112 ವರ್ಷಗಳಲ್ಲೇ ಮೊದಲು..! ಆಂಗ್ಲರನ್ನು ಬಗ್ಗುಬಡಿದು ಅಪರೂಪದ ದಾಖಲೆ ಬರೆದ ಟೀಂ ಇಂಡಿಯಾ

By Naveen KodaseFirst Published Mar 10, 2024, 10:44 AM IST
Highlights

ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ರೋಚಕ ಸೋಲು ಅನುಭವಿಸಿದ ಬಳಿಕ ರೋಹಿತ್ ಶರ್ಮಾ ಪಡೆ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಈ ಮೂಲಕ ಅಪರೂಪದ ದಾಖಲೆ ಬರೆದಿದೆ.

ಧರ್ಮಶಾಲಾ(ಮಾ.10) ಇಂಗ್ಲೆಂಡ್‌ ವಿರುದ್ಧ ಕೊನೆ ಪಂದ್ಯದ ಜಯದೊಂದಿಗೆ ಭಾರತ ಹೊಸ ದಾಖಲೆ ಬರೆಯಿತು. ಕಳೆದ 112 ವರ್ಷಗಳಲ್ಲೇ ಮೊದಲ ಪಂದ್ಯದ ಸೋಲಿನ ಬಳಿಕ 5 ಪಂದ್ಯದ ಸರಣಿಯಲ್ಲಿ 4-1ರಿಂದ ಗೆದ್ದ ಏಕೈಕ ತಂಡ ಎನಿಸಿಕೊಂಡಿತು. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 28 ರನ್ ಅಂತರದ ಗೆಲುವು ಸಾಧಿಸಿತು.

ಇದಾದ ಬಳಿಕ ಎಚ್ಚೆತ್ತುಕೊಂಡು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸತತ 4 ಟೆಸ್ಟ್ ಪಂದ್ಯಗಳನ್ನು ಜಯಿಸುವ ಮೂಲಕ ಟೆಸ್ಟ್ ಸರಣಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ಈ ಸಾಧನೆ ಮಾಡಿದ್ದು ಕೇವಲ 2 ತಂಡಗಳು. 1897-98 ಮತ್ತು 1901-02ರಲ್ಲಿ ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ, 1912ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ ಈ ಸಾಧನೆ ಮಾಡಿತ್ತು.

100 ಸಿಕ್ಸರ್‌: ಹೊಸ ದಾಖಲೆ

ಇಂಗ್ಲೆಂಡ್‌ನ ಬಾಜ್‌ಬಾಲ್‌, ಭಾರತದ ಜೈಸ್‌ಬಾಲ್‌ ಆಟಕ್ಕೆ ಸಾಕ್ಷಿಯಾದ ಸರಣಿ ಸಿಕ್ಸರ್‌ನಲ್ಲೂ ಹೊಸ ಇತಿಹಾಸ ಸೃಷ್ಟಿಸಿತು. ಟೆಸ್ಟ್‌ ಕ್ರಿಕೆಟ್‌ನ ಇತಿಹಾಸದಲ್ಲೇ 100+ ಸಿಕ್ಸರ್‌ ದಾಖಲಾದ ಏಕೈಕ ಸರಣಿ ಎಂಬ ಹೆಗ್ಗಳಿಕೆಗೆ ಈ ಸರಣಿ ಪಾತ್ರವಾಯಿತು.

ಟೆಸ್ಟ್‌ ಆಡುವವರಿಗೆ ಬಂಪರ್‌: ಆಟಗಾರರ ವೇತನ 3 ಪಟ್ಟು ಹೆಚ್ಚಿಸಿದ BCCI..! ಪ್ರತಿ ಪಂದ್ಯಕ್ಕೆ ₹45 ಲಕ್ಷ ಬೋನಸ್

ಕುಂಬ್ಳೆಯ ಮತ್ತೊಂದು ದಾಖಲೆ ಮುರಿದ ಅಶ್ವಿನ್‌

ಭಾರತ ಪರ ಟೆಸ್ಟ್‌ನಲ್ಲಿ ಅತಿಹೆಚ್ಚು ಬಾರಿ 5 ವಿಕೆಟ್‌ ಗೊಂಚಲು ಪಡೆದ ಸಾಧಕರ ಪಟ್ಟಿಯಲ್ಲಿ ಆರ್‌.ಅಶ್ವಿನ್‌ , ಅನಿಲ್‌ ಕುಂಬ್ಳೆ(35 ಬಾರಿ) ಅವರನ್ನು ಹಿಂದಿಕ್ಕಿದರು. ಅಶ್ವಿನ್‌ 36 ಬಾರಿ 5+ ವಿಕೆಟ್ ಕಿತ್ತಿದ್ದು, ಭಾರತೀಯರ ಪೈಕಿ ನಂ.1, ಒಟ್ಟಾರೆ ವಿಶ್ವದ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ 3ನೇ ಸ್ಥಾನಕ್ಕೇರಿದ್ದಾರೆ. ಲಂಕಾದ ಮುರಳೀಧರನ್‌ 67, ಆಸೀಸ್‌ನ ಶೇನ್‌ ವಾರ್ನ್‌ 37, ನ್ಯೂಜಿಲೆಂಡ್‌ನ ರಿಚರ್ಡ್ ಹ್ಯಾಡ್ಲಿ 36 ಬಾರಿ ಈ ಸಾಧನೆ ಮಾಡಿದ್ದಾರೆ.

ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌: ಟೀಂ ಇಂಡಿಯಾದ ನಂ.1 ಸ್ಥಾನ ಭದ್ರ

ಧರ್ಮಶಾಲಾ: ಇಂಗ್ಲೆಂಡ್‌ ವಿರುದ್ಧದ 5ನೇ ಹಾಗೂ ಕೊನೆ ಟೆಸ್ಟ್‌ ಪಂದ್ಯದ ಗೆಲುವಿನೊಂದಿಗೆ ಭಾರತ ತಂಡ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಕಳೆದೆರಡು ಆವೃತ್ತಿಗಳಲ್ಲಿ ಫೈನಲ್‌ನಲ್ಲಿ ಸೋತು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತ ಈ ಬಾರಿ ಮತ್ತೆ ಫೈನಲ್‌ ಸ್ಥಾನದ ಮೇಲೆ ಕಣ್ಣಿಟ್ಟಿದೆ.

ಸದ್ಯ ರೋಹಿತ್‌ ಶರ್ಮಾ ನಾಯಕತ್ವದ ಭಾರತ 2023-25ರ ಚಾಂಪಿಯನ್‌ಶಿಪ್‌ನಲ್ಲಿ 9 ಪಂದ್ಯಗಳನ್ನಾಡಿದ್ದು, 9 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ ಶೇ.68.51 ಗೆಲುವಿನ ಪ್ರತಿಶತ ಹೊಂದಿದೆ. ತಂಡ 2 ಪಂದ್ಯಗಳಲ್ಲಿ ಸೋಲನುಭವಿಸಿದ್ದರೆ 1 ಪಂದ್ಯ ಡ್ರಾಗೊಂಡಿದೆ.

ಟೀಂ ಇಂಡಿಯಾ ಎದುರಿನ ಹೀನಾಯ ಸೋಲಿನ ಬಗ್ಗೆ ತುಟಿಬಿಚ್ಚಿದ ಇಂಗ್ಲೆಂಡ್ ಕ್ಯಾಪ್ಟನ್ ಬೆನ್‌ ಸ್ಟೋಕ್ಸ್

ಇನ್ನು ಚೊಚ್ಚಲ ಆವೃತ್ತಿಯ ಚಾಂಪಿಯನ್‌ ನ್ಯೂಜಿಲೆಂಡ್‌ ಈ ಬಾರಿ 5 ಪಂದ್ಯಗಳಲ್ಲಿ 3 ಗೆಲುವಿನೊಂದಿಗೆ ಶೇ.60 ಗೆಲುವಿನ ಪ್ರತಿಶತದೊಂದಿಗೆ 2ನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ 11 ಪಂದ್ಯಗಳನ್ನಾಡಿದ್ದು, ಈ ಪೈಕಿ 7 ಪಂದ್ಯಗಳ ಜಯದೊಂದಿಗೆ ಶೇ.59.09 ಗೆಲುವಿನ ಪ್ರತಿಶತದೊಂದಿಗೆ 3ನೇ ಸ್ಥಾನದಲ್ಲಿದೆ.

ನ್ಯೂಜಿಲೆಂಡ್‌ ವಿರುದ್ಧ 2ನೇ ಪಂದ್ಯದಲ್ಲಿ ಗೆದ್ದರೆ ಆಸೀಸ್‌ 2ನೇ ಸ್ಥಾನಕ್ಕೇರಲಿದೆ. ಆಗ ಕಿವೀಸ್‌ 3ನೇ ಸ್ಥಾನಕ್ಕೆ ಕುಸಿಯಲಿದೆ. ಟಿಮ್‌ ಸೌಥಿ ನಾಯಕತ್ವದ ಕಿವೀಸ್‌ ಇತ್ತೀಚೆಗಷ್ಟೇ ಅಗ್ರಸ್ಥಾನದಲ್ಲಿತ್ತು. ಆದರೆ ಭಾರತದ ಗೆಲುವು ಹಾಗೂ ಆಸೀಸ್‌ ವಿರುದ್ಧ ತನ್ನ ಸೋಲಿನಿಂದಾಗಿ ಅಂಕಪಟ್ಟಿಯಲ್ಲಿ ಕೆಳಕ್ಕೆ ಜಾರಿದೆ.

ಅತ್ತ ಇಂಗ್ಲೆಂಡ್‌ ಕೇವಲ ಶೇ.17.5 ಜಯದ ಪ್ರತಿಶತದೊಂದಿಗೆ 8ನೇ ಸ್ಥಾನದಲ್ಲೇ ಮುಂದುವರಿಸಿದೆ. 2023-25ರ ಟೂರ್ನಿಯಲ್ಲಿ ಇಂಗ್ಲೆಂಡ್‌ ಆಡಿರುವ 10 ಪಂದ್ಯದಲ್ಲಿ 6ರಲ್ಲಿ ಸೋತಿದೆ. ಇನ್ನು ಬಾಂಗ್ಲಾದೇಶ, ಪಾಕಿಸ್ತಾನ, ವೆಸ್ಟ್‌ಇಂಡೀಸ್‌, ದಕ್ಷಿಣ ಆಫ್ರಿಕಾ ಕ್ರಮವಾಗಿ 4, 5, 6 ಹಾಗೂ 7ನೇ ಸ್ಥಾನಗಳಲ್ಲಿವೆ.

click me!