Asia Cup 2022 ವಿರಾಟ್ ಕೊಹ್ಲಿ ಮೇಲೆ ಮುಗಿಬಿದ್ದ ಸುನಿಲ್ ಗವಾಸ್ಕರ್..!

Published : Sep 06, 2022, 01:28 PM IST
Asia Cup 2022 ವಿರಾಟ್ ಕೊಹ್ಲಿ ಮೇಲೆ ಮುಗಿಬಿದ್ದ ಸುನಿಲ್ ಗವಾಸ್ಕರ್..!

ಸಾರಾಂಶ

* ವಿರಾಟ್ ಕೊಹ್ಲಿ ಮಾತಿಗೆ ಅಸಮಾಧಾನ ಹೊರಹಾಕಿದ ಸುನಿಲ್ ಗವಾಸ್ಕರ್ * ಟೆಸ್ಟ್‌ ನಾಯಕತ್ವದಿಂದ ಕೆಳಗಿಳಿದ ಬಳಿಕ ಧೋನಿ ಮಾತ್ರ ಮೆಸೇಜ್ ಮಾಡಿದ್ದರು ಎಂದಿದ್ದ ಕೊಹ್ಲಿ * ನಾಯಕತ್ವದಿಂದ ಕೆಳಗಿಳಿದ ಬಳಿಕ ಇನ್ಯಾವ ಸಂದೇಶದ ಅಗತ್ಯವಿತ್ತು ಎಂದ ಮಾಜಿ ಕ್ರಿಕೆಟಿಗ

ದುಬೈ(ಸೆ.06): ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕರ್ಷಕ 60 ರನ್ ಬಾರಿಸಿ ಮಿಂಚಿದ್ದರು. ಇದರ ಬೆನ್ನಲ್ಲೇ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ಹಲವು ಭಾವನಾತ್ಮಕ ಕ್ಷಣಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಂಡಿದ್ದರು. ಇದೇ ವೇಳೆ ತಾವು ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬಳಿಕ ಮಹೇಂದ್ರ ಸಿಂಗ್ ಧೋನಿ ಹೊರತುಪಡಿಸಿ ಯಾವೊಬ್ಬ ವ್ಯಕ್ತಿ ಕೂಡಾ ನನಗೆ ಒಂದು ಮೆಸೇಜ್ ಕೂಡಾ ಮಾಡಿರಲಿಲ್ಲ ಎಂದಿದ್ದರು. ಇದೀಗ ವಿರಾಟ್ ಕೊಹ್ಲಿ ಮಾತಿಗೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ತಿರುಗೇಟು ನೀಡಿದ್ದಾರೆ.

‘ಅನೇಕರ ಬಳಿ ನನ್ನ ಮೊಬೈಲ್‌ ನಂಬರ್‌ ಇದೆ. ಆದರೆ ಸಂದೇಶ ಕಳುಹಿಸಿದ್ದು ಧೋನಿ ಮಾತ್ರ. ಇನ್ನೂ ಅನೇಕರು ಟೀವಿಯಲ್ಲಿ ಸಲಹೆಗಳನ್ನು ನೀಡಿದರು’ ಎಂದು ಕೊಹ್ಲಿ ಹೇಳಿದರು. ‘ಧೋನಿ ಜೊತೆ ನನಗೆ ವಿಶೇಷ ಬಾಂಧವ್ಯವಿದೆ. ನಾವಿಬ್ಬರು ಪರಸ್ಪರ ಗೌರವಿಸುತ್ತೇವೆ. ಇದು ನನಗೆ ಬಹಳ ಮುಖ್ಯ’ ಎಂದು ಹೇಳಿದ್ದರು. 

ಇನ್ನು ಇದೇ ವೇಳೆ ಟೀವಿಯಲ್ಲಿ ಸಲಹೆ ನೀಡಿದವರ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, ‘ಯಾರಿಗಾದರೂ ಏನಾದರೂ ಹೇಳಬೇಕು ಎಂದರೆ ವೈಯಕ್ತಿಕವಾಗಿ ಸಂಪರ್ಕಿಸಿ ಹೇಳಬಹುದು. ಸಹಾಯ ಮಾಡಬೇಕು ಎನ್ನುವ ಉದ್ದೇಶವಿದ್ದಾಗ ಅದನ್ನು ಜಗತ್ತಿನ ಮುಂದೆ ಹೇಳಿಕೊಳ್ಳುವ ಅಗತ್ಯವಿಲ್ಲ. ಅಂತಹವನ್ನು ನಾನು ಗೌರವಿಸುವುದಿಲ್ಲ’ ಎಂದರು. ಸುನಿಲ್‌ ಗವಾಸ್ಕರ್‌ ಮಾಧ್ಯಮವೊಂದಕ್ಕೆ ಮಾತನಾಡಿ ‘ಕೊಹ್ಲಿ ನನಗೆ 20 ನಿಮಿಷ ಸಮಯ ಕೊಟ್ಟರೆ ಅವರ ಸಮಸ್ಯೆ ಪರಿಹರಿಸುತ್ತೇನೆ’ ಎಂದಿದ್ದರು.

ಇದೀಗ ವಿರಾಟ್ ಕೊಹ್ಲಿ ಆಡಿರುವ ಮಾತಿನ ಕುರಿತಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ಒಳಗಡೆ ಆಟಗಾರರ ನಡುವೆ ಯಾವ ಪರಿಸ್ಥಿತಿ ಹೇಗಿದೆ ಎಂದು ನನಗಂತೂ ಗೊತ್ತಿಲ್ಲ. ಇದೀಗ ಒಬ್ಬ ಆಟಗಾರ ಮಾತ್ರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ ಮೇಲೆ ಯಾವೆಲ್ಲಾ ಆಟಗಾರರು ಸಂಪರ್ಕದಲ್ಲಿಲ್ಲ ಎನ್ನುವುದನ್ನು ಹೇಳಬೇಕಲ್ಲವೇ? ಹೀಗೆ ಹೇಳಿದಾಗ ಮಾತ್ರ ಸ್ಪಷ್ಟ ಚಿತ್ರಣ ಸಿಗಲು ಸಾಧ್ಯ ಎಂದು ಇಂಡಿಯಾ ಟುಡೆ ವಾಹಿನಿಯಲ್ಲಿ ಮಾತನಾಡುವಾಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಇನ್ನು ಸ್ಪೋರ್ಟ್ಸ್‌ ತಕ್‌ನ ಮತ್ತೊಂದು ಚರ್ಚಾ ಕಾರ್ಯಕ್ರಮದ ವೇಳೆ ಇದೇ ವಿಚಾರವನ್ನು ಪ್ರಸ್ತಾಪಿಸಿರುವ ಸುನಿಲ್‌ ಗವಾಸ್ಕರ್, ಅವರಿಗೆ ಯಾವ ರೀತಿಯ ಸಂದೇಶ ಬೇಕಿತ್ತು? ಎಂದು ಪ್ರಶ್ನಿಸಿದ್ದಾರೆ. ಹಾಗಿದ್ದರೇ ವಿರಾಟ್ ಕೊಹ್ಲಿ ಬೆನ್ನುತಟ್ಟಬೇಕಿತ್ತೇ? ನಾಯಕತ್ವದಿಂದ ಕೆಳಗಿಳಿದ ಬಳಿಕ ಅದು ಮುಗಿದ ಅಧ್ಯಾಯ. ಇದಾದ ಮೇಲೆ ಅವರಿಗೆ ಯಾಕೆ ಹುರಿದುಂಬಿಸಬೇಕು ಎನ್ನುವುದು ನನಗೆ ತಿಳಿಯುತ್ತಿಲ್ಲ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಸದ್ಯ ನೀವೀಗ ಕೇವಲ ಕ್ರಿಕೆಟಿಗನಾಗಿ ಮಾತ್ರ ಆಡುತ್ತಿದ್ದೀರ. ಹೀಗಾಗಿ ಅದರ ಮೇಲಷ್ಟೇ ಗಮನ ಕೊಡಿ. ನೀವು ನಾಯಕರಾಗಿದ್ದಾಗ ನಿಮ್ಮ ಸಹ ಆಟಗಾರರ ಮೇಲೂ ಹೆಚ್ಚು ಗಮನ ಕೊಡಬೇಕಾಗುತ್ತದೆ. ಯಾವಾಗ ನಿಮ್ಮ ನಾಯಕತ್ವ ಮುಗಿಯಿತೋ, ಆಗ ನಿಮ್ಮ ಆಟದ ಮೇಲಷ್ಟೇ ಗಮನಕೊಟ್ಟರೇ ಸಾಕು ಎಂದು ಗವಾಸ್ಕರ್ ಕಿವಿಮಾತು ಹೇಳಿದ್ದಾರೆ.

ಇದೇ ವೇಳೆ ಸುನಿಲ್ ಗವಾಸ್ಕರ್ ತಾವು ನಾಯಕತ್ವದಿಂದ ಕೆಳಗಿಳಿದಾಗ ತಮಗೂ ಯಾವುದೇ ವಿಶೇಷ ಕರೆಗಳಾಗಲಿ, ಸಂದೇಶಗಳಾಗಲಿ ಬಂದಿರಲಿಲ್ಲ ಎಂದು ನೆನಪು ಮಾಡಿಕೊಂಡಿದ್ದಾರೆ. 1985ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬೆನ್ಸನ್‌ & ಹೆಡ್ಜ್ಸ್‌  ವಿಶ್ವ ಚಾಂಪಿಯನ್‌ಶಿಪ್ ಜಯಿಸಿದ ಬಳಿಕ ನಾನು ನಾಯಕತ್ವದಿಂದ ಕೆಳಗಿಳಿದೆ. ಆ ದಿನ ರಾತ್ರಿ ನಾವೆಲ್ಲಾ ಸಂಭ್ರಮಾಚರಣೆ ಮಾಡಿದೆವು. ಒಬ್ಬರನ್ನೊಬ್ಬರು ಅಪ್ಪಿಕೊಂಡೆವು, ಇದಕ್ಕೂ ಹೆಚ್ಚಿನದು ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಒಂದು ತಂಡ ಬಿಟ್ಟು ಆರ್‌ಸಿಬಿ, ಚೆನ್ನೈ ಸೇರಿ ಐಪಿಎಲ್‌ ತಂಡಗಳ ಬ್ರ್ಯಾಂಡ್ ಮೌಲ್ಯ ಭಾರೀ ಕುಸಿತ!
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!