
ಬೆಂಗಳೂರು[ಅ.17]: ಹೆಮ್ಮೆಯ ಕನ್ನಡಿಗ, ಭಾರತ ಪರ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್’ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಅನಿಲ್ ಕುಂಬ್ಳೆಗಿಂದು 49ನೇ ಹುಟ್ಟುಹಬ್ಬದ ಸಂಭ್ರಮ.
IPL 2020:ಕಿಂಗ್ಸ್ XI ಪಂಜಾಬ್ ತಂಡಕ್ಕೆ ಕನ್ನಡಿಗ ಅನಿಲ್ ಕುಂಬ್ಳೆ ಕೋಚ್!
ಧೋನಿ ಭವಿಷ್ಯದ ಬಗ್ಗೆ ಶೀಘ್ರವೇ ನಿರ್ಧಾರಕ್ಕೆ ಬನ್ನಿ: ಕುಂಬ್ಳೆ
ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ಬೌಲರ್, ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದ ಅನಿಲ್ ಕುಂಬ್ಳೆ ಎದುರಾಳಿ ಬ್ಯಾಟ್ಸ್’ಮನ್’ಗಳ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದ್ದರು. ಏಪ್ರಿಲ್ 25, 1990ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಗೂಗ್ಲಿ ಸ್ಪೆಷಲಿಸ್ಟ್ ಕುಂಬ್ಳೆ ಹಿಂತಿರುಗಿ ನೋಡಲೇ ಇಲ್ಲ. 132 ಪಂದ್ಯಗಳಿಂದ 619 ಟೆಸ್ಟ್ ಹಾಗೂ 271 ಏಕದಿನ ಪಂದ್ಯಗಳಿಂದ 337 ವಿಕೆಟ್ ಕಬಳಿಸುವ ಮೂಲಕ ಎರಡು ಮಾದರಿಯಲ್ಲೂ ಭಾರತ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನ್ನುವ ಗೌರವಕ್ಕೆ ಜಂಬೋ ಖ್ಯಾತಿಯ ಕುಂಬ್ಳೆ ಪಾತ್ರರಾಗಿದ್ದಾರೆ.
ಅನಿಲ್ ಕುಂಬ್ಳೆ ಬೌಲಿಂಗ್ ಮಾತ್ರವಲ್ಲ, ಟೆಸ್ಟ್ ಕ್ರಿಕೆಟ್’ನಲ್ಲಿ ಒಂದು ಅಜೇಯ ಶತಕ ಹಾಗೂ 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ಕುಂಬ್ಳೆ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ್ದಾರೆ. ಇದರ ಜತೆಗೆ ಟೀಂ ಇಂಡಿಯಾ ಕೋಚ್ ಆಗಿಯೂ ಸೈ ಎನಿಸಿಕೊಂಡಿದ್ದರು.
ಸ್ಮರಣೀಯ ಕ್ಷಣಗಳು:
1996ರ ಅಕ್ಟೋಬರ್’ನಲ್ಲಿ ನಡೆದ ಟೈಟಾನ್ ಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತೋರ್ವ ಕನ್ನಡಿಗ ಜಾವಗಲ್ ಶ್ರೀನಾಥ್ ಜತೆಗೂಡಿ 9ನೇ ವಿಕೆಟ್’ಗೆ ಅಜೇಯ 52 ರನ್’ಗಳ ಜತೆಯಾಟವಾಡುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು.
1999ರಲ್ಲಿ ಪಾಕಿಸ್ತಾನ ವಿರುದ್ಧ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ಇನಿಂಗ್ಸ್’ವೊಂದರಲ್ಲಿ ಎಲ್ಲಾ 10 ವಿಕೆಟ್ ಕಬಳಿಸುವ ಮೂಲಕ ಈ ಸಾಧನೆ ಮಾಡಿದ ಎರಡನೇ ಬೌಲರ್ ದಾಖಲೆಯೂ ಅನಿಲ್ ಹೆಸರಿನಲ್ಲಿದೆ. 1956ರಲ್ಲಿ ಇಂಗ್ಲೆಂಡ್’ನ ಜಿಮ್ ಲೇಕರ್ ಇನಿಂಗ್ಸ್’ವೊಂದರಲ್ಲಿ 10 ವಿಕೆಟ್ ಪಡೆದು ವಿಶ್ವದಾಖಲೆ ಬರೆದಿದ್ದರು.
2015ರಲ್ಲಿ ಅನಿಲ್ ಕುಂಬ್ಳೆ ’ಹಾಲ್ ಆಫ್ ಫೇಮ್’ ಗೌರವಕ್ಕೂ ಭಾಜನರಾಗಿದ್ದಾರೆ.
ಇದೀಗ 2020ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.