ಭಾರತ ಎದುರಿನ ಪಿಂಕ್ ಬಾಲ್ ಟೆಸ್ಟ್‌ ಪಂದ್ಯಕ್ಕೆ ಆಸೀಸ್‌ ತಂಡವನ್ನು ಪ್ರಕಟಿಸಿದ ಪಾಂಟಿಂಗ್..!

By Suvarna NewsFirst Published Dec 15, 2020, 4:20 PM IST
Highlights

ಆಸೀಸ್‌ ಮಾಜಿ ನಾಯಕ ರಿಕಿ ಪಾಂಟಿಂಗ್ ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್‌ ಪಂದ್ಯಕ್ಕೆ ಸಂಭವನೀಯ ಆಸ್ಟ್ರೇಲಿಯಾ ತಂಡವನ್ನು ಹೆಸರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಅಡಿಲೇಡ್(ಡಿ.15): ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯ ಬಹುನಿರೀಕ್ಷಿತ ಪಿಂಕ್ ಬಾಲ್ ಟೆಸ್ಟ್‌ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್ 17ರಂದು ಅಡಿಲೇಡ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳು ಜಿದ್ದಾಜಿದ್ದಿನ ಪೈಪೋಟಿಗೆ ಸಿದ್ದತೆ ನಡೆಸುತ್ತಿವೆ.
  
ಈಗಾಗಲೇ ಉಭಯ ತಂಡಗಳು ಅಭ್ಯಾಸ ಪಂದ್ಯಗಳನ್ನಾಡಿದ್ದು, ಮಹತ್ವದ ಸರಣಿಗೆ ಸಜ್ಜಾಗಿವೆ. ಹೀಗಿರುವಾಗಲೇ ಆಸ್ಟ್ರೇಲಿಯಾ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ನಾಯಕ ಹಾಗೂ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್, ಭಾರತ ವಿರುದ್ದದ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯಕ್ಕೆ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಹೆಸರಿಸಿದ್ದಾರೆ. ಪಾಂಟಿಂಗ್ ಆಯ್ದುಕೊಂಡ ತಂಡದಲ್ಲಿ ಕೆಲ ಅಚ್ಚರಿಯ ಹೆಸರುಗಳು ಕಾಣಿಸಿಕೊಂಡಿವೆ.

ತಂಡದ ಪ್ರಮುಖ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹಾಗೂ ವಿಲ್‌ ಪುಕೊವಿಸ್ಕಿ ಗಾಯಕ್ಕೆ ತುತ್ತಾಗಿದ್ದು, ಮೊದಲ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿದ್ದರಿಂದ ಮ್ಯಾಥ್ಯೂ ವೇಡ್ ಜತೆಗೆ ಜೋ ಬರ್ನ್ಸ್‌ಗೆ ಆರಂಭಿಕರಾಗಿ ರಿಕಿ ಪಾಂಟಿಂಗ್ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಆಸ್ಟ್ರೇಲಿಯಾ 'ಎ' ತಂಡದ ಪರ ನಿರಾಶಾದಾಯಕ ಪ್ರದರ್ಶನದ ಹೊರತಾಗಿಯೂ, ಅವರಿಗೆ ಸ್ಥಾನ ನೀಡಿದ್ದನ್ನು ಪಂಟರ್ ಸಮರ್ಥಿಸಿಕೊಂಡಿದ್ದಾರೆ.

ಆತ ಸಾಕಷ್ಟು ರನ್‌ ಗಳಿಸಿಲ್ಲ, ಫಾರ್ಮ್‌ನಲ್ಲಿಲ್ಲ ಎಂದೆಲ್ಲ ನನಗೆ ಸಲಹೆ ಜೋ ಬರ್ನ್ಸ್‌ ಬಗ್ಗೆ ಸಲಹೆ ನೀಡುತ್ತಿದ್ದಾರೆ. ಕೊನೆಯ ಟೆಸ್ಟ್‌ ಇನಿಂಗ್ಸ್‌ನಲ್ಲಿ ಬರ್ನ್ಸ್‌ 40 ರನ್ ಬಾರಿಸಿದ್ದಾರೆ. ಇನ್ನು 40ರ ಸರಾಸರಿಯಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 4 ಶತಕ ಸಹ ಬಾರಿಸಿದ್ದು, ಆತನ ಮೇಲೆ ವಿಶ್ವಾಸವಿದೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

ಭಾರತ ವಿರುದ್ದದ ಪಿಂಕ್ ಬಾಲ್ ಟೆಸ್ಟ್‌ಗೆ ಆಸೀಸ್‌ ತಂಡ ಪ್ರಕಟಿಸಿದ ಶೇನ್‌ ವಾರ್ನ್..!

ಇದರ ಜತೆಗೆ ಮ್ಯಾಥ್ಯೂ ವೇಡ್‌ ಆರಂಭಿಕನಾಗಿ ಕಣಕ್ಕಿಳಿದರೆ ಎಡಗೈ ಹಾಗೂ ಬಲಗೈ ಕಾಂಬಿನೇಷನ್‌ ಆಸ್ಟ್ರೇಲಿಯಾ ತಂಡಕ್ಕೆ ನೆರವಾಗುವ ಸಾಧ್ಯತೆಯಿದೆ. ಈ ಹಿಂದೆ ಭಾರತ ವಿರುದ್ದದ ಟೆಸ್ಟ್‌ ಸರಣಿಯಲ್ಲಿ 2 ಬ್ಯಾಟ್ಸ್‌ಮನ್‌ಗಳು ಎಡಗೈ ಬ್ಯಾಟ್ಸ್‌ಮನ್‌ಗಳಾಗಿದ್ದರಿಂದ ಭಾರತೀಯ ಬೌಲರ್‌ಗಳಿಗೆ ಅನುಕೂಲವಾಗಿ ಪರಿಣಮಿಸಿತ್ತು ಎಂದು ಹೇಳಿದ್ದಾರೆ.

ಇನ್ನುಳಿದಂತೆ ಕ್ಯಾಮರೋನ್ ಗ್ರೀನ್ ಸಂಪೂರ್ಣ ಫಿಟ್‌ ಆದರೆ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ. ಇದೇ ಮಾತನ್ನು ಆಸ್ಟ್ರೇಲಿಯಾ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಸಹಾ ಪುನರುಚ್ಚರಿಸಿದ್ದಾರೆ

ಮೊದಲ ಟೆಸ್ಟ್‌ ಪಂದ್ಯಕ್ಕೆ ರಿಕಿ ಪಾಂಟಿಂಗ್ ಆಯ್ಕೆ ಮಾಡಿದ ಆಸ್ಟ್ರೇಲಿಯಾ ತಂಡ ಹೀಗಿದೆ:

ಮ್ಯಾಥ್ಯೂ ವೇಡ್, ಜೋ ಬರ್ನ್ಸ್‌, ಮಾರ್ನಸ್ ಲಬುಸೇನ್, ಸ್ಟೀವ್ ಸ್ಮಿತ್, ತ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಟಿಮ್ ಫೈನೆ(ನಾಯಕ+ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಸ್ ಹ್ಯಾಜಲ್‌ವುಡ್, ನೇಥನ್ ಲಯನ್.
 

click me!