"ಪಾಕಿಸ್ತಾನ ಕ್ರಿಕೆಟ್ ತಂಡವು ಯಾವ ಲೆವೆಲ್‌ನಲ್ಲಿದೆ ಎಂದು ಎಲ್ಲರಿಗೂ ಗೊತ್ತಿದೆ. ನಾವು ಸಣ್ಣಪುಟ್ಟ ದೇಶಗಳೆನಿಸಿರುವ ಐರ್ಲೆಂಡ್ ಎದುರು ಸೋಲುವುದನ್ನು ನೋಡಿದಾಗ ಮೈಕಲ್ ವಾನ್ ಅವರು ಹೇಳಿದ ಮಾತು ಸರಿ ಎನಿಸುತ್ತಿದೆ. ಇಂಗ್ಲೆಂಡ್ ತಂಡವು ಒಂದು ವೇಳೆ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಅಥವಾ ಭಾರತ ಎದುರು ಸರಣಿ ಆಡಿದ್ದರೆ, ವಾನ್ ಹೀಗೆ ಹೇಳುತ್ತಿರಲಿಲ್ಲ" ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ.
ಇಸ್ಲಾಮಾಬಾದ್: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿರುವ ಸಂದರ್ಭದಲ್ಲಿಯೇ, ಟಿ20 ವಿಶ್ವಕಪ್ ಟೂರ್ನಿಯ ಸಿದ್ದತೆಗಾಗಿ ಇಂಗ್ಲೆಂಡ್ ತಂಡದ ಆಟಗಾರರು ಐಪಿಎಲ್ ತೊರೆದು ತಮ್ಮ ರಾಷ್ಟ್ರೀಯ ತಂಡ ಕೂಡಿಕೊಂಡಿದ್ದರು. ಐಪಿಎಲ್ ನಿರ್ಣಾಯಕ ಘಟ್ಟದಲ್ಲಿರುವಾಗಲೇ ಇಂಗ್ಲೆಂಡ್ ಆಟಗಾರರು ಜಗತ್ತಿನ ಪ್ರತಿಷ್ಠಿತ ಟಿ20 ಲೀಗ್ ತೊರೆದು, ಪಾಕಿಸ್ತಾನ ಎದುರು ಟಿ20 ಸರಣಿಯನ್ನಾಡಲು ತೆರಳಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಇನ್ನು ಸ್ವತಃ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಕೂಡಾ, ಇಂಗ್ಲೆಂಡ್ ಆಟಗಾರರು ಹಾಗೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಿರ್ಧಾರವನ್ನು ಟೀಕಿಸಿದ್ದರು. 'ಪಾಕಿಸ್ತಾನ ಎದುರಿನ ಟಿ20 ಸರಣಿ ಆಡುವುದಕ್ಕಿ, ಭಾರತದಲ್ಲಿ ಇಂಗ್ಲೆಂಡ್ ಆಟಗಾರರು ಐಪಿಎಲ್ ಆಡಿದ್ದರೆ ಚೆನ್ನಾಗಿ ಇರುತ್ತಿತ್ತು. ಯಾಕೆಂದರೆ ಸಾಕಷ್ಟು ದೊಡ್ಡ ಸಂಖ್ಯೆ ಪ್ರೇಕ್ಷಕರೆದುರು, ನಾಕೌಟ್ ಪಂದ್ಯಗಳನ್ನಾಡುವುದು ಒತ್ತಡವನ್ನು ನಿಭಾಯಿಸುವುದು ಹೇಗೆ ಎನ್ನುವುದು ಅವರಿಗೆ ಚೆನ್ನಾಗಿ ಅರಿವಿಗೆ ಬರುತ್ತಿತ್ತು' ಎಂದು ವಾನ್ ಅಭಿಪ್ರಾಯಪಟ್ಟಿದ್ದರು.
ಇದೀಗ ಅಚ್ಚರಿಯ ರೀತಿಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಕೂಡಾ, ಮೈಕಲ್ ವಾನ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. "ನಾನು ಕೆಲವು ದಿನಗಳ ಹಿಂದಷ್ಟೇ ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್, ಯಾಕಾಗಿ ನಮ್ಮ ಪಾಕಿಸ್ತಾನ ತಂಡವನ್ನು ಪರಿಗಣಿಸುತ್ತಿಲ್ಲ ಎಂದು ಆಶ್ಚರ್ಯವಾಗಿತ್ತು. ಆದರೆ ನನಗೀಗ ಅನಿಸುತ್ತಿದೆ, ಪಾಕಿಸ್ತಾನ ತಂಡದ ಪ್ರದರ್ಶನ ನೋಡಿದರೆ ಅವರು ಹೇಳಿರುವುದು ಸರಿಯಾಗಿಯೇ ಇದೆ" ಎಂದೆನಿಸುತ್ತಿದೆ ಎಂದಿದ್ದಾರೆ.
"ಪಾಕಿಸ್ತಾನ ಕ್ರಿಕೆಟ್ ತಂಡವು ಯಾವ ಲೆವೆಲ್‌ನಲ್ಲಿದೆ ಎಂದು ಎಲ್ಲರಿಗೂ ಗೊತ್ತಿದೆ. ನಾವು ಸಣ್ಣಪುಟ್ಟ ದೇಶಗಳೆನಿಸಿರುವ ಐರ್ಲೆಂಡ್ ಎದುರು ಸೋಲುವುದನ್ನು ನೋಡಿದಾಗ ಮೈಕಲ್ ವಾನ್ ಅವರು ಹೇಳಿದ ಮಾತು ಸರಿ ಎನಿಸುತ್ತಿದೆ. ಇಂಗ್ಲೆಂಡ್ ತಂಡವು ಒಂದು ವೇಳೆ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಅಥವಾ ಭಾರತ ಎದುರು ಸರಣಿ ಆಡಿದ್ದರೆ, ವಾನ್ ಹೀಗೆ ಹೇಳುತ್ತಿರಲಿಲ್ಲ" ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ.
"ನಾವೆಲ್ಲರೂ ಮೊದಲು ಅರ್ಥಮಾಡಿಕೊಳ್ಳಬೇಕಾಗಿರುವುದು ಏನೆಂದರೆ, ಐಪಿಎಲ್‌ನಲ್ಲಿ ಜಗತ್ತಿನ ಅತ್ಯುತ್ತಮ ಬ್ಯಾಟರ್‌ಗಳು ಹಾಗೂ ಬೌಲರ್‌ಗಳು ಪಾಲ್ಗೊಳ್ಳುತ್ತಾರೆ. ಅವರೆಲ್ಲಾ 40ರಿಂದ 50 ಸಾವಿರ ಪ್ರೇಕ್ಷಕರೆದುರು ಪಂದ್ಯವನ್ನಾಡುತ್ತಾರೆ. ಹೀಗಾಗಿಯೇ ಐಪಿಎಲ್ ಅತ್ಯಂತ ಕಠಿಣ ಹಾಗೂ ಗುಣಮಟ್ಟದ ಕ್ರಿಕೆಟ್ ಎನಿಸಿದೆ ಎಂದು ಅಕ್ಮಲ್ ಹೇಳಿದ್ದಾರೆ.
ಇನ್ನು ಇದೇ ವೇಳೆ ಕಮ್ರಾನ್ ಅಕ್ಮಲ್, ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅವರು ಮಾಡಿದ ಈ ಟೀಕೆಯನ್ನು ಸ್ಪೂರ್ತಿಯುತವಾಗಿ ತೆಗೆದುಕೊಂಡು ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಉತ್ತಮ ಪ್ರದರ್ಶನ ತೋರಬೇಕು ಎಂದು ಸಲಹೆ ನೀಡಿದ್ದಾರೆ.