
ಬ್ರಿಸ್ಟೋಲ್: ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 125 ರನ್‌ಗಳ ಹೀನಾಯ ಸೋಲು ಕಂಡಿದೆ. ಈ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಸೆಲೆಕ್ಷನ್ ವಿವಾದ ಭುಗಿಲೆದ್ದಿದೆ. ಟಿ20 ಇತಿಹಾಸದಲ್ಲಿ ರನ್‌ಗಳ ಅಂತರದಲ್ಲಿ ಭಾರತ ಅನುಭವಿಸಿದ ಅತಿದೊಡ್ಡ ಸೋಲು ಇದಾಗಿದೆ. ಇಂಗ್ಲೆಂಡ್ ನೀಡಿದ್ದ 202 ರನ್‌ಗಳ ಗುರಿ ಬೆನ್ನತ್ತಿದ ಭಾರತ, ಕೇವಲ 76 ರನ್‌ಗಳಿಗೆ ಆಲೌಟ್ ಆಯ್ತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಹ್ಯಾರಿ ಬ್ರೂಕ್ ನಾಯಕತ್ವದ ಇಂಗ್ಲೆಂಡ್ 2-0 ಮುನ್ನಡೆ ಸಾಧಿಸಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಆಡಿದ 5 ಪಂದ್ಯಗಳಲ್ಲಿ ಭಾರತ ನಾಲ್ಕರಲ್ಲಿ ಸೋತಿದ್ದು, ಗಂಭೀರ್ ಕೋಚಿಂಗ್‌ನಲ್ಲಿ ತಂಡ ತೀವ್ರ ಸಂಕಷ್ಟದಲ್ಲಿದೆ.
ಆದರೆ, ಈ ಸೋಲಿಗಿಂತಲೂ ಹೆಚ್ಚಾಗಿ, ಇತ್ತೀಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಸಂಜು ಸ್ಯಾಮ್ಸನ್‌ರನ್ನು ಪ್ಲೇಯಿಂಗ್ 11ರಿಂದ ಪದೇ ಪದೇ ಕೈಬಿಡುತ್ತಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಗಂಭೀರ್-ಅಯ್ಯರ್ ಜೋಡಿ ಸಂಜುಗೆ ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಅಭಿಮಾನಿಗಳು ಮತ್ತು ಮಾಜಿ ಆಟಗಾರರು ಪ್ರಶ್ನಿಸುತ್ತಿದ್ದಾರೆ. ಪವರ್‌ಪ್ಲೇನಲ್ಲಿ ವಿಕೆಟ್ ಬೀಳುತ್ತಿದ್ದಾಗ ಹರ್ಷಿತ್ ರಾಣಾರನ್ನು ಬ್ಯಾಟಿಂಗ್‌ಗೆ ಕಳುಹಿಸಿದ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಸೇರಿದಂತೆ ಹಲವರು ಬಹಿರಂಗವಾಗಿ ಟೀಕಿಸಿದ್ದಾರೆ.
ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಕೋಚ್ ಗೌತಮ್ ಗಂಭೀರ್, ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಕೈಬಿಟ್ಟ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಂಜುರನ್ನು ತಂಡದ ಯೋಜನೆಗಳಿಂದ ಸಂಪೂರ್ಣವಾಗಿ ಹೊರಗಿಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. "ಸಂಜು ಸ್ಯಾಮ್ಸನ್‌ಗೆ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಅಗತ್ಯವಿದ್ದ ಸ್ಪಷ್ಟನೆಯನ್ನು ನಾನು ನೀಡಿದ್ದೇನೆ. ಅದು ಕೋಚ್ ಮತ್ತು ಆಟಗಾರನ ನಡುವಿನ ಖಾಸಗಿ ಮಾತುಕತೆ, ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಸಂಜು ಭಾರತಕ್ಕಾಗಿ ಮಾಡಿರುವ ಸಾಧನೆ ಅಸಾಧಾರಣ. ಅದರಲ್ಲಿ ಯಾರಿಗೂ ಅನುಮಾನವಿಲ್ಲ. ಆದರೆ ಕೆಲವೊಮ್ಮೆ ನಾವು ಆಟಗಾರರ ಪ್ರಸ್ತುತ ಫಾರ್ಮ್ ಅನ್ನು ಸಹ ಪರಿಗಣಿಸಬೇಕಾಗುತ್ತದೆ. ಈ ಸರಣಿಯಲ್ಲಿ ಸಂಜು ಇನ್ನು ಮುಂದೆ ವಾಪಸ್ ಬರಲು ಸಾಧ್ಯವಿಲ್ಲ ಎಂದು ಎಲ್ಲಿಯೂ ಹೇಳಿಲ್ಲ" ಎಂದು ಗಂಭೀರ್ ಹೇಳಿದರು.
ತಂಡದ ಆಯ್ಕೆಯಲ್ಲಿ ತಮ್ಮ ಕಠಿಣ ನಿಲುವನ್ನು ಗಂಭೀರ್ ಪುನರುಚ್ಚರಿಸಿದರು. "ಅಂತಾರಾಷ್ಟ್ರೀಯ ಕ್ರಿಕೆಟ್ ಫಲಿತಾಂಶಗಳ ಮೇಲೆ ನಿಂತಿದೆ. ಯಾವ ಕಾಂಬಿನೇಷನ್ ತಂಡಕ್ಕೆ ಗೆಲುವು ತಂದುಕೊಡುತ್ತದೆಯೋ, ಅದೇ ಪ್ಲೇಯಿಂಗ್ 11 ಕಣಕ್ಕಿಳಿಯುತ್ತದೆ. ಪ್ರತಿಯೊಬ್ಬ ಆಟಗಾರನೂ ಭಾರತ ತಂಡದಲ್ಲಿ ಆಡಲು ತಮ್ಮ ಸ್ಥಾನವನ್ನು ಸ್ವಂತ ಪ್ರದರ್ಶನದ ಮೂಲಕ ಗಳಿಸಿಕೊಳ್ಳಬೇಕು ಎಂದು ನಾನು ನಂಬುತ್ತೇನೆ" ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಭಾರತ ತಂಡವು ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ವಿಫಲವಾಗಿದೆ ಎಂದು ಗಂಭೀರ್ ಒಪ್ಪಿಕೊಂಡರು. "ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ ಎಂಬುದು ಸತ್ಯ. ಅದು ಐರ್ಲೆಂಡ್‌ನಲ್ಲಾಗಲಿ, ಇಂಗ್ಲೆಂಡ್‌ನಲ್ಲಾಗಲಿ. ನಾವು ಚೆನ್ನಾಗಿ ಆಡಿದ್ದರೆ, ಸತತ ನಾಲ್ಕು ಪಂದ್ಯಗಳನ್ನು ಸೋಲುತ್ತಿರಲಿಲ್ಲ" ಎಂದು ಗಂಭೀರ್ ಹೇಳಿದರು.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಜು ಸ್ಯಾಮ್ಸನ್, ಇದಾದ ಬಳಿಕ ಐರ್ಲೆಂಡ್ ಎದುರಿನ ಎರಡು ಟಿ20 ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇದಾದ ಬಳಿಕ ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲೂ ಸಂಜು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಇಂಗ್ಲೆಂಡ್ ಎದುರಿನ ಎರಡು ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಹೊರಗಿಟ್ಟು 15 ವರ್ಷದ ವೈಭವ್ ಸೂರ್ಯವಂಶಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ವೈಭವ್ ಸೂರ್ಯವಂಶಿ ಕೂಡಾ ಕಳೆದೆರಡು ಪಂದ್ಯ ದೊಡ್ಡ ಇನ್ನಿಂಗ್ಸ್ ಆಡಲು ವಿಫಲವಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.