
‘‘ನೀನು ಎಂದರೆ, ನಿಮ್ಮಪ್ಪ’’ ಎನ್ನುತ್ತಿದ್ದ ನಾಯಕ.. ಅವಮಾನವನ್ನು ಸಹಿಸದ ನಾಯಕ.. ನೆನಪಿದೆಯೇ ಆ ದೃಶ್ಯ..?
2002.. ಕ್ರಿಕೆಟ್ ಕಾಶಿ ಲಾರ್ಡ್ಸ್ ಪೆವಿಲಿಯನ್.. ಮೊಹಮ್ಮದ್ ಕೈಫ್ ಮತ್ತು ಜಹೀರ್ ಖಾನ್ ಭಾರತವನ್ನು ಗೆಲ್ಲಿಸುತ್ತಿದ್ದಂತೆ ದೇಹದ ಮೇಲಿದ್ದ ಜರ್ಸಿ ಬಿಚ್ಚಿ ಗಿರಗಿರ ತಿರುಗಿಸಿದ್ದ ದಾದಾ.. ಕ್ರಿಕೆಟ್ ಜಗತ್ತೇ ಅತ್ತ ತಿರುಗಿ ನೋಡುವಂತೆ ಸಂಭ್ರಮಿಸಿದ್ದ ಬಂಗಾಳದ ಮಹಾರಾಜ. ಭಾರತೀಯ ಕ್ರಿಕೆಟ್’ನ ಐಕಾನಿಕ್ ಕ್ಷಣಗಳಲ್ಲೊಂದು ಆ ದೃಶ್ಯ. ಅವತ್ತು ಸೌರವ್ ಗಂಗೂಲಿ ಹಾಗೆ ಮಾಡಲು ಕಾರಣವಿತ್ತು.
ಒಂದೇ ವರ್ಷದ ಹಿಂದೆ.. 2001ರಲ್ಲಿ ಭಾರತಕ್ಕೆ ಬಂದಿದ್ದ ಇಂಗ್ಲೆಂಡ್ ಇಲ್ಲಿ 6 ಪಂದ್ಯಗಳ ಏಕದಿನ ಸರಣಿಯನ್ನು ಸಮಬಲ ಮಾಡಿಕೊಂಡು ಹೋಗಿತ್ತು. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಪಂದ್ಯವನ್ನು ಗೆಲ್ಲುತ್ತಿದ್ದಂತೆ ಇಂಗ್ಲೆಂಡ್ ಅಲ್ರೌಂಡರ್ ಆ್ಯಂಡ್ರ್ಯೂ ಫ್ಲಿಂಟಾಫ್ ಮೈದಾನದಲ್ಲೇ ಜರ್ಸಿ ಬಿಚ್ಚಿ ಕುಣಿದಾಡಿದ್ದ.
ಬಂಗಾಳದ ಹುಲಿ ಕೆರಳಿತ್ತು. ದಾದಾ ಯಾವತ್ತಿಗೂ ‘ಕೊಟ್ಟದ್ದನ್ನು ವಾಪಸ್ ಕೊಡದೆ ಇರಲಾರ’. ಯಾವ ನೆಲದಲ್ಲಿ ಕ್ರಿಕೆಟ್ ಹುಟ್ಟಿತೋ ಅದೇ ನೆಲದಲ್ಲಿ ನಿಂತು ಜರ್ಸಿ ಬಿಚ್ಚಿ ಅಬ್ಬರಿಸಿಬಿಟ್ಟ ದಾದಾ.
ಬಂಗಾಳದ ಮಹಾರಾಜನ ನಡಿಗೆಯಲ್ಲೇ ರಾಜಗಾಂಭೀರ್ಯವಿರುತ್ತಿತ್ತು. ಆಡಲು ಅಲ್ಲ, ಆಳಲೆಂದೇ ಹುಟ್ಟಿದವನು ಅವನು. He is the face of fearless Indian Cricket. ಇತಿಹಾಸವನ್ನು ಬೆನ್ನತ್ತಿದವನಲ್ಲ, ಇತಿಹಾಸ ಬರೆದವನು ಬಂಗಾಳದ ದಾದಾ. ಗಂಗೂಲಿ ಎರಡು ಹೆಜ್ಜೆ ಮುಂದೆ ನುಗ್ಗಿದನೆಂದರೆ ಎದುರಲ್ಲಿದ್ದ ಬೌಲರ್ ಹೆಜ್ಜೆ ಹಿಂದಿಡಲೇಬೇಕು. ಸೌರವ್ ಸಿಕ್ಸರ್ ಬಾರಿಸುತ್ತಿದ್ದ ಪರಿಯೇ ಅದ್ಭುತ. 90ರ ದಶಕದಿಂದೀಚೆಗೆ ಭಾರತೀಯ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಎಡಗೈ ದಾಂಡಿಗ ಸೌರವ್ ಗಂಗೂಲಿ. ಅತಿಶಯೋಕ್ತಿಯಲ್ಲ ಇದು.
ಯುವರಾಜ್ ಸಿಂಗ್ ಆಗಮನಕ್ಕೂ ಮುನ್ನ ಕಣ್ಣು ಕುಕ್ಕುವ ರೀತಿಯಲ್ಲಿ ಚೆಂಡನ್ನು ಲೀಲಾಜಾಲವಾಗಿ ಸಿಕ್ಸರ್’ಗಟ್ಟುತ್ತಿದ್ದವನು ದಾದಾ. ದಾಖಲೆಗಳು ವ್ಯಕ್ತಿಗಷ್ಟೇ ಕೀರ್ತಿ ತಂದು ಕೊಡುತ್ತವೆ. ಪಂದ್ಯ ಗೆಲ್ಲಿಸುವುದು ಯಾವತ್ತೂ ಮ್ಯಾಚ್ ವಿನ್ನರ್’ಗಳೇ. ಸೌರವ್ ಗಂಗೂಲಿ ಕಟ್ಟಿದ ತಂಡದ ಯಶಸ್ಸಿನ ಮೂಲ ಮಂತ್ರ ಅದೇ ಮ್ಯಾಚ್ ವಿನ್ನರ್’ಗಳು. ಜಹೀರ್ ಖಾನ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್’ರಂಥಾ ಮ್ಯಾಚ್ ವಿನ್ನರ್’ಗಳನ್ನು ಬೆಳೆಸಿದ್ದ ಸೌರವ್ ಗಂಗೂಲಿ ಭಾರತ ತಂಡದಲ್ಲಿ ಹೊಸ ಹುಡುಗರ ಪಾಲಿಗೆ ನಿಜಕ್ಕೂ ದಾದಾನಂತಿದ್ದವನು.
2000ನೇ ಇಸವಿಯಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ಬೆನ್ನಲ್ಲೇ ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ಭಾರತ ತಂಡದಲ್ಲಿದ್ದರು. ಜಾವಗಲ್ ಶ್ರೀನಾಥ್ ಮಾಡಿದ ಒಂದೇ ಒಂದು ಫೋನ್ ಕಾಲ್’ಗೆ ಜಹೀರ್ ಖಾನ್ ದಾದಾ ಗರಡಿಗೆ ಬಂದು ಸೇರಿದ್ದ. ಒಂದೇ ನೋಟಕ್ಕೆ ಹರ್ಭಜನ್ ಸಿಂಗ್ ಟೀಮ್ ಇಂಡಿಯಾಗೆ ಮರಳಿದ್ದ. ಮಹೇಂದ್ರ ಸಿಂಗ್ ಧೋನಿ ಎಂಬ ಬ್ಯಾಟಿಂಗ್ ಸಿಡಿಲನ್ನು ಹುಡುಕಿ ತಂದವರೂ ಅವರೇ. ಧೋನಿ ಬಗ್ಗೆ ಗಂಗೂಲಿಗೆ ಬಂಗಾಳದ ಜೊತೆಗಾರ ಸಾಬಾ ಕರೀಮ್ ಹೇಳಿದ್ದರಂತೆ. ಒಂದು ದಿನ ಜೆಮ್ಶೆಡ್’ಪುರದಲ್ಲಿ ಧೋನಿ ಆಡುತ್ತಿದ್ದಾನೆ ಎಂಬ ಸುದ್ದಿ ಗಂಗೂಲಿ ಕಿವಿಗೆ ಬಿತ್ತು. ಕೋಲ್ಕತಾದಿಂದ ನೇರವಾಗಿ 283 ಕಿ.ಮಿ ದೂರದ ಜೆಮ್ಶೆಡ್’ಪುರಕ್ಕೆ ಹೊರಟೇ ಬಿಟ್ಟರು ಸೌರವ್. ನನ್ನ ಆಟವನ್ನು ನೋಡಲು ಸ್ವತಃ ಭಾರತ ತಂಡದ ನಾಯಕನೇ ಬಂದಿದ್ದಾನೆ ಎಂಬ ಸಣ್ಣ ಸುಳಿವೂ ಧೋನಿಗಿರಲಿಲ್ಲ. ಆ ದಿನ ಧೋನಿ ಬಾರಿಸಿದ ದೊಡ್ಡ ದೊಡ್ಡ ಸಿಕ್ಸರ್’ಗಳನ್ನು ನೋಡಿ ಸೌರವ್ ಗಂಗೂಲಿ ದಂಗಾಗಿ ಬಿಟ್ಟರು. ಕೆಲವೇ ದಿನಗಳ ಒಳಗೆ ಧೋನಿ ಭಾರತ ತಂಡದಲ್ಲಿದ್ದ.
ಪಂದ್ಯ ಗೆಲ್ಲಿಸಬಲ್ಲ ಆಟಗಾರ ಯಾವುದೇ ಮೂಲೆಯಲ್ಲಿರಲಿ.. ಸೌರವ್ ಗಂಗೂಲಿಯವರ ಹದ್ದಿನ ಕಣ್ಣುಗಳಿಗೆ ಬಿದ್ದರೆ ಆತ ನೇರವಾಗಿ ಭಾರತ ತಂಡದಲ್ಲಿರುತ್ತಿದ್ದ.
‘‘ಗಂಗೂಲಿಯಂಥಾ ನಾಯಕ ನನಗೆ ಸಿಕ್ಕಿದ್ದರೆ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 500 ವಿಕೆಟ್’ಗಳನ್ನು ಪಡೆಯುತ್ತಿದ್ದೆ’’ ಎಂದವನು ಪಾಕಿಸ್ತಾನದ ಶರವೇಗದ ಸರದಾರ, ರಾವಲ್ಪಿಂಡಿ ಎಕ್ಸ್’ಪ್ರೆಸ್ ಶೋಯೆಬ್ ಅಖ್ತರ್. ಹೌದು.. ಸೌರವ್ ಗಂಗೂಲಿ ಅಂಥಾ ನಾಯಕ.
ಏಕದಿನ ಕ್ರಿಕೆಟ್’ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿಯವರದ್ದು ಅದ್ಭುತ ಆರಂಭಿಕ ಜೋಡಿ. ವಸೀಂ ಅಕ್ರಂ, ವಕಾರ್ ಯೂನಿಸ್, ಶೇನ್ ವಾರ್ನ್, ಮುತ್ತಯ್ಯ ಮುರಳೀಧರ್, ಗ್ಲೆನ್ ಮೆಗ್ರಾತ್, ಅಲನ್ ಡೊನಾಲ್ಡ್, ಶಾನ್ ಪೊಲ್ಲಾಕ್, ಚಮಿಂಡ ವಾಸ್’ರಂತ ಶ್ರೇಷ್ಠರ ವಿರುದ್ಧ ಆಡಿ 26 ಏಕದಿನ ಶತಕಗಳ ಜೊತೆಯಾಟವಾಡಿದ್ದ ಜೋಡಿಯನ್ನು ಮುರಿದವನು ನಝಾಫ್’ಗಢದ ನವಾಬ ವೀರೇಂದ್ರ ಸೆಹ್ವಾಗ್ ಮತ್ತು ಅದಕ್ಕೆ ಬೆಂಬಲವಾಗಿ ನಿಂತವರು ಸ್ವತಃ ಸೌರವ್ ಗಂಗೂಲಿ!
‘‘ಜಗತ್ತೇ ನಿನಗೆ ಎದುರಾಗಿ ನಿಲ್ಲಲಿ. ನಾನಿದ್ದೇನೆ ನಿನ್ನ ಜೊತೆ’’ ಎಂದಿದ್ದರು ಗಂಗೂಲಿ. ಅಷ್ಟು ಸಾಕಿತ್ತು ನಝಾಫ್’ಗಢದ ಬೀಡುಬೀಸಿನ ಯುವಕನಿಗೆ. ‘‘ನನ್ನ ಜಾಗದಲ್ಲಿ ನೀನು ಆಡು..’’ ಎಂಥಾ ದೊಡ್ಡ ಮನಸ್ಸು.. ದೊಡ್ಡ ನಿರ್ಧಾರ..!. ‘‘ಇದು ನನ್ನ ಜಾಗ.. ಅದನ್ನು ಮತ್ತೊಬ್ಬನಿಗೆ ಬಿಟ್ಟು ಕೊಡಲಾರೆ’’ ಎಂದವರ ಮಧ್ಯೆ ಸ್ವಾರ್ಥವನ್ನು ಬದಿಗಿಟ್ಟು ಯೋಚಿಸುವವರಿಗೆ ಮಾತ್ರ ಇಂತಹ ಯೋಚನೆ ಬರಲು ಸಾಧ್ಯ..
ಭಾರತೀಯ ಕ್ರಿಕೆಟ್’ನ ಸರ್ವಶ್ರೇಷ್ಠ ನಾಯಕ ಯಾರು ಎಂದು ಕೇಳಿದರೆ, ಬಹುತೇಕರ ಆಯ್ಕೆ ಸೌರವ್ ಗಂಗೂಲಿ. ಆದರೆ ನನ್ನ ಪ್ರಕಾರ ಗಂಗೂಲಿ ನಾಯಕನೇ ಅಲ್ಲ.. ಅವನು ನೇತಾರ.. ಲೀಡರ್..! ಮ್ಯಾಚ್ ಫಿಕ್ಸಿಂಗ್ ಬಿರುಗಾಳಿಗೆ ಭಾರತೀಯ ಕ್ರಿಕೆಟ್’ನ ಅಸ್ತಿತ್ವವೇ ಅಲುಗಾಡುತ್ತಿದ್ದ ಸಮಯ. ತಲೆ ತಗ್ಗಿಸಿ ನಿಂತವರು ಗರ್ವದಿಂದ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದು ಗತ್ತು, ಗೌರತ್ತಿನ ನಾಯಕ ಸೌರವ್ ಗಂಗೂಲಿ. ‘‘ತವರಿನ ಹುಲಿ, ವಿದೇಶದಲ್ಲಿ ಇಲಿ..’’ ಬಾಲ್ಯದಲ್ಲಿ ಅದೆಷ್ಟು ಬಾರಿ ಇದನ್ನು ಕೇಳಿದ್ದೆವೋ. ವಿದೇಶಗಳಲ್ಲಿ.. ಅದರಲ್ಲೂ ಆಸ್ಟ್ರೇಲಿಯಾ, ಇಂಗ್ಲೆಂಡ್ ನೆಲಗಳಲ್ಲಿ ಭಾರತ ತಂಡ ಗೆಲ್ಲುವುದನ್ನೇ ಮರೆತಿದ್ದ ಕಾಲಘಟ್ಟ..
ತಂಡದಲ್ಲಿ ದಿಗ್ಗಜರೇ ಇದ್ದರು ನಿಜ. ಆದರೆ ನಮ್ಮದಲ್ಲದ ನೆಲಗಳಲ್ಲಿ ಗೆಲ್ಲುವುದು ಗೊತ್ತಿರಲಿಲ್ಲ. ಅಂಥಾ ತಂಡಕ್ಕೆ ಸಪ್ತಸಾಗರದಾಚೆ ಗೆಲ್ಲುವುದನ್ನು ಕಲಿಸಿಕೊಟ್ಟವರು ಸೌರವ್ ಗಂಗೂಲಿ.
ಯಾರ ಕೈಗೂ ದಾಳವಾಗದ, ಯಾರಿಗೂ ತಲೆ ಬಾಗದ ಸೌರವ್ ಗಂಗೂಲಿ ಕಲಿಸಿಕೊಟ್ಟದ್ದು ಸ್ವಾಭಿಮಾನದ ಆಟ...
ನನ್ನ ಇಷ್ಟದ ನಾಯಕನ ಜನ್ಮದಿನ ಇವತ್ತು. ಹುಟ್ಟುಹಬ್ಬದ ಶುಭಾಶಯಗಳು ದಾದಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.