
ಕೋಲ್ಕತಾ: ರೋಹಿತ್ ಶರ್ಮಾ ಅವರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿದ್ದರ ಹಿಂದೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕೈವಾಡವಿದೆ ಎಂದು ಮಾಜಿ ಭಾರತೀಯ ಆಟಗಾರ ಮನೋಜ್ ತಿವಾರಿ ಆರೋಪಿಸಿದ್ದಾರೆ. ರೋಹಿತ್ ಶರ್ಮಾ ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮೇಲೆ ಗಂಭೀರ್ ಪ್ರಭಾವ ಬೀರಿದ್ದಾರೆ ಎಂದು ಮನೋಜ್ ತಿವಾರಿ ಹೇಳಿದ್ದಾರೆ.
ರೋಹಿತ್ ಶರ್ಮಾ ಅವರನ್ನು ಬದಲಾಯಿಸಲು ನಿಜವಾದ ಕಾರಣವೇನೆಂದು ನನಗೆ ತಿಳಿದಿಲ್ಲ. ಅಗರ್ಕರ್ ಒಮ್ಮೆ ನಿರ್ಧಾರ ತೆಗೆದುಕೊಂಡರೆ, ಅದರಿಂದ ಹಿಂದೆ ಸರಿಯುವವರಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ ಆ ನಿರ್ಧಾರ ತೆಗೆದುಕೊಳ್ಳಲು ಅಗರ್ಕರ್ ಮೇಲೆ ಯಾರಾದರೂ ಒತ್ತಡ ಹಾಕಿದ್ದಾರೆಯೇ ಎಂದು ತಿಳಿಯಬೇಕಿದೆ. ಇದರ ಹಿಂದೆ ಸಾಕಷ್ಟು ಆಟಗಳು ನಡೆದಿವೆ. ವಿಷಯಗಳು ಒಂದಕ್ಕೆ ಒಂದು ಕೂಡಿದರೆ ಎರಡು ಎನ್ನುವಷ್ಟು ಸರಳವಾಗಿಲ್ಲ. ನಿರ್ಧಾರವನ್ನು ಅಗರ್ಕರ್ ತೆಗೆದುಕೊಂಡಿರಬಹುದು. ಆದರೆ ಅಗರ್ಕರ್‌ಗೆ ಒಬ್ಬರೇ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದಕ್ಕೂ ಮುನ್ನ ಅವರು ಗಂಭೀರ್ ಅವರ ಅಭಿಪ್ರಾಯವನ್ನು ಖಂಡಿತವಾಗಿಯೂ ಕೇಳಿರುತ್ತಾರೆ. ಇಲ್ಲದಿದ್ದರೆ, ಅಗರ್ಕರ್ ಸ್ವಂತವಾಗಿ ಅಂತಹ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ರೋಹಿತ್ ಶರ್ಮಾ ಅವರನ್ನು ಬದಲಾಯಿಸಿದ್ದಕ್ಕೆ ಅಗರ್ಕರ್ ಅವರಷ್ಟೇ ಗಂಭೀರ್ ಕೂಡ ಸಮಾನ ಜವಾಬ್ದಾರರು ಎಂದು ಮನೋಜ್ ತಿವಾರಿ 'ಸ್ಪೋರ್ಟ್ಸ್ ಟಾಕ್'ಗೆ ತಿಳಿಸಿದರು.
ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ರೀತಿಯನ್ನು ಮನೋಜ್ ತಿವಾರಿ ಪ್ರಶ್ನಿಸಿದ್ದಾರೆ. ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟ ರೋಹಿತ್‌ಗೆ ಅವಮಾನ ಮಾಡಿದಂತೆ ನನಗನಿಸಿತು. ರೋಹಿತ್ ಒಬ್ಬ ಸಾಬೀತಾದ ನಾಯಕ. ಹಾಗಾಗಿ ಈ ವಿಷಯವನ್ನು ಸ್ವಲ್ಪ ಹೆಚ್ಚು ಬುದ್ಧಿವಂತಿಕೆಯಿಂದ ನಿಭಾಯಿಸಬಹುದಿತ್ತು. 2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಆಡುತ್ತಾರೋ ಇಲ್ಲವೋ ಎಂದು ಜನರು ಈಗಲೂ ಏಕೆ ಅನುಮಾನಿಸುತ್ತಿದ್ದಾರೆ? ಅವರು ಮೂರು ದ್ವಿಶತಕಗಳನ್ನು ಗಳಿಸಿದಾಗ ಈ ಅನುಮಾನವಿರಲಿಲ್ಲ. ಇಷ್ಟು ದೊಡ್ಡ ಆಟಗಾರನನ್ನು, ನಾಯಕನಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ ಆಟಗಾರನನ್ನು ಬದಲಾಯಿಸುವ ಅಗತ್ಯವೇನಿತ್ತು ಎಂದು ಮನೋಜ್ ತಿವಾರಿ ಪ್ರಶ್ನಿಸಿದ್ದಾರೆ.
ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ನಂತರ ಏಕದಿನ ಪಂದ್ಯಗಳನ್ನು ನೋಡುವ ಆಸಕ್ತಿಯೇ ಹೊರಟುಹೋಯಿತು ಎಂದು ಮನೋಜ್ ತಿವಾರಿ ಹೇಳಿದರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇನ್ನೂ ತಂಡದಲ್ಲಿದ್ದರೂ, ನಾಯಕರಾಗಿದ್ದಾಗಿನ ಇದ್ದ ಬಾಡಿ ಲಾಂಗ್ವೇಜ್ ಈಗ ರೋಹಿತ್‌ಗೆ ಇಲ್ಲ. ಬೌಲರ್‌ಗಳಿಗೆ ಸೂಚನೆ ನೀಡುವುದು, ಫೀಲ್ಡರ್‌ಗಳನ್ನು ಬೈಯ್ಯುವುದು ಮಾಡುತ್ತಿದ್ದ ಹಳೆಯ ರೋಹಿತ್ ಈಗ ಎಲ್ಲೂ ಕಾಣಿಸುತ್ತಿಲ್ಲ ಎಂದು ತಿವಾರಿ ಹೇಳಿದರು.
ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ಯುವ ಕ್ರಿಕೆಟಿಗ ಶುಭ್‌ಮನ್ ಗಿಲ್‌ಗೆ ಭಾರತ ಏಕದಿನ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಭಾರತ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೋಹಿತ್ ಶರ್ಮಾ ಮುಂಬರುವ 2027ರ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದು, ಆರಂಭಿಕನಾಗಿ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.