
ಢಾಕಾ: ಬಾಂಗ್ಲಾದೇಶ ಕ್ರಿಕೆಟ್‌ನ ಬಿಕ್ಕಟ್ಟು ಈಗ ಮತ್ತೊಂದು ಹಂತ ತಲುಪಿದೆ. ಐಪಿಎಲ್‌ನ ಕೋಲ್ಕತಾ ತಂಡದಿಂದ ಮುಸ್ತಾಫಿಜುರ್ ರಹ್ಮಾನ್‌ರನ್ನು ಕೈಬಿಟ್ಟ ವಿಚಾರಕ್ಕೆ ಬಿಸಿಸಿಐ ವಿರುದ್ಧ ತೊಡೆ ತಟ್ಟಿದ್ದ ಬಾಂಗ್ಲಾ ಕ್ರಿಕೆಟ್ ಮಂಡಳಿ(ಬಿಸಿಬಿ) ಈಗ ತನ್ನದೇ ಆಟಗಾರರಿಂದ ಪ್ರತಿಭಟನೆ, ಬಹಿಷ್ಕಾರದ ಬಿಸಿ ಎದುರಿಸುತ್ತಿದೆ.
ಬಾಂಗ್ಲಾ ಆಟಗಾರರ ಬಗ್ಗೆ ಬಿಸಿಬಿ ನಿರ್ದೇಶಕ, ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಇಸ್ಲಾಂ ನೀಡಿದ್ದ ವಿವಾದಾತ್ಮಕ ಹೇಳಿಕೆ ಖಂಡಿಸಿ ಗುರುವಾರ ಬಾಂಗ್ಲಾ ಕ್ರಿಕೆಟಿಗರು ಬಾಂಗ್ಲಾ ಪ್ರೀಮಿಯರ್ ಲೀಗ್ ಆಡಲು ನಿರಾಕರಿಸಿದರು. ಅವರನ್ನು ಹುದ್ದೆಯಿಂದ ವಜಾಗೊಳಿಸದಿದ್ದರೆ ಮೈದಾನಕ್ಕೆ ಇಳಿಯುವುದಿಲ್ಲ ಎಂದು ಎಚ್ಚರಿಸಿದ್ದರು. ಇದರ ಪರಿಣಾಮ ಗುರುವಾರ ನಡೆಯಬೇಕಿದ್ದ ಎರಡೂ ಪಂದ್ಯಗಳು ಮುಂದೂಡಿಕೆಯಾಗಿವೆ.
ಗುರುವಾರ ಉಭಯ ತಂಡಗಳ ಆಟಗಾರರು ಹಾಗೂ ಬಾಂಗ್ಲಾ ಕ್ರಿಕೆಟಿಗರ ಕಲ್ಯಾಣ ಸಂಘ ಪತ್ರಿಕಾಗೋಷ್ಠಿ ನಡೆಸಿತು. ಆಟಗಾರರನ್ನು ಅವಮಾನಿಸಿರುವ ನಜ್ಮುಲ್‌ರನ್ನು ವಜಾಗೊಳಿಸಲು ಒತ್ತಾಯಿಸಿತು. ಆಟಗಾರರು ಕೂಡಾ ಮೈದಾನಕ್ಕೆ ಆಗಮಿಸಲಿಲ್ಲ. ಇದರ ಬೆನ್ನಲ್ಲೇ ಎಚ್ಚೆತ್ತ ಬಿಸಿಬಿ, ನಜ್ಮುಲ್‌ರನ್ನು ಹಣಕಾಸು ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದೆ. ಆದರೆ ಅವರು ಇನ್ನೂ ನಿರ್ದೇಶಕ ಸ್ಥಾನದಲ್ಲಿ ಉಳಿದಿದ್ದಾರೆ ಎಂದು ವರದಿಯಾಗಿದೆ.
ಮುಸ್ತಾಫಿಜುರ್ ರಹ್ಮಾನ್‌ರನ್ನು ಐಪಿಎಲ್‌ನಿಂದ ಹೊರಗಿಟ್ಟಿದ್ದಕ್ಕೆ ಬಾಂಗ್ಲಾ ತಂಡ ಭಾರತದಲ್ಲಿ ಟಿ20 ವಿಶ್ವಕಪ್ ಆಡಲು ನಿರಾಕರಿಸುತ್ತಿದೆ. ಈ ನಡುವೆ ಹೇಳಿಕೆ ನೀಡಿದ್ದ ನಜ್ಮುಲ್, ಬಾಂಗ್ಲಾ ಕ್ರಿಕೆಟಿಗರು ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ. ಟಿ20 ವಿಶ್ವಕಪ್‌ನಿಂದ ಬಾಂಗ್ಲಾ ಹಿಂದಕ್ಕೆ ಸರಿದರೆ ಅದರಿಂದ ಮಂಡಳಿಗೆ ನಷ್ಟವಿಲ್ಲ. ಆದರೆ ಆಟಗಾರರಿಗೆ ಸಂಭಾವನೆ ಸಿಗುವುದಿಲ್ಲ ಎಂದಿದ್ದರು. ಅಲ್ಲದೆ, ಮಾಜಿ ಕ್ರಿಕೆಟಿಗ ತಮೀಮ್ ಇಕ್ಬಾಲ್‌ರನ್ನು ಭಾರತದ ಏಜೆಂಟ್ ಎಂದು ಕರೆದಿದ್ದರು. ಇದು ಆಟಗಾರರನ್ನು ಕೆರಳಿಸಿದೆ.
ನಜ್ಮುಲ್‌ರನ್ನು ಹಣಕಾಸು ಸಮಿತಿ ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸಲಾಗಿದ್ದರೂ, ಆಟಗಾರರು ಲಿಖಿತ ಭರವಸೆಗಾಗಿ ಕಾಯುತ್ತಿದ್ದಾರೆ, ಇದು ಬಾಂಗ್ಲಾ ಪ್ರೀಮಿಯರ್ ಲೀಗ್ ಭವಿಷ್ಯವನ್ನು ಅನಿಶ್ಚಿತಗೊಳಿಸಿದೆ. ಆಟಗಾರರು ಪ್ರತಿಭಟನೆ ಮುಂದುವರಿಸಿದರೆ ಇಡೀ ಲೀಗ್ ರದ್ದುಗೊಳ್ಳುವ ಭೀತಿ ಎದುರಾಗಿದೆ. ಲೀಗ್‌ನಲ್ಲಿ ಈಗ 24 ಪಂದ್ಯಗಳು ನಡೆದಿವೆ. ಜ.23ರ ವರೆಗೂ ಪಂದ್ಯಗಳು ನಡೆಯಬೇಕಿವೆ.
ಫ್ಯಾನ್ಸ್ ದಾಂಧಲೆ
ಗುರುವಾರದ 2 ಪಂದ್ಯಗಳು ಮುಂದೂಡಿಕೆಯಾಗಿದ್ದರಿಂದ ಅಭಿಮಾನಿಗಳು ಕ್ರೀಡಾಂಗಣದ ಹೊರಗಡೆ ದಾಂಧಲೆ ನಡೆಸಿದರು. ಫ್ಲೆಕ್ಸ್‌ಗಳನ್ನು ಹರಿದು, ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು, ಜೈಕಾರ ಕೂಗಿ ಆಕ್ರೊಶ ವ್ಯಕ್ತಪಡಿಸಿದರು. ಕೆಲವು ಕಡೆಗಳನ್ನು ರಸ್ತೆ ತಡೆ ಕೂಡಾ ನಡೆಸಿದರು.
ಐಸಿಸಿ ಮನವಿಗೂ ಬಗ್ಗದ ಬಾಂಗ್ಲಾ, ಭಾರತಕ್ಕೆ ಹೋಗಲ್ಲ ಎಂದು ಪಟ್ಟು
ಢಾಕಾ/ದುಬೈ: ಟಿ20 ವಿಶ್ವಕಪ್‌ನಲ್ಲಿ ತನ್ನ ಪಂದ್ಯಗಳನ್ನು ಭಾರತದಲ್ಲಿ ಆಡುವುದಿಲ್ಲ ಎನ್ನುವ ನಿಲುವಿಗೆ ಬದ್ಧ ಎಂದು ಬಾಂಗ್ಲಾದೇಶ ಪುನರುಚ್ಚರಿಸಿದೆ. ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಹಾಗೂ ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ) ನಡುವೆ ಆನ್‌ಲೈನ್ ಸಭೆ ನಡೆಯಿತು. ಈ ಸಭೆಯಲ್ಲಿ ಐಸಿಸಿ, ‘ಭಾರತದಲ್ಲಿ ಯಾವುದೇ ಭದ್ರತಾ ಸಮಸ್ಯೆ ಇಲ್ಲ. ಈಗಾಗಲೇ ವೇಳಾಪಟ್ಟಿ ಪ್ರಕಟಗೊಂಡಿದ್ದು ಸಿದ್ಧತೆ ನಡೆದಿದೆ. ಭಾರತಕ್ಕೆ ಹೋಗಿ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಿ’ ಎಂದು ಮನವಿ ಸಲ್ಲಿಸಿತು ಎನ್ನಲಾಗಿದೆ. ಆದರೆ ಇದಕ್ಕೆ ಒಪ್ಪದ ಬಿಸಿಬಿ, ‘ನಾವು ಭಾರತಕ್ಕೆ ಹೋಗುವುದಿಲ್ಲ ಎನ್ನುವ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಮಗೆ ಸ್ವಾಭಿಮಾನ ಬಹಳ ಮುಖ್ಯ. ನಮ್ಮ ಮನವಿ ಬಗ್ಗೆ ಮತ್ತೊಮ್ಮೆ ಸಭೆ ನಡೆಸಿ ಚರ್ಚಿಸುವುದಾಗಿ ಐಸಿಸಿ ತಿಳಿಸಿದೆ’ ಎಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.