ದಿಗ್ಗಜ ಧೋನಿಗೆ ಹೋಲಿಕೆ ಮಾಡಬೇಡಿ ಎಂದ ರಿಷಭ್‌ ಪಂತ್‌

By Suvarna NewsFirst Published Jan 22, 2021, 4:38 PM IST
Highlights

ದಿಗ್ಗಜ ಕ್ರಿಕೆಟಿಗರೊಂದಿಗೆ ಯುವ ಆಟಗಾರರನ್ನು ಹೋಲಿಸುವುದು ಸರಿಯಲ್ಲ, ಭಾರತೀಯ ಕ್ರಿಕೆಟ್‌ನಲ್ಲಿ ನಾನು ನನ್ನದೇ ಹೆಸರನ್ನು ಮಾಡಬೇಕೆಂದಿದ್ದೇನೆಂದು ರಿಷಭ್ ಪಂತ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಜ.22): ಆಸ್ಪ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಜಯದಲ್ಲಿ ಮಹತ್ವದ ಪಾತ್ರವಹಿಸಿದ್ದ ರಿಷಭ್‌ ಪಂತ್‌ ಬ್ಯಾಟಿಂಗ್‌ ಬಗ್ಗೆ ಇಡೀ ವಿಶ್ವವೇ ಗುಣಗಾನ ಮಾಡಿದೆ. ಈ ವೇಳೆ ಪಂತ್‌ರನ್ನು, ಮಾಜಿ ನಾಯಕ ಎಂ.ಎಸ್‌. ಧೋನಿಗೆ ಹೋಲಿಕೆ ಮಾಡಲು ಹಲವರು ಯತ್ನಿಸಿದ್ದರು. ಆದರೆ ಪಂತ್‌ ಇದನ್ನು ನಿರಾಕರಿಸಿದ್ದಾರೆ. 

‘ಧೋನಿ ಅವರಂತಹ ದಿಗ್ಗಜ ಆಟಗಾರರಿಗೆ ನೀವು ಹೋಲಿಕೆ ಮಾಡಿದಾಗ ಅತ್ಯುತ್ತಮ ಭಾವನೆ ಮೂಡುತ್ತದೆ. ಆದರೆ ಯಾರೊಂದಿಗೂ ಹೋಲಿಕೆ ಮಾಡುವುದು ನನಗೆ ಇಷ್ಟವಿಲ್ಲ. ನನ್ನ ಹೆಸರಿನಲ್ಲಿಯೇ ಭಾರತ ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡಬೇಕು ಎನ್ನುವ ಆಶಯವಿದೆ. ಆ ವಿಷಯದ ಕಡೆಗೆ ಹೆಚ್ಚಿನ ಗಮನಹರಿಸಿದ್ದೇನೆ. ದಂತಕತೆಗಳೊಂದಿಗೆ ಯುವ ಆಟಗಾರರನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಪಂತ್‌ ಹೇಳಿದ್ದಾರೆ.

ಇದೇ ಕಾರಣಕ್ಕೆ ರಹಾನೆ ಇಷ್ಟ; ಕಾಂಗರೂ ಕೇಕ್ ಕತ್ತರಿಸಲು ನಿರಾಕರಿಸಿದ ಅಜಿಂಕ್ಯ!

ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ 23 ವರ್ಷದ ಪಂತ್ ಆಕರ್ಷಕ 97 ರನ್‌ ಬಾರಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿ ಪಂದ್ಯ ಡ್ರಾ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಬ್ರಿಸ್ಬೇನ್‌ನಲ್ಲಿ ಪಂತ್ 89 ರನ್‌ ಬಾರಿಸುವ ಮೂಲಕ ಟೀಂ ಇಂಡಿಯಾಗೆ ಸ್ಮರಣೀಯ ಗೆಲುವನ್ನು ದಕ್ಕಿಸಿಕೊಟ್ಟಿದ್ದರು. 

ಆಸ್ಟ್ರೇಲಿಯಾ ನೆಲದಲ್ಲಿ ಸರಣಿಯುದ್ದಕ್ಕೂ ನಾವೆಲ್ಲರೂ ತೋರಿದ ಪ್ರದರ್ಶನದ ಬಗ್ಗೆ ಇಡೀ ತಂಡಕ್ಕೆ ಖುಷಿಯಿದೆ ಎಂದು ಪಂತ್‌ ಹೇಳಿದ್ದಾರೆ. ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 36 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತ್ತು. ಬಳಿಕ ಫಿನಿಕ್ಸ್‌ನಂತೆ ಎದ್ದುಬಂದ ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದು ಬೀಗಿತ್ತು. 
 

click me!