ನನ್ನ ಪಾಲಿಗೆ ರವಿಚಂದ್ರನ್ ಅಶ್ವಿನ್ ಸಾರ್ವಕಾಲಿಕ ದಿಗ್ಗಜ ಆಟಗಾರರನೆಂದ ರೋಹಿತ್ ಶರ್ಮಾ

Suvarna News   | Asianet News
Published : Mar 07, 2022, 03:05 PM IST
ನನ್ನ ಪಾಲಿಗೆ ರವಿಚಂದ್ರನ್ ಅಶ್ವಿನ್ ಸಾರ್ವಕಾಲಿಕ ದಿಗ್ಗಜ ಆಟಗಾರರನೆಂದ ರೋಹಿತ್ ಶರ್ಮಾ

ಸಾರಾಂಶ

* ಟೆಸ್ಟ್‌ ಕ್ರಿಕೆಟ್‌ನಲ್ಲಿ ಕಪಿಲ್ ದೇವ್ ವಿಕೆಟ್ ದಾಖಲೆ ಹಿಂದಿಕ್ಕಿದ ರವಿಚಂದ್ರನ್ ಅಶ್ವಿನ್‌ * ಭಾರತ ಪರಿ ಗರಿಷ್ಠ ಟೆಸ್ಟ್‌ ವಿಕೆಟ್‌ ಪಡೆದವರ ಸಾಲಿನಲ್ಲಿ ಎರಡನೇ ಸ್ಥಾನಕ್ಕೇರಿದ ಆಫ್‌ಸ್ಪಿನ್ನರ್ * ಅಶ್ವಿನ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಬಣ್ಣಿಸಿದ ರೋಹಿತ್ ಶರ್ಮಾ

ಮೊಹಾಲಿ(ಮಾ.07): ಶ್ರೀಲಂಕಾ ವಿರುದ್ದದ ಮೊಹಾಲಿ ಟೆಸ್ಟ್ (Mohali Test) ಪಂದ್ಯದ ಮೂರನೇ ದಿನದಾಟದಲ್ಲಿ ರವಿಚಂದ್ರನ್ ಅಶ್ವಿನ್‌ (Ravichandran Ashwin), ಮಾಜಿ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ (Kapil Dev)(434) ಅವರ ಹೆಸರಿನಲ್ಲಿದ್ದ ವಿಕೆಟ್‌ ದಾಖಲೆ ಹಿಂದಿಕ್ಕಿದ್ದಾರೆ. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅನಿಲ್‌ ಕುಂಬ್ಳೆ (Anil Kumble)(619) ಬಳಿಕ ಭಾರತ ಪರ ಗರಿಷ್ಠ ವಿಕೆಟ್ ಕಬಳಿಸಿದ ಎರಡನೇ ಬೌಲರ್ ಎನ್ನುವ ಕೀರ್ತಿಗೆ ತಮಿಳುನಾಡು ಮೂಲದ ರವಿಚಂದ್ರನ್ ಅಶ್ವಿನ್ ಪಾತ್ರರಾಗಿದ್ದಾರೆ. ಇದಷ್ಟೇ ಅಲ್ಲದೇ ಲಂಕಾ ಎದುರಿನ ಮೊದಲ ಟೆಸ್ಟ್‌ನಲ್ಲಿ 6 ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಕಬಳಿಸಿದ ಜಗತ್ತಿನ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್ 9ನೇ ಸ್ಥಾನಕ್ಕೆ ಏರಿದ್ದಾರೆ. 

ರವಿಚಂದ್ರನ್ ಅಶ್ವಿನ್ ಕೇವಲ ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ್ದರು. ಲಂಕಾ ಎದುರಿನ ಮೊದಲ ಇನಿಂಗ್ಸ್‌ನಲ್ಲಿ ಅಶ್ವಿನ್ 82 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 61 ರನ್‌ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. 7ನೇ ವಿಕೆಟ್‌ಗೆ ರವೀಂದ್ರ ಜಡೇಜಾ (Ravindra Jadeja) ಜತೆಗೂಡಿ ಅಶ್ವಿನ್‌ 130 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾಗಿದ್ದರು.

ಪಂದ್ಯ ಮುಕ್ತಾಯದ ಬಳಿಕ ರವಿಚಂದ್ರನ್ ಅಶ್ವಿನ್‌ ಪ್ರದರ್ಶನವನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಗುಣಗಾನ ಮಾಡಿದ್ದಾರೆ. ಅಶ್ವಿನ್ ಕಳೆದ ಹಲವಾರು ವರ್ಷಗಳಿಂದ ಭಾರತ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ ಹಾಗೂ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅವರು ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ನನ್ನ ಪ್ರಕಾರ ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ರೋಹಿತ್ ಶರ್ಮಾ ಬಣ್ಣಿಸಿದ್ದಾರೆ. ನಾನು ಹಲವಾರು ವರ್ಷಗಳಿಂದ ಅಶ್ವಿನ್‌ ಅವರ ಕ್ರಿಕೆಟ್ ನೋಡುತ್ತಾ ಬಂದಿದ್ದೇನೆ. ಅವರು ಕಳೆದ ಕೆಲವು ವರ್ಷಗಳಲ್ಲಿ ಅವರ ಆಟವು ವರ್ಷದಿಂದ ವರ್ಷಕ್ಕೆ ಉತ್ತಮವಾಗುತ್ತಲೇ ಸಾಗಿದೆ. ಅಶ್ವಿನ್ ತಮ್ಮ ಸಾಮರ್ಥ್ಯದ ಮೇಲೆ ಸಾಕಷ್ಟು ನಂಬಿಕೆಯಿಟ್ಟುಕೊಂಡು ಅತ್ಯುತ್ತಮ ಪ್ರದರ್ಶನ ತೋರುತ್ತಾ ಬಂದಿದ್ದು, ಅವರೊಬ್ಬ ಟೀಂ ಪ್ಲೇಯರ್. ಇನ್ನು ಬ್ಯಾಟಿಂಗ್‌ನಲ್ಲಿ ಜಡೇಜಾ ಜತೆ ಅಶ್ವಿನ್ ಮಹತ್ವದ ಇನಿಂಗ್ಸ್ ಆಡಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

Ind vs SL: ಅನಿಲ್ ಕುಂಬ್ಳೆ ಗರಿಷ್ಠ ಟೆಸ್ಟ್ ವಿಕೆಟ್ ದಾಖಲೆ ಹಿಂದಿಕ್ತಾರಾ ರವಿಚಂದ್ರನ್ ಅಶ್ವಿನ್..?

ನಾಯಕರಾದ ಬಳಿಕ ರೋಹಿತ್ ಶರ್ಮಾ ಮೊದಲ ಟೆಸ್ಟ್‌ ಪಂದ್ಯದಲ್ಲೇ ಭಾರತ ತಂಡಕ್ಕೆ ಲಂಕಾ ಎದುರು ಇನಿಂಗ್ಸ್‌ ಹಾಗೂ 222 ರನ್‌ಗಳ ಜಯ ತಂದುಕೊಟ್ಟಿದ್ದಾರೆ. ಮೊಹಾಲಿ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಟೀಂ ಇಂಡಿಯಾ ಒಂದು ಹಂತದಲ್ಲಿ 228 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ ಕೆಳ ಕ್ರಮಾಂಕದಲ್ಲಿ ಅಶ್ವಿನ್‌-ಜಡೇಜಾ ಜೋಡಿ ಹಾಗೂ ಜಡೇಜಾ-ಶಮಿ ಜೋಡಿ ಶತಕದ ಜತೆಯಾಟವಾಡುವ ಮೂಲಕ ತಂಡದ ಮೊತ್ತ ಐನೂರರ ಗಡಿ ದಾಟಿಸುವಂತೆ ಮಾಡಿದರು.

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ಕಳೆದುಕೊಂಡು 574 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡರು. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ ಶ್ರೀಲಂಕಾ ತಂಡವು ರವೀಂದ್ರ ಜಡೇಜಾ ಮಾರಕ ದಾಳಿಗೆ ತತ್ತರಿಸಿ 174 ರನ್‌ಗಳಿಗೆ ಸರ್ವಪತನ ಕಂಡಿತು. 400 ರನ್‌ಗಳ ಮುನ್ನಡೆ ಸಾಧಿಸಿದ ಭಾರತ ತಂಡವು ಪ್ರವಾಸಿ ಲಂಕಾದ ಮೇಲೆ ಫಾಲೋ ಆನ್ ಹೇರಿತು. ಎರಡನೇ ಇನಿಂಗ್ಸ್‌ನಲ್ಲಿ ಶ್ರೀಲಂಕಾ 178 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?