ ವಿಕೆಟ್‌ಗೆ ಧನಂಜಯ ಹಾಗೂ ಸೋನಲ್ ದಿನುಶಾ ಜೋಡಿ 202 ಎಸೆತಗಳನ್ನು ಎದುರಿಸಿ 95 ರನ್‌ಗಳ ಜತೆಯಾಟವಾಡುವ ಮೂಲಕ ಭಾರತೀಯ ಪಾಳಯದಲ್ಲಿ ನಡುಕ ಹುಟ್ಟಿಸಿದ್ದರು. ಆದರೆ 56ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಅವರೇ ಧನಂಜಯ ಡಿ ಸಿಲ್ವಾ ಅವರ ವಿಕೆಟ್ ಕಬಳಿಸುವ ಮೂಲಕ ಆರಂಭದಲ್ಲಿ ತಾವು ಮಾಡಿದ ತಪ್ಪನ್ನು ಸರಿಪಡಿಸಿಕೊಂಡರು. ಜತೆಗೆ ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಲಂಕಾ ಜತೆಯಾಟಕ್ಕೂ ಬ್ರೇಕ್ ಹಾಕಿದರು. ಧನಂಜಯ 151 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 59 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಧನಂಜಯ ವಿಕೆಟ್ ಕಬಳಿಸುತ್ತಿದ್ದಂತೆಯೇ ಜಡೇಜಾ ಭರ್ಜರಿ ಸಂಭ್ರಮಾಚರಣೆ ಮಾಡಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗಾಲೆ ಟೆಸ್ಟ್‌: ಶುಭ್‌ಮನ್ ಗಿಲ್ ದಾಖಲೆ ನುಚ್ಚುನೂರು, WTC ಯಲ್ಲಿ ಯಾವ ಭಾರತೀಯನೂ ಮಾಡಿರದ ಅಪರೂಪದ ದಾಖಲೆ ನಿರ್ಮಿಸಿದ ರಿಷಭ್ ಪಂತ್!
ಮೈದಾನದಲ್ಲಿ ಈತನ ಕಾಮೆಂಟರಿ ನಗು ತರಿಸಿದ್ರೂ, ಕೆಲವೊಮ್ಮೆ ಇರಿಟೇಟ್ ಎಂದ ಅಜಿಂಕ್ಯ ರಹಾನೆ..! ಹೀಗಂದಿದ್ದು ಈ ಸ್ಟಾರ್ ಕ್ರಿಕೆಟರ್‌ಗೆ