
ದುಬೈ(ಏ.15): ಭಾರತೀಯ ಬುಕಿಯೊಬ್ಬನ ಜೊತೆ ಸಂಪರ್ಕ ಹೊಂದಿದ್ದರ ಜೊತೆಗೆ, ಆತನೊಂದಿಗೆ ಐಪಿಎಲ್ ಸೇರಿದಂತೆ ಅನೇಕ ಟೂರ್ನಿಗಳ ಮಾಹಿತಿಯನ್ನು ಹಂಚಿಕೊಂಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ, ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀಥ್ ಸ್ಟ್ರೀಕ್‌ರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) 8 ವರ್ಷಗಳ ಕಾಲ ಕ್ರಿಕೆಟ್ ಚಟುವಟಿಕೆಗಳಿಂದ ನಿಷೇಧಗೊಳಿಸಿದೆ.
‘ಮಿಸ್ಟರ್ ಎಕ್ಸ್’(ಬುಕಿ) ಜೊತೆ ಸ್ಟ್ರೀಕ್, 15 ತಿಂಗಳಿಗೂ ಹೆಚ್ಚು ಸಮಯ ಸಂಪರ್ಕದ್ದಲ್ಲಿದ್ದರು. ಜೊತೆಗೆ ಆತನಿಂದ 2 ಬಿಟ್ ಕಾಯಿನ್ (ತಲಾ 35000 ಡಾಲರ್ ಮೌಲ್ಯ), ಒಂದು ಐಫೋನ್ ಉಡುಗೊರೆಯಾಗಿ ಪಡೆದಿದ್ದರು ಎನ್ನುವುದನ್ನು ಐಸಿಸಿ ಭ್ರಷ್ಟಾಚಾರ ನಿಗ್ರಹ ದಳದಿಂದ ಮುಚ್ಚಿಟ್ಟಿದ್ದರು. ಐಸಿಸಿ ವಿಚಾರಣೆ ವೇಳೆ ಸ್ಟ್ರೀಕ್ ತಪ್ಪೊಪ್ಪಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್)ನಲ್ಲಿ ಮೂವರು ಆಟಗಾರರನ್ನು ಬುಕಿಗೆ ಪರಿಚಯಿಸಿದ್ದ ಸ್ಟ್ರೀಕ್, ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಟಿ20 ಲೀಗ್‌ಗಳಲ್ಲೂ ತಂಡದ ಡ್ರೆಸ್ಸಿಂಗ್ ರೂಮ್ ಮಾಹಿತಿಗಳನ್ನು ಬುಕ್ಕಿಯೊಂದಿಗೆ ಹಂಚಿಕೊಂಡಿದ್ದರು. ಈ ಲೀಗ್‌ಗಳಲ್ಲಿ ಸ್ಟ್ರೀಕ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಐಪಿಎಲ್‌ನಲ್ಲಿ ಕೆಕೆಆರ್‌ನ ಬೌಲಿಂಗ್ ಆಗಿದ್ದ ವೇಳೆ, 2018ರಲ್ಲಿ ನಡೆದಿದ್ದ ಜಿಂಬಾಬ್ವೆ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ತ್ರಿಕೋನ ಸರಣಿ ವೇಳೆಯೂ ಮಾಹಿತಿ ಹಂಚಿಕೆ ನಡೆದಿತ್ತು ಎಂದು ತಿಳಿದುಬಂದಿದೆ.
ಐಸಿಸಿ ಏಕದಿನ ರ‍್ಯಾಂಕಿಂಗ್: ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಬಾಬರ್ ಅಜಂ
2017ರಲ್ಲಿ ಬುಕಿ ಜೊತೆ ಸಂಪರ್ಕಕ್ಕೆ ಬಂದಿದ್ದ ಸ್ಟ್ರೀಕ್, ಜಿಂಬಾಬ್ವೆಯಲ್ಲಿ ಟಿ20 ಲೀಗ್ ಆರಂಭಿಸಲು ಸಹಾಯ ಮಾಡುವಂತೆ ಆತನ ಮನವಿಗೆ ಒಪ್ಪಿದ್ದರು. ಹೊರ ದೇಶದಲ್ಲಿರುವ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಬುಕಿ ಜೊತೆ ಹಂಚಿಕೊಂಡಿದ್ದ ಸ್ಟ್ರೀಕ್, ವಿವಿಧ ಲೀಗ್‌ಗಳ ಡ್ರೆಸ್ಸಿಂಗ್ ರೂಮ್ ಮಾಹಿತಿಯನ್ನು ನೀಡಲು ಸಹ ಒಪ್ಪಿದ್ದರು.
ಐಸಿಸಿ ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ್ದ ವಿಚಾರಣೆ ವೇಳೆ ಯಾವ ರೀತಿ ಹೇಳಿಕೆಗಳನ್ನು ನೀಡಬೇಕು ಎಂದು ಬುಕಿಯಿಂದ ಸಲಹೆ ಪಡೆದಿದ್ದರು ಎನ್ನುವುದ ಸಹ ತಿಳಿದುಬಂದಿದೆ. ಭ್ರಷ್ಟಾಷಾರ, ಮಾಹಿತಿ ಮುಚ್ಚಿಟ್ಟಿದ್ದು, ಆಟಗಾರರು, ಕೋಚ್ ಇಲ್ಲವೇ ತಂಡದ ಮಾಲಿಕರಿಗೆ ಭ್ರಷ್ಟಾಚಾರದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿದ್ದು ಸೇರಿ ಒಟ್ಟು 5 ನಿಯಮಗಳನ್ನು ಸ್ಟ್ರೀಕ್ ಮುರಿದಿರುವುದಾಗಿ ಐಸಿಸಿ ತಿಳಿಸಿದೆ. 2029ರಲ್ಲಿ ಸ್ಟ್ರೀಕ್ ಪುನಃ ಕ್ರಿಕೆಟ್ ಚಟುವಟಿಕೆಗೆ ಹಿಂದಿರುಗಬಹುದಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.