
5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ ರೋಹಿತ್ ಶರ್ಮಾ ಒಂದು ಕಡೆ. ಮತ್ತೊಂದೆಡೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಚೊಚ್ಚಲ ಬಾರಿಗೆ ಕಪ್ ಗೆಲ್ಲಿಸಿಕೊಟ್ಟ ಹಾರ್ದಿಕ್ ಪಾಂಡ್ಯ. ಇಲ್ಲಿ ರೋಹಿತ್ಗೆ ಆರಂಭದಿಂದಲೂ ಸಿಕ್ಕ ಆಟಗಾರರ ಬೆಂಬಲ, ಸಮನ್ವಯ ಮತ್ತು ಆಂತರಿಕ ಸಂವಹನ ಇಡೀ ತಂಡವನ್ನು ಸ್ಪೋರ್ಟಿವ್ ಆಗಿ ಇಟ್ಟಿತ್ತು. ಅದೇ ಕಾರಣಕ್ಕೆ ಮುಂಬೈ 5 ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿತು ಎಂಬುದರಲ್ಲಿ ಎರಡು ಮಾತಿಲ್ಲ. ಇದು ಒತ್ತಟ್ಟಿಗಿರಲಿ. ಅದೇ ಜಿಟಿ ತಂಡ ಪಾಂಡ್ಯ ನಾಯಕತ್ವದಲ್ಲಿ ಚೊಚ್ಚಲ ಕಪ್ ಗೆದ್ದುಕೊಂಡಿತ್ತು. ತದನಂತರ ಮುಂಬೈಗೆ ಮರಳಿದ ಮೇಲೆ ಏನಾಯಿತು ಎನ್ನುವುದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ. ಪಾಂಡ್ಯ ಜೀರೋದಿಂದ ಬಂದು ಯಶಸ್ವಿಯಾದ ಆಲ್ರೌಂಡರ್ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಆದರೆ, ಇಷ್ಟೆಲ್ಲಾ ಅರ್ಹತೆ ಇದ್ದರೂ ರೋಹಿತ್ಗೆ ಸಿಕ್ಕ ಬೆಂಬಲ ಪಾಂಡ್ಯಗೆ ಯಾಕೆ ಸಿಗಲಿಲ್ಲ? ಹಾರ್ದಿಕ್ ಅವರನ್ನು ನುಂಗಿದ್ದು 'ನಾನು' ಎನ್ನುವ ಅಹಂ? ಅಥವಾ ಮ್ಯಾನೇಜ್ಮೆಂಟ್ ಎಡವಟ್ಟಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
2013ರಲ್ಲಿ ರಿಕಿ ಪಾಂಟಿಂಗ್ ಸ್ವಯಂಪ್ರೇರಣೆಯಿಂದ ನಾಯಕತ್ವ ಬಿಟ್ಟುಕೊಟ್ಟಾಗ ರೋಹಿತ್ಗೆ ಹಿರಿಯ ಆಟಗಾರರ ಸಂಪೂರ್ಣ ಬೆಂಬಲ ಸಿಕ್ಕಿತ್ತು. ತಂಡದೊಳಗಿನ ಮುಕ್ತ ಸಂವಹನ ಮತ್ತು 'ನಾವು' ಎಂಬ ಒಗ್ಗಟ್ಟಿನ ಮಂತ್ರವೇ ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ ಆಗಲು ಕಾರಣವಾಯಿತು. ಅದೇ 2022ರಲ್ಲಿ ಹೊಸ ತಂಡವಾಗಿದ್ದ ಗುಜರಾತ್ ಟೈಟಾನ್ಸ್ ತಂಡವನ್ನು ಮೊದಲ ಪ್ರಯತ್ನದಲ್ಲೇ ಚಾಂಪಿಯನ್ ಮಾಡಿ, 2023ರಲ್ಲಿ ಫೈನಲ್ಗೆ ಕೊಂಡೊಯ್ಯುವ ಮೂಲಕ ಹಾರ್ದಿಕ್ ಪಾಂಡ್ಯ ತಮ್ಮ ನಾಯಕತ್ವದ ತಾಕತ್ತನ್ನು ಸಾಬೀತುಪಡಿಸಿದ್ದರು. ಆದರೆ ಮುಂದೆ ಆಗಿದ್ದು ಬೇರೆನೆ.
ಐದು ಟ್ರೋಫಿ ಗೆದ್ದಿದ್ದ ರೋಹಿತ್ ಶರ್ಮಾ ಅವರನ್ನು ಏಕಾಏಕಿ ಕೆಳಗಿಳಿಸಿ, ಹಾರ್ದಿಕ್ಗೆ ನಾಯಕತ್ವ ನೀಡಿದ ರೀತಿ ಅಭಿಮಾನಿಗಳು ಮತ್ತು ತಂಡದ ಹಿರಿಯ ಆಟಗಾರರಿಗೆ ಇಷ್ಟವಾಗಲಿಲ್ಲ. ಈ ಹಸ್ತಾಂತರ ಪ್ರಕ್ರಿಯೆ ಮ್ಯಾನೇಜ್ಮೆಂಟ್ ಸರಿಯಾಗಿ ನಿಭಾಯಿಸಲಿಲ್ಲ. ಅಲ್ಲದೇ ಮುಂಬೈ ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಅವರಂತಹ ದಿಗ್ಗಜರಿದ್ದರು. ಗುಜರಾತ್ ತಂಡದಲ್ಲಿ ಹೊಸ ಆಟಗಾರರನ್ನು ನಿಭಾಯಿಸಿದಂತೆ, ಮುಂಬೈನ ಹಿರಿಯ ಆಟಗಾರರ ವಿಶ್ವಾಸ ಗಳಿಸಿ ಒಟ್ಟಾಗಿ ಕರೆದೊಯ್ಯುವಲ್ಲಿ ಪಾಂಡ್ಯ ಎಡವಿದರು ಎನ್ನುವುದು ಮೇಲ್ನೊಟಕ್ಕೆ ಕಂಡರು ಅದೇ ಸತ್ಯ.
ಸ್ವಂತ ತವರಿನ ಕ್ರೀಡಾಂಗಣದಲ್ಲೇ ಅಭಿಮಾನಿಗಳು ಹಾರ್ದಿಕ್ ವಿರುದ್ಧ ಘೋಷಣೆ ಕೂಗಿದ್ದು ಮತ್ತು ಸಾಮಾಜಿಕ ಜಾಲತಾಣಗಳ ಟ್ರೋಲ್ಗಳು ಅವರ ಆತ್ಮವಿಶ್ವಾಸ ಕುಗ್ಗಿಸಿ, ಮೈದಾನದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಿತು. ಅಭಿಮಾನಿಗಳ ಆಕ್ರೋಶ ಮತ್ತು ತಂಡದೊಳಗಿನ ಗೊಂದಲ ತಾರಕಕ್ಕೇರಿದಾಗ, ಟೀಂ ಮ್ಯಾನೇಜ್ಮೆಂಟ್ ನಾಯಕನ ಬೆನ್ನಿಗೆ ಗಟ್ಟಿಯಾಗಿ ನಿಂತು ಪರಿಸ್ಥಿತಿ ತಿಳಿಗೊಳಿಸುವಲ್ಲಿ ವಿಫಲವಾಯಿತು. ಇದರಿಂದ ಪಾಂಡ್ಯ ಅಕ್ಷರಶಃ ಏಕಾಂಗಿಯಾದರು.
ನಾಯಕತ್ವದಲ್ಲಿ ಹಿನ್ನಡೆಯಾದರೂ, ಒಬ್ಬ ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಸಾಮರ್ಥ್ಯಕ್ಕೆ ಸರಿಸಾಟಿಯಿಲ್ಲ. 2024, 2026ರ ಟಿ20 ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಗೆಲುವಿಗೆ ಅವರು ನೀಡಿದ ಆಟವೇ ಇದಕ್ಕೆ ಸಾಕ್ಷಿ. ಇನ್ನು ರೋಹಿತ್ ಶರ್ಮಾ ಮೈದಾನದಲ್ಲಿ ಸಹ ಆಟಗಾರರ ಸಲಹೆಗಳಿಗೆ ಕಿವಿಗೊಟ್ಟು, ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸುತ್ತಿದ್ದರು. ಇದಕ್ಕೆ ತದ್ವಿರುದ್ಧವಾಗಿ, ಪಾಂಡ್ಯ ಅವರ ಆಕ್ರಮಣಕಾರಿ ಮತ್ತು ಏಕಪಕ್ಷೀಯ ನಿರ್ಧಾರಗಳು ಹಿರಿಯ ಆಟಗಾರರಲ್ಲಿ ಅಸಮಾಧಾನ ಮೂಡಿಸಿದವು ಎನ್ನುವುದಕ್ಕೆ ಹಲವಾರು ಸನ್ನಿವೇಶಗಳ ಉದಾಹರಣೆಗಳಿವೆ.
ರೋಹಿತ್ ನಾಯಕತ್ವದಲ್ಲಿ ಬುಮ್ರಾ, ಹಾರ್ದಿಕ್, ಸೂರ್ಯಕುಮಾರ್ ಮತ್ತು ತಿಲಕ್ ವರ್ಮಾ ಅವರಂತಹ ಯುವ ಪ್ರತಿಭೆಗಳು ಭದ್ರತೆಯ ಭಾವನೆಯಿಂದ ಬೆಳೆದರು. ಆದರೆ ಪಾಂಡ್ಯ ನಾಯಕತ್ವದಲ್ಲಿ ಪದೇ ಪದೇ ಆಡುವ ಹನ್ನೊಂದರ ಬಳಗ ಬದಲಾದ ಕಾರಣ ಯುವ ಆಟಗಾರರಲ್ಲಿ ಅಭದ್ರತೆ ಕಾಡಿತು. ಗುಜರಾತ್ ಟೈಟಾನ್ಸ್ನಲ್ಲಿ ಆಶಿಶ್ ನೆಹ್ರಾ ಅವರಂತಹ ಕೋಚ್ ಜೊತೆ ಪಾಂಡ್ಯ ಉತ್ತಮ ಹೊಂದಾಣಿಕೆ ಹೊಂದಿದ್ದರು. ಆದರೆ ಮುಂಬೈ ಇಂಡಿಯನ್ಸ್ನ ಕೋಚಿಂಗ್ ಸಿಬ್ಬಂದಿ ಮತ್ತು ಅನಾಲಿಟಿಕ್ಸ್ ತಂಡದ ಸಲಹೆಗಳಿಗೂ, ಪಾಂಡ್ಯ ಅವರ ಮೈದಾನದ ನಿರ್ಧಾರಗಳಿಗೂ ತಾಳೆಯಾಗದಿರುವುದು ತಂಡದ ಲಯ ತಪ್ಪಿಸಿತು. ತಂಡದ ಪ್ರತಿಯೊಂದು ಜವಾಬ್ದಾರಿಯನ್ನೂ ತಾವೇ ಹೊತ್ತುಕೊಳ್ಳಲು ಹೋಗಿ ಪಾಂಡ್ಯ ಅನಗತ್ಯ ಒತ್ತಡಕ್ಕೆ ಸಿಲುಕಿದರು. ನಾಯಕನ ಈ ವೈಯಕ್ತಿಕ ವೈಫಲ್ಯವು ಇಡೀ ತಂಡದ ಆತ್ಮವಿಶ್ವಾಸದ ಮೇಲೆ ನೇರ ಪರಿಣಾಮ ಬೀರಿತು. ಈ ನಿಟ್ಟಿನಲ್ಲಿ ಪಾಂಡ್ಯ ಶ್ರೇಷ್ಠ ಆಟಗಾರ ಅದರಲ್ಲಿ ಎರಡೂ ಮಾತಿಲ್ಲ. ಆದರೆ, ಆಂತರಿಕ ಸಮನ್ವಯ, ನಾನು ಎನ್ನುವ ಅಹಂ, ಮ್ಯಾನೇಜ್ಮೆಂಟ್ನ ತರಾತುರಿ ನಿರ್ಧಾರ ಇವೆಲ್ಲವೂ ಪಾಂಡ್ಯರನ್ನು ಏಕಾಂಗಿಯಾಗಿರಿಸಲು ಒಟ್ಟಾಗಿ ಕಟ್ಟಿ ಹಾಕಿದವು. ಇನ್ನು ಪಂಜಾಬ್ ತಂಡದಲ್ಲಿನ ಇವರ ವರ್ತನೆ ಮೇಲೆ ಎಲ್ಲರ ಕಣ್ಣಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.