
ದುಬೈ: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಜೂನ್ 01ರಿಂದ ಅಮೆರಿಕದಲ್ಲಿ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಲಿದ್ದು, ಜೂನ್ 09ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಈಗಾಗಲೇ ಇಂಡೋ-ಪಾಕ್ ಪಂದ್ಯದ ಎಲ್ಲಾ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ. ಹೀಗಿರುವಾಗಲೇ ಈ ಪಂದ್ಯದ ಮೇಲೆ ಉಗ್ರರ ವಿದ್ವಂಸಕ ಕೃತ್ಯ ನಡೆಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದ್ದು, ಆತಂಕಕ್ಕೀಡು ಮಾಡಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಈ ವಿಚಾರವಾಗಿ ತನ್ನ ಮೊದಲ ಪ್ರತಿಕ್ರಿಯೆ ನೀಡಿದೆ.
ಹೌದು, ಜೂನ್ 09ರಂದು ಅಮೆರಿಕದ ನ್ಯೂಯಾರ್ಕ್‌ನ ಐಸನ್‌ಹೋವರ್ ಪಾರ್ಕ್ ಸ್ಟೇಡಿಯಂದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಜಗತ್ತೇ ತುದಿಗಾಲಿನಲ್ಲಿ ನಿಂತಿದೆ. ಈ ಪಂದ್ಯದ ಮೇಲೆ ಉಗ್ರದಾಳಿಯ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಈಗಿನಿಂದಲೇ ಬಿಗಿ ಭದ್ರತೆ ಮಾಡಲಾಗಿದೆ.
ಈ ಕುರಿತಂತೆ ನ್ಯೂಯಾರ್ಕ್ ಗವರ್ನರ್ ಕೆಥಿ ಹೋಚಲ್, ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿರುವುದಾಗಿ ಹೇಳಿದ್ದಾರೆ. "ಸದ್ಯದ ಮಟ್ಟಿಗೆ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ವಾತಾವರಣವಿಲ್ಲ" ಎಂದು ಹೇಳಿದ್ದಾರೆ. ಇದೇ ಸ್ಟೇಡಿಯಂನಲ್ಲಿ ಬದ್ದ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಸೇರಿದಂತೆ ಜೂನ್ 03ರಿಂದ 12ರ ವರೆಗೆ ಒಟ್ಟು 8 ಟಿ20 ವಿಶ್ವಕಪ್ ಪಂದ್ಯಗಳು ನಡೆಯಲಿವೆ.
"ನಾನು ಈಗಾಗಲೇ ನ್ಯೂಯಾರ್ಕ್ ಸ್ಟೇಟ್ ಪೋಲಿಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬಿಗಿಭದ್ರತೆಗಳನ್ನು ಕೈಗೊಳ್ಳಿ ಎನ್ನುವ ನಿರ್ದೇಶನ ನೀಡಿದ್ದೇನೆ. ಮುನ್ನೆಚ್ಚರಿಕಾ ಕ್ರಮವಾಗಿ ಈಗಿನಿಂದಲೇ ಎಲ್ಲರ ಮೇಲೆ ನಿಗಾ ಇಟ್ಟಿದ್ದು, ಸ್ಕ್ರೀನಿಂಗ್ ವ್ಯವಸ್ಥೆ ಕೂಡಾ ಮಾಡಲಾಗಿದೆ ಎಂದು ಎಂದು ನ್ಯೂಯಾರ್ಕ್ ಗವರ್ನರ್ ತಿಳಿಸಿದ್ದಾರೆ ಎಂದು ಖ್ಯಾತ ಕ್ರಿಕೆಟ್ ವೆಬ್‌ಸೈಟ್ ESPNCricinfo ವರದಿ ಮಾಡಿದೆ.
ಸಾರ್ವಜನಿಕರ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ. ಅದೇ ರೀತಿ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನು ಯಾವುದೇ ಅಡಚಣೆಯಿಲ್ಲದೇ ಆಯೋಜಿಸಲು ನಾವು ಪಣ ತೊಟ್ಟಿದ್ದೇವೆ. ಎಲ್ಲರೂ ಎಂಜಾಯ್ ಮಾಡುವಂತ ವಾತಾವರಣವನ್ನು ಕಲ್ಪಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಉಗ್ರರ ಭೀತಿಯ ಬಗ್ಗೆ ಇದೀಗ ಐಸಿಸಿ ಕೂಡಾ ಮೌನ ಮುರಿದಿದೆ. ಈ ಕುರಿತಂತೆ ಮಾತನಾಡಿರುವ ಐಸಿಸಿ ವಕ್ತಾರ, "ಪಂದ್ಯ ವೀಕ್ಷಿಸಲು ಬರುವ ಪ್ರತಿಯೊಬ್ಬರ ರಕ್ಷಣೆ ಹಾಗೂ ಭದ್ರತೆ ನಮ್ಮ ಮೊದಲ ಆದ್ಯತೆಯಾಗಿದೆ. ನಾವು ಇನ್ನು ಮುಂದೆ ನಮ್ಮ ಭದ್ರತೆಯನ್ನು ಬಲಪಡಿಸಲಿದ್ದೇವೆ. ಟೂರ್ನಿಗೆ ಆತಿಥ್ಯ ವಹಿಸಿರುವ ರಾಷ್ಟ್ರಗಳ ಜತೆಗೆ ಹಾಗೂ ರಕ್ಷಣ ಸಿಬ್ಬಂದಿಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ" ಎಂದು ತಿಳಿಸಿದೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕದಲ್ಲಿ 4 ಲೀಗ್ ಹಂತದ ಪಂದ್ಯಗಳನ್ನು ಆಡಲಿದೆ. ಮೊದಲಿಗೆ ಟೀಂ ಇಂಡಿಯಾ ಜೂನ್ 05ರಂದು ಐರ್ಲೆಂಡ್ ಎದುರು ಮೊದಲ ಪಂದ್ಯವನ್ನಾಡಲಿದೆ. ಇದಾದ ಬಳಿಕ ಜೂನ್ 09ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಆ ಬಳಿಕ ಜೂನ್ 12ರಂದು ಆತಿಥೇಯ ಅಮೆರಿಕವನ್ನು ಎದುರಿಸಿದರೆ, ಇನ್ನು ತನ್ನ ಪಾಲಿನ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಕೆನಡಾವನ್ನು ಜೂನ್ 15ರಂದು ಪ್ಲೋರಿಡಾದಲ್ಲಿ ಎದುರಿಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.