ಧೋನಿಯವರ ಅಭಿಮಾನಿಯಾಗಿ ಅವರ ಸ್ಥಿತಿ ನೋಡಲು ಬೇಸರವಾಗುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಮೇಲಿನ ವ್ಯಾಮೋಹದಿಂದಾಗಿ ಅವರು ತಮ್ಮ ಘನತೆಯನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಧೋನಿ ತಮ್ಮ ಕ್ರಿಕೆಟ್ ಜೀವನವನ್ನು ಇಲ್ಲಿಗೆ ನಿಲ್ಲಿಸುವುದು ಉತ್ತಮ.
-ಸುದರ್ಶನ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ ಎಂಬ ಮಹನೀಯನ ಅಭಿಮಾನಿಯಾಗಿ ಅವರನ್ನು ಈ ಸ್ಥಿತಿಯಲ್ಲಿ ನೋಡಲು ನಿಜಕ್ಕೂ ಬೇಸರವಾಗುತ್ತಿದೆ. ಆದರೆ ಈ ಸ್ಥಿತಿ ತಂದುಕೊಂಡವರು ಅವರೇ ಅಲ್ಲವೇ? ವಿಕೆಟ್ ಹಿಂದೆ ಧೋನಿ ಕೈಗಳಲ್ಲಿ ಈಗಲೂ ಅದೇ ಮಾಂತ್ರಿಕತೆ ಕಾಣುತ್ತಿದೆ. ಆದರೆ ವಿಕೆಟ್ ಮುಂದೆ? ರಟ್ಟೆಗಳಲ್ಲಿ ಬಲವಿದೆ ನಿಜ, ಅದು ಆಟದಲ್ಲಿ ಕಾಣುತ್ತಿಲ್ಲವಲ್ಲ.
ಧೋನಿಯಂತಹ ಕ್ರಿಕೆಟಿಗ ಯಾವುದೇ ತಂಡಕ್ಕಾದರೂ ಆಸ್ತಿಯಾಗಬೇಕೇ ಹೊರತು ಹೊರೆಯಾಗಬಾರದು. 'ಚೆನ್ನೈ ಸೂಪರ್ ಕಿಂಗ್ಸ್ ಪರ ನಾನು ಬಯಸಿದಷ್ಟು ಸಮಯ ಆಡುತ್ತಲೇ ಇರಬಹುದು. ಏಕೆಂದರೆ ಅದು ನನ್ನ ಫ್ರಾಂಚೈಸಿ. ನಾನು ವ್ಹೀಲ್’ಚೇರ್’ನಲ್ಲಿದ್ದರೂ ಅವರು ನನ್ನನ್ನು ಮೈದಾನಕ್ಕೆ ಎಳೆದುಕೊಂಡು ಬರುತ್ತಾರೆ’. ಚೆನ್ನೈ ಸೂಪರ್ ಕಿಂಗ್ಸ್ ಧೋನಿಗೆ ಯಾವ ಪರಿ ಗಂಟು ಬಿದ್ದಿದೆ ಎಂಬುದು ಅವರ ಮಾತುಗಳಲ್ಲೇ ಅರ್ಥವಾಗುತ್ತಿದೆ. ಅವರು ಧೋನಿಯನ್ನು ಬಿಡುವ ಹಾಗೆ ಕಾಣುತ್ತಿಲ್ಲ. ಅವರಿಗೆ ಧೋನಿ ಬೇಕು, ಧೋನಿ ಹೆಸರು ಬೇಕು, ಧೋನಿ ಬ್ರ್ಯಾಂಡ್ ವ್ಯಾಲ್ಯೂ ಬೇಕು. ಧೋನಿ ಇಲ್ಲದೆ ಆ ತಂಡ ತಂಡವೇ ಅಲ್ಲ. ಇದೇ ಕಾರಣದಿಂದ ವಯಸ್ಸಾದರೂ ಅವರು ಧೋನಿಯನ್ನು ಬಿಡುತ್ತಿಲ್ಲ. ಒಲ್ಲೆ ಎಂದರೂ ಕೇಳುತ್ತಿಲ್ಲ.
ಇದನ್ನೂ ಓದಿ: CSK ಸೋಲಿಸಿ ಡೆಲ್ಲಿಗೆ ಗೆಲುವು ತಂದುಕೊಟ್ಟ ಧೋನಿ-ವಿಜಯ್ ಶಂಕರ್! ಫ್ಯಾನ್ಸ್ ಗರಂ!
ಹಾಗಾದರೆ ಧೋನಿಯೇ ನಿರ್ಧಾರ ತೆಗೆದುಕೊಳ್ಳಬಹುದಲ್ಲವೇ? ಖಂಡಿತಾ ತೆಗೆದುಕೊಳ್ಳಬಹುದು. ಆದರೆ ತೆಗೆದುಕೊಳ್ಳುತ್ತಿಲ್ಲ. ಕಾರಣ, ಫ್ರಾಂಚೈಸಿ ಮೇಲಿನ ವ್ಯಾಮೋಹ. ಕಟು ಸತ್ಯ ಏನೆಂದರೆ, ಧೋನಿ ಇನ್ನು ಆಡಿದಷ್ಟೂ ಅವರು ಇಲ್ಲಿಯವರೆಗೆ ಸಂಪಾದಿಸಿದ ಗೌರವವನ್ನು ಕಳೆದುಕೊಳ್ಳುತ್ತಾ ಹೋಗುತ್ತಾರೆ. ಹಾಗೆ ನೋಡಿದರೆ, 2023ರಲ್ಲಿ ಐಪಿಎಲ್ ಟ್ರೋಫಿ ಗೆದ್ದಾಗ ಕ್ರಿಕೆಟ್’ನಿಂದ ನಿವೃತ್ತಿಯಾಗಲು ಧೋನಿಗೆ ಅದಕ್ಕಿಂತ ಒಳ್ಳೆಯ ಸಮಯ ಬೇರೆ ಇರಲಿಲ್ಲ. ಅವತ್ತೇ ಎದ್ದು ನಡೆದಿದ್ದರೆ ಅದಕ್ಕೆ ಸಿಗುತ್ತಿದ್ದ ಗೌರವವೇ ಬೇರೆ.
ಅಷ್ಟಕ್ಕೂ ಮುಂದೆ ಸಾಧಿಸುವುದಾದರೂ ಏನಿತ್ತು? ಐಪಿಎಲ್’ನಲ್ಲಿ ಐದೈದು ಬಾರಿ ಚಾಂಪಿಯನ್ ಆಗಿಯಾಗಿತ್ತು. ಟಿ20, ಏಕದಿನ ವಿಶ್ವಕಪ್ ಗೆದ್ದಾಗಿತ್ತು. ಚಾಂಪಿಯನ್ಸ್ ಟ್ರೋಫಿಯೂ ಕೈಯಲ್ಲಿತ್ತು. ಭಾರತವನ್ನು ಟೆಸ್ಟ್ ಕ್ರಿಕೆಟ್’ನಲ್ಲಿ ನಂ.1 ಪಟ್ಟಕ್ಕೇರಿಸಿದ ಸಾಧನೆಯೂ ಬೆನ್ನಿಗಂಟಿಕೊಂಡಿತ್ತು. ನಾಯಕತ್ವದ ಸಾಧನೆಯಲ್ಲಿ ಆಕಾಶವನ್ನೇ ಏರಿದ ಮೇಲೆ ಅಲ್ಲಿಂದ ಎತ್ತರ ಬೇರೆನಿದೆ?
ಇದನ್ನೂಓದಿ: ಡಿಸಿ ಪಂದ್ಯದ ಬಳಿಕ ಧೋನಿ ನಿವೃತ್ತಿ ಸುಳಿವು, 18 ವರ್ಷದಲ್ಲಿ ಮೊದಲ ಬಾರಿಗೆ ಪೋಷಕರು ಹಾಜರ್
ಹಾಗಾದರೆ ಧೋನಿಗೆ ಸ್ವಾರ್ಥವೇ? ಹಣದ ವ್ಯಾಮೋಹವೇ?
ಅದೇನಾದರೂ ಇದ್ದಿದ್ದರೆ 16-18 ಕೋಟಿ ಬಿಟ್ಟು 4 ಕೋಟಿಯ ಆಟಗಾರನಾಗಿ ತಂಡದಲ್ಲಿ ಮುಂದುವರಿಯುತ್ತಲೇ ಇರಲಿಲ್ಲ. 44ನೇ ವಯಸ್ಸಿನಲ್ಲೂ ಆಡುತ್ತಲೇ ಇದ್ದಾರೆ ಎಂದರೆ ಅದರಲ್ಲಿ ವೈಯಕ್ತಿಕ ಹಿತಕ್ಕಿಂತ ಫ್ರಾಂಚೈಸಿ ಹಿತ ಕಾಣುತ್ತಿದೆ. ಆದರೆ ಆ ಹಿತಕ್ಕಾಗಿ ಆಡುತ್ತಾ ಧೋನಿ ತನ್ನ legacy, ಘನತೆಯನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಪ್ರಿಯ ಮಹೀ,
ಕ್ರಿಕೆಟ್ ಕನಸು ಕಾಣುವ ಸಣ್ಣ ಸಣ್ಣ ಊರುಗಳ ಹುಡುಗರಿಗೆ ಸ್ಫೂರ್ತಿ ನೀನು!
ಭಾರತಕ್ಕೆ ಮತ್ತೆ ಮತ್ತೆ ವಿಶ್ವಕಪ್’ಗಳನ್ನು ಗೆದ್ದು ಕೊಟ್ಟವನು ನೀನು!
ಈಗಿನ ಕ್ರಿಕೆಟ್ ಹೀರೋಗಳಿಗೆ ಭಾರತ ತಂಡದಲ್ಲಿ ಬೆನ್ನೆಲುಬಾದವನು ನೀನು!
ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ ನೀನು!
ಕ್ರಿಕೆಟ್ ಅಂಗಣದ ಸರ್ವಶ್ರೇಷ್ಠ ಮ್ಯಾಚ್ ಫಿನಿಷರ್ ನೀನು!
ಸಹನೆಗೆ, ಸರಳತೆಗೆ, ನಿಸ್ವಾರ್ಥತೆಗೆ ಮತ್ತೊಂದು ಹೆಸರು ನೀನು!
ನೀನು ಶತಮಾನಕ್ಕೊಬ್ಬ ಕ್ರಿಕೆಟಿಗ.. ಕ್ರಿಕೆಟ್’ಗೆ ಘನತೆ, ಗೌರವ ತಂದು ಕೊಟ್ಟ ಅಗ್ರಜ!
ಆದರೆ ಚೆನ್ನೈ ಸೂಪರ್ ಕಿಂಗ್ಸ್ ಮೇಲಿನ ಧೃತರಾಷ್ಟ್ರ ಪ್ರೇಮ, ಕುರುಡು ವ್ಯಾಮೋಹ ನಿನ್ನ ಘನತೆಗೆ ಕೊಳ್ಳಿ ಇಡುತ್ತಿದೆ. ಸಾಕು ಮಾಡು. ಇಲ್ಲಿಗೆ ನಿಲ್ಲಿಸಿ ಬಿಡು.