
ಚೆನ್ನೈ: ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದ ಉಪನಾಯಕ ಅಕ್ಷರ್ ಪಟೇಲ್ ಅವರನ್ನೇ ಆಡುವ ಬಳಗದಿಂದ ಕೈಬಿಟ್ಟಿದ್ದಕ್ಕೆ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ ಚೀಫ್ ಸೆಲೆಕ್ಟರ್ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಬದಲು ವಾಷಿಂಗ್ಟನ್ ಸುಂದರ್ ಅವರನ್ನು ಕಣಕ್ಕಿಳಿಸಲಾಗಿತ್ತು. ಈ ನಿರ್ಧಾರದ ಬಗ್ಗೆ ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಗರಂ ಆಗಿ ಮಾತನಾಡಿದ್ದಾರೆ.
"ಗೌತಮ್ ಗಂಭೀರ್ ಏನ್ ಮಾಡ್ತಿದ್ದಾರೆ ಅಂತಾನೇ ನನಗೆ ಅರ್ಥ ಆಗ್ತಿಲ್ಲ. ಪ್ಲೇಯಿಂಗ್ ಇಲೆವೆನ್ ನಿರ್ಧರಿಸೋದು, ತಂತ್ರ ರೂಪಿಸೋದು ಅವರೇ ಅಲ್ವಾ? ಇದೇ ರೀತಿ ತಲೆಬುಡ ಇಲ್ಲದ ತಂತ್ರಗಳನ್ನೇ ಮುಂದುವರಿಸಿದರೆ, ಗಂಭೀರ್ ಅವರ ಕೋಚಿಂಗ್ ಕೆರಿಯರ್‌ಗೆ ಕುತ್ತು ಬರಲಿದೆ. ಮ್ಯಾಚ್ ಸೋತ ಮೇಲೆ ಗಂಭೀರ್ ಮತ್ತು ಸೂರ್ಯಕುಮಾರ್ ಮಾತಾಡಿಕೊಂಡು ಏನು ಪ್ರಯೋಜನ? ಎಲ್ಲವೂ ಕೈಮೀರಿದ ಮೇಲೆ ಚರ್ಚಿಸಿ ಏನು ಲಾಭ? ಅಕ್ಷರ್ ಪಟೇಲ್ ಅವರಂತಹ ಆಟಗಾರನನ್ನು ಹೊರಗಿಡಲು ಹೇಗೆ ಮನಸ್ಸು ಬಂತು?" ಎಂದು ಶ್ರೀಕಾಂತ್ ಪ್ರಶ್ನಿಸಿದ್ದಾರೆ.
ತಂಡದ ಉಪನಾಯಕನನ್ನೇ ಹೊರಗಿಟ್ಟ ವಿಪರ್ಯಾಸವನ್ನು ಶ್ರೀಕಾಂತ್ ಲೇವಡಿ ಮಾಡಿದ್ದಾರೆ. ಈ ಹಿಂದೆ ಶುಭಮನ್ ಗಿಲ್ ಅವರಿಗೂ ಇದೇ ರೀತಿ ಆಗಿತ್ತು ಎಂದು ಅವರು ನೆನಪಿಸಿಕೊಂಡರು. "ಈಗಂತೂ ಟೀಂ ಇಂಡಿಯಾದ ಟಿ20 ಉಪನಾಯಕ ಆದವರು ತಂಡದಿಂದ ಹೊರಬೀಳುವ ಪರಿಸ್ಥಿತಿ ಬಂದಿದೆ. ಇನ್ನು ಮುಂದೆ ಯಾರೂ ಭಾರತ ತಂಡದ ವೈಸ್-ಕ್ಯಾಪ್ಟನ್ ಆಗಲು ಇಷ್ಟಪಡುವುದಿಲ್ಲವೇನೋ," ಎಂದು ಅವರು ವ್ಯಂಗ್ಯವಾಡಿದರು.
ವಿಶ್ವಕಪ್‌ನ ಮೊದಲ ಮೂರು ಪಂದ್ಯಗಳಲ್ಲಿ ಅಕ್ಷರ್ ಪಟೇಲ್ 12.16ರ ಸರಾಸರಿ ಮತ್ತು 6.63ರ ಎಕಾನಮಿಯಲ್ಲಿ ಉತ್ತಮ ಬೌಲಿಂಗ್ ಮಾಡಿದ್ದರು. ಆದರೂ, ಅಹಮದಾಬಾದ್ ಪಿಚ್‌ನಲ್ಲಿ ಅಕ್ಷರ್ ಬದಲು ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಸುಂದರ್ 2 ಓವರ್‌ಗಳಲ್ಲಿ ವಿಕೆಟ್ ಪಡೆಯದೆ 17 ರನ್ ನೀಡಿದ್ದಲ್ಲದೆ, ಬ್ಯಾಟಿಂಗ್‌ನಲ್ಲೂ ವಿಫಲರಾದರು.
ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಸೋಲು ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲುಗಳಲ್ಲಿ ಒಂದು ಎಂದು ಶ್ರೀಕಾಂತ್ ಬಣ್ಣಿಸಿದ್ದಾರೆ. "ಇದು ನಾಚಿಕೆಗೇಡಿನ ಸೋಲು. ಇದನ್ನು ಸಮರ್ಥಿಸಿಕೊಳ್ಳುವ ಅಗತ್ಯವೇ ಇಲ್ಲ. 2022ರ ಸೆಮಿಫೈನಲ್ ಸೋಲಿನ ನಂತರದ ಅತಿದೊಡ್ಡ ಕುಸಿತವಿದು. ಇದರಿಂದಾಗಿ ಜಿಂಬಾಬ್ವೆ ವಿರುದ್ಧದ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಇನ್ನು ಭಾರತ ತಂಡ ಪ್ರಾರ್ಥನೆ ಶುರು ಮಾಡಬಹುದು," ಎಂದು ಶ್ರೀಕಾಂತ್ ಸೇರಿಸಿದರು.
ಫೆಬ್ರವರಿ 26 ರಂದು ಚೆನ್ನೈನಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ತನ್ನ ಮುಂದಿನ ಸೂಪರ್-8 ಪಂದ್ಯವನ್ನು ಆಡಲಿದೆ. ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಲು ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.
ಮೊದಲು ಬ್ಯಾಟ್ ಮಾಡಿದ ದ.ಆಫ್ರಿಕಾದ ಆರಂಭ ಉತ್ತಮವಾಗಿರಲಿಲ್ಲ. 4 ಓವರ್‌ಗಳಲ್ಲಿ 20 ರನ್‌ಗೆ 3 ವಿಕೆಟ್ ಕಳೆದುಕೊಂಡ ತಂಡ ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಆದರೆ ಅನುಭವಿ ಆಟಗಾರ ಡೇವಿಡ್ ಮಿಲ್ಲರ್ ಹಗೂ ಡೆವಾಲ್ಡ್ ಬ್ರೆವಿಸ್ ಕೇವಲ 50 ಎಸೆತಗಳಲ್ಲಿ 97 ರನ್ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಮಧ್ಯಮ ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳನ್ನು ಚೆಂಡಾಡಿದ ಬ್ರೆವಿಸ್ 29 ಎಸೆತಕ್ಕೆ 45 ರನ್ ಸಿಡಿಸಿದರೆ, ಮಿಲ್ಲರ್ 35 ಎಸೆತಗಳಲ್ಲಿ 63 ರನ್ ಗಳಿಸಿದರು. ಬಳಿಕ ಟ್ರಿಸ್ಟನ್ ಸ್ಟಬ್ಸ್ ಕೂಡಾ ಅಬ್ಬರಿಸಿದರು. ಅವರು 24 ಎಸೆತಗಳಲ್ಲೇ ಔಟಾಗದೆ 44 ರನ್ ಸಿಡಿಸಿದರು. ಈ ಮೂವರ ಹೊರತಾಗಿ ಬೇರೆ ಯಾರೂ ಎರಡಂಕಿ ಮೊತ್ತ ಗಳಿಸಲಿಲ್ಲ. ಹಾರ್ದಿಕ್, ವರುಣ್ ತಲಾ 45+ ರನ್ ಬಿಟ್ಟುಕೊಟ್ಟರು. ಬೂಮ್ರಾ 4 ಓವರ್‌ಗಳಲ್ಲಿ ಕೇವಲ 15 ರನ್ ನೀಡಿ 3 ವಿಕೆಟ್ ಕಿತ್ತರು.
ಪೆವಿಲಿಯನ್ ಪರೇಡ್:
ಗುರಿ ಬೆನ್ನತ್ತಲು ಇಳಿದ ಭಾರತಕ್ಕೆ ಈ ಪಂದ್ಯದಲ್ಲೂ ಉತ್ತಮ ಆರಂಭ ಸಿಗಲಿಲ್ಲ. ರನ್ ಖಾತೆ ತೆರೆಯುವ ಮೊದಲೇ ಇಶಾನ್ ಔಟಾದರು. ತಿಲಕ್ ವರ್ಮಾ ಗಳಿಕೆ ಕೇವಲ 1 ರನ್. ಅಭಿಷೇಕ್ ಶರ್ಮಾ ಆಟ 15ಕ್ಕೆ ಕೊನೆಗೊಂಡಿತು. ವಾಷಿಂಗ್ಟನ್ ಸುಂದರ್(11), ಸೂರ್ಯಕುಮಾರ್(18) ಔಟಾಗುವುದರೊಂದಿಗೆ ತಂಡ 10 ಓವರ್ ಮುಕ್ತಾಯಕ್ಕೂ ಮುನ್ನವೇ ಸೋಲೊಪ್ಪಿಕೊಂಡಂತಾಗಿತ್ತು. ತಂಡದ ಪರ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ನಿಂತಿದ್ದು ಶಿವಂ ದುಬೆ ಮಾತ್ರ. ಅವರು 37 ಎಸೆತಕ್ಕೆ 42 ರನ್ ಸಿಡಿಸಿ ನಿರ್ಗಮಿಸಿದರು. ಮಾರ್ಕೊ ಯಾನ್ಸನ್ 4, ಕೇಶವ್ ಮಹಾರಾಜ್ 3 ವಿಕೆಟ್ ಕಿತ್ತರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.