
ನವದೆಹಲಿ(ಆ.19): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್, ಎರಡನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ರೆಡಿಯಾಗಿದ್ದಾರೆ. ಎರಡನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯು ಮುಂಬರುವ ಸೆಪ್ಟೆಂಬರ್ 17ರಿಂದ ಆರಂಭವಾಗಲಿದೆ. ಮತ್ತೊಮ್ಮೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುತ್ತಿರುವುದಕ್ಕೆ ಗೌತಮ್ ಗಂಭೀರ್ ಸಂತಸ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಸಂಸದರಾಗಿರುವ ಗೌತಮ್ ಗಂಭೀರ್, ಎರಡನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ ಮಹಾರಾಜಾಸ್ ಪರ ಕಣಕ್ಕಿಳಿಯಲಿದ್ದಾರೆ. ಸೆಪ್ಟೆಂಬರ್ 17ರಿಂದ ಆರಂಭವಾಗಲಿರುವ ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ತಾವು ಲಭ್ಯವಿರುವುದಾಗಿ ಗೌತಮ್ ಗಂಭೀರ್ ಖಚಿತಪಡಿಸಿದ್ದಾರೆ. ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸೌರವ್ ಗಂಗೂಲಿ ನೇತೃತ್ವದ ಭಾರತ ಮಹಾರಾಜಾಸ್ ತಂಡವು ಸೆಪ್ಟೆಂಬರ್ 16ರಂದು ಇಯಾನ್ ಮಾರ್ಗನ್ ನೇತೃತ್ವದ ವರ್ಲ್ಡ್ ಜೈಂಟ್ಸ್ ಎದುರು ವಿಶೇಷ ಪಂದ್ಯವನ್ನು ಆಡಲಿದೆ. ಇದಾದ ಮರುದಿನವೇ ಎರಡನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ಅಧಿಕೃತವಾಗಿ ಆರಂಭವಾಗಲಿದೆ.
ಸೆಪ್ಟೆಂಬರ್ 17ರಿಂದ ಆರಂಭವಾಗಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ತಾವು ಬದ್ದರಾಗಿರುವುದಾಗಿ ತಿಳಿಸಲು ಸಂತೋಷವಾಗುತ್ತಿದೆ. ಮತ್ತೊಮ್ಮೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುತ್ತಿರುವುದಕ್ಕೆ ನಾನು ಉತ್ಸುಕನಾಗಿದ್ದೇನೆ. ವಿಶ್ವ ಕ್ರಿಕೆಟ್‌ನ ದಿಗ್ಗಜ ಆಟಗಾರರ ಎದುರು ಕಾದಾಡಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟವೆಂದು ಭಾವಿಸುತ್ತೇನೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
Legends League Cricket: ನಾಯಕನಾಗಿ ಕಣಕ್ಕಿಳಿಯಲು ರೆಡಿಯಾದ ಸೌರವ್ ಗಂಗೂಲಿ..!
ಎಡಗೈ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್, ಭಾರತ ಪರ 58 ಟೆಸ್ಟ್, 147 ಏಕದಿನ ಹಾಗೂ 37 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟಾರೆ 10,000ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್ ಚಾಂಪಿಯನ್ ಆಗುವಲ್ಲಿ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಗೌತಮ್ ಗಂಭೀರ್ ಮಹತ್ತರ ಪಾತ್ರ ವಹಿಸಿದ್ದರು. ಈ ಎರಡೂ ಫೈನಲ್‌ಗಳಲ್ಲೂ ಗೌತಮ್ ಗಂಭೀರ್, ಟೀಂ ಇಂಡಿಯಾ ಪರ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದರು.
ಇನ್ನು ಗೌತಮ್ ಗಂಭೀರ್, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಯಶಸ್ವಿ ನಾಯಕನಾಗಿ ಹೊರಹೊಮ್ಮಿದ್ದರು. 2012 ಹಾಗೂ 2014ರಲ್ಲಿ ಗೌತಮ್ ಗಂಭೀರ್ ನಾಯಕನಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಗೌತಮ್ ಗಂಭೀರ್ 2018ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಕಳೆದ ಐಪಿಎಲ್ ಟೂರ್ನಿಯಲ್ಲಿ ಗಂಭೀರ್ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿಯೂ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.