
ಬೆಂಗಳೂರು(ಡಿ.14): ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ (VVS Laxman) ಸೋಮವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ) (National Cricket Academy) ನಿರ್ದೇಶಕ ಹುದ್ದೆಯನ್ನು ಅಲಂಕರಿಸಿದರು. ಇತ್ತೀಚೆಗಷ್ಟೇ ಬಿಸಿಸಿಐ(BCCI), ಲಕ್ಷ್ಮಣ್‌ರನ್ನು ಈ ಹುದ್ದೆಗೆ ನೇಮಕ ಮಾಡಿತ್ತು. ರಾಹುಲ್ ದ್ರಾವಿಡ್ (Rahul Dravid) ಎನ್‌ಸಿಎ ಮುಖ್ಯಸ್ಥ ಹುದ್ದೆಗೆ ರಾಜಿನಾಮೆ ನೀಡಿ ಟೀಂ ಇಂಡಿಯಾ (Team India) ಹೆಡ್ ಕೋಚ್ ಆಗಿ ನೇಮಕವಾಗಿದ್ದರು. ಇದೀಗ ರಾಹುಲ್ ದ್ರಾವಿಡ್ ಸ್ಥಾನಕ್ಕೆ ಲಕ್ಷ್ಮಣ್ ನೇಮಕವಾಗಿದ್ದಾರೆ.
‘ಎನ್‌ಸಿಎ (NCA) ಮುಖಸ್ಥನಾಗಿ ಇಂದು ಅಧಿಕಾರ ವಹಿಸಿಕೊಂಡೆ. ಈ ಹುದ್ದೆಯಲ್ಲಿ ಇದು ಮೊದಲ ದಿನ. ಭಾರತೀಯ ಕ್ರಿಕೆಟ್‌ನ ಭವಿಷ್ಯದ ತಾರೆಗಳೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’ ಎಂದು ಸೋಮವಾರ ಲಕ್ಷ್ಮಣ್ ಟ್ವೀಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly), ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಎನ್‌ಸಿಎ ಮುಖ್ಯಸ್ಥರಾಗಿ ನೇಮಕವಾಗಿರುವುದಾಗಿ ಖಚಿತ ಪಡಿಸಿದ್ದರು.
ವಿವಿಎಸ್ ಲಕ್ಷ್ಮಣ್, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SunRisers Hyderabad) ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದರ ಜತೆಗೆ ವೀಕ್ಷಕವಿವರಣೆಗಾರನಾಗಿ ಕಾಣಿಸಿಕೊಳ್ಳುತ್ತಿದ್ದರು. ಇನ್ನು ಮುಂದೆ ಈ ಎರಡು ಜವಾಬ್ದಾರಿಯನ್ನು ಬದಿಗಿಟ್ಟು, ಯುವ ಆಟಗಾರರಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಇನ್ನು ಮುಂದಿನ ಮೂರು ವರ್ಷಗಳ ಕಾಲ ಲಕ್ಷ್ಮಣ್ ಹೈದರಾಬಾದ್ ತೊರೆದು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಭಾರತ ಕ್ರಿಕೆಟ್ ಸೇವೆಗಾಗಿ ಈ ತೀರ್ಮಾನ ತೆಗೆದುಕೊಂಡಿದ್ದು ಗಮನಾರ್ಹವಾದದ್ದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಜಯವರ್ಧನೆ ಲಂಕಾ ಕ್ರಿಕೆಟ್ ತಂಡಗಳ ನೂತನ ಸಲಹೆಗಾರ
ಕೊಲಂಬೊ: ದಿಗ್ಗಜ ಕ್ರಿಕೆಟಿಗ ಮಹೇಲಾ ಜಯವರ್ಧನೆ (Mahela Jayawardene) ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡಗಳ ಸಲಹೆಗಾರನಾಗಿ ಸೋಮವಾರ ನೇಮಕಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶ್ರೀಲಂಕಾ ನೀರಸ ಪ್ರದರ್ಶನ ತೋರುವ ಮೂಲಕ ನಿರಾಸೆ ಅನುಭವಿಸಿತ್ತು.
ICC player of the month: ಡೇವಿಡ್ ವಾರ್ನರ್, ಟಿಮ್ ಸೌಥಿ ಸೇರಿ ಮೂವರ ಹೆಸರು ಶಿಫಾರಸು..!
1 ವರ್ಷದ ಅವಧಿಗೆ ಲಂಕಾ ಕ್ರಿಕೆಟ್ ಮಂಡಳಿ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವ ಜಯವರ್ಧನೆ, ಅಂಡರ್-19, ಲಂಕಾ ‘ಎ’, ಹಿರಿಯ ಮಹಿಳಾ ಹಾಗೂ ಪುರುಷ ತಂಡಗಳ ಕ್ರಿಕೆಟ್ ಚಟುವಟಿಕೆಗಳ ಬಗ್ಗೆ ಗಮನ ಹರಿಸಲಿದ್ದಾರೆ. ಆಟಗಾರರಿಗೆ ತಾಂತ್ರಿಕ ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ. ಲಂಕಾ ಕ್ರಿಕೆಟ್‌ನ ಉನ್ನತ ಪ್ರದರ್ಶನ ಕೇಂದ್ರದೊಂದಿಗೂ ಜಯವರ್ಧನೆ ಕಾರ‍್ಯನಿರ್ವಹಿಸಲಿದ್ದಾರೆ.
ಡೇವಿಡ್ ವಾರ್ನರ್‌ಗೆ ಐಸಿಸಿ ತಿಂಗಳ ಶ್ರೇಷ್ಠ ಕ್ರಿಕೆಟಿಗ ಗೌರವ
ದುಬೈ: ಆಸ್ಪ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ (David Warner) ಐಸಿಸಿ ತಿಂಗಳ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನವೆಂಬರ್ ತಿಂಗಳ ಶ್ರೇಷ್ಠ ಕ್ರಿಕೆಟಿಗ ಗೌರವ ಪಡೆದಿದ್ದಾರೆ. ಯುಎಇನಲ್ಲಿ ನಡೆದಿದ್ದ ಐಪಿಎಲ್ 14ನೇ ಆವೃತ್ತಿಯ ಭಾಗ-2ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಹೊರಬಿದ್ದು ಅವಮಾನಕ್ಕೊಳಗಾಗಿದ್ದ ವಾರ್ನರ್ ಬಳಿಕ ಟಿ20 ವಿಶ್ವಕಪ್‌ನಲ್ಲಿ (ICC T20 World Cup) ಅಮೋಘ ಆಟವಾಡಿದ್ದರು. ಫೈನಲ್‌ನಲ್ಲಿ ಕಿವೀಸ್ ವಿರುದ್ಧ 53, ಸೆಮೀಸ್‌ನಲ್ಲಿ ಪಾಕಿಸ್ತಾನ ವಿರುದ್ಧ 49 ರನ್ ಸಿಡಿಸಿದ್ದ ವಾರ್ನರ್ ಟೂರ್ನಿಯಲ್ಲಿ ಒಟ್ಟು 209 ರನ್ ಕಲೆಹಾಕಿದ್ದರು.
ಮುಂದಿನ ವರ್ಷ ಭಾರತಕ್ಕೆ ಆಫ್ಘಾನಿಸ್ತಾನ ಪ್ರವಾಸ
ನವದೆಹಲಿ: 2022ರ ಮಾರ್ಚ್‌ನಲ್ಲಿ ಆಫ್ಘಾನಿಸ್ತಾನ ಕ್ರಿಕೆಟ್ ತಂಡ (Afghanistan Cricket Team) ಭಾರತ ಪ್ರವಾಸ ಕೈಗೊಳ್ಳಲಿದೆ. ಐಪಿಎಲ್‌ಗೂ (IPL) ಮುನ್ನ ಭಾರತ ಹಾಗೂ ಆಫ್ಘಾನಿಸ್ತಾನ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸೆಣಸಲಿವೆ. ಮೊದಲ ಬಾರಿಗೆ ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಟಿ20 ಸರಣಿ ನಡೆಯಲಿದೆ. ಎರಡು ವರ್ಷಗಳ ಹಿಂದೆ ಆಫ್ಘಾನಿಸ್ತಾನಕ್ಕೆ ಟೆಸ್ಟ್ ಮಾನ್ಯತೆ ದೊರೆತಾಗ ಭಾರತಕ್ಕೆ ಆಗಮಿಸಿ ಒಂದು ಪಂದ್ಯವನ್ನಾಡಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.