ನನ್ನ ಹಾಗೂ ವಿರಾಟ್ ಕೊಹ್ಲಿಯದ್ದು ಅತ್ಯಂತ ದುಬಾರಿ ಸಂಬಂಧ..! ಫಾಫ್ ಡು ಪ್ಲೆಸಿಸ್ ಹೀಗಂದಿದ್ದೇಕೆ?

Published : Nov 15, 2026, 03:31 PM IST
Faf du Plessis RCB

ಸಾರಾಂಶ

ಫಾಫ್ ಡು ಪ್ಲೆಸಿಸ್ ತಮ್ಮ ಜೀವನದ ಅತ್ಯಂತ ದುಬಾರಿ ಸಂಬಂಧದ ಬಗ್ಗೆ ವಿವರಿಸಿದ್ದು, ಅದು ವಿರಾಟ್ ಕೊಹ್ಲಿ ಜೊತೆಗಿನದ್ದಾಗಿದೆ ಎಂದು ಹೇಳಿದ್ದಾರೆ. ಕೊಹ್ಲಿಯ ವಾಚ್ ಕ್ರೇಜ್ ತಮಗೂ ಅಂಟಿಕೊಂಡಿದ್ದು, ದುಬಾರಿ ವಾಚ್‌ಗಳನ್ನು ಖರೀದಿಸುವಂತೆ ಅವರು ಪ್ರೇರೇಪಿಸಿದರು ಎಂದು ಫಾಫ್ ತಮಾಷೆಯಾಗಿ ಹಂಚಿಕೊಂಡಿದ್ದಾರೆ.

ಬೆಂಗಳೂರು(ನ.15): ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ವಿವಾಹಿತರಾಗಿದ್ದರೂ, ತಮ್ಮ ಜೀವನದ ಅತ್ಯಂತ ದುಬಾರಿ ಸಂಬಂಧದ ಬಗ್ಗೆ ಮಾತನಾಡುವಾಗ ಪತ್ನಿಯ ಹೆಸರನ್ನು ಹೇಳಿಲ್ಲ. ಬದಲಿಗೆ ತಮ್ಮ ಮಾಜಿ ಸಹ ಆಟಗಾರ ಹಾಗೂ ದೀರ್ಘಕಾಲದ ಎದುರಾಳಿ ವಿರಾಟ್ ಕೊಹ್ಲಿ ಅವರನ್ನು ಉಲ್ಲೇಖಿಸಿದ್ದಾರೆ. ಅಷ್ಟಕ್ಕೂ ಕೊಹ್ಲಿ ಜೊತೆಗಿನ ಸಂಬಂಧ ಫಾಫ್‌ಗೆ ಅಷ್ಟು ದುಬಾರಿಯಾಗಿದ್ದೇಕೆ? ಅದಕ್ಕೆ ಕಾರಣ ದುಬಾರಿ ವಾಚ್‌ಗಳು!

ವಿರಾಟ್ ಕೊಹ್ಲಿ ಅವರಿಗೆ ಐಷಾರಾಮಿ ಕೈಗಡಿಯಾರಗಳ ಬಗ್ಗೆ ಅಪಾರ ಆಸಕ್ತಿ ಇದೆ. ಅವರ ವಾಚ್ ಸಂಗ್ರಹದಲ್ಲಿ Rolex, Patek Philippe, Audemars Piguet, Cartier ಮತ್ತು Panerai ಸೇರಿದಂತೆ ಜಗತ್ತಿನ ಪ್ರಸಿದ್ಧ ಸ್ವಿಸ್ ವಾಚ್ ಬ್ರ್ಯಾಂಡ್‌ಗಳ ದುಬಾರಿ ಹಾಗೂ ಅಪರೂಪದ ಮಾದರಿಗಳಿವೆ. ಕೊಹ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಧರಿಸುವ ವಾಚ್‌ಗಳ ಬಗ್ಗೆಯೂ ವಾಚ್ ಪ್ರಿಯರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತದೆ.

'ವಿರಾಟ್ ಜೊತೆ ಕೆಲವೇ ನಿಮಿಷ ಕಳೆದರೆ ಸಾಕು, ವಾಚ್ ಬಗ್ಗೆ ತಿಳಿಯುತ್ತದೆ'

ESPNcricinfo ಕಾರ್ಯಕ್ರಮವೊಂದರಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಜೊತೆ ಮಾತನಾಡಿದ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಅವರ ವಾಚ್ ಕ್ರೇಜ್ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. "ವಿರಾಟ್ ಕೊಹ್ಲಿ ಜೊತೆ ಕೆಲವೇ ನಿಮಿಷಗಳನ್ನು ಕಳೆದರೆ ಸಾಕು, ನಿಮಗೆ ವಾಚ್‌ಗಳ ಬಗ್ಗೆ ಅರ್ಥವಾಗಲು ಶುರುವಾಗುತ್ತದೆ. ಆತ ದೊಡ್ಡ ವಾಚ್ ಪ್ರೇಮಿ. ನಿಜ ಹೇಳಬೇಕೆಂದರೆ, ವಾಚ್‌ಗಳ ವಿಷಯದಲ್ಲಿ ಆತನೇ ದೊಡ್ಡ ವ್ಯಕ್ತಿ. ಬಹುಶಃ ಆತನ ಬಳಿ ತುಂಬಾ ಹಣವಿರುವುದೇ ಇದಕ್ಕೆ ಕಾರಣ!" ಎಂದು ಫಾಫ್ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಡೇಲ್ ಸ್ಟೇನ್, ಕೊಹ್ಲಿ ವಿಶ್ವಮಟ್ಟದ ಖ್ಯಾತಿ ಹೊಂದಿರುವ ಆಟಗಾರನಾಗಿರುವುದರಿಂದ ಅವರಿಗೆ ಕೆಲವು ದುಬಾರಿ ವಾಚ್‌ಗಳು ಉಡುಗೊರೆಯಾಗಿ ಸಿಗಬಹುದು ಎಂದು ಅಭಿಪ್ರಾಯಪಟ್ಟರು. ಆದರೆ ಫಾಫ್ ಇದನ್ನು ಒಪ್ಪಲಿಲ್ಲ.

'ನನ್ನ ಜೀವನದ ಅತ್ಯಂತ ದುಬಾರಿ ಸಂಬಂಧ ಕೊಹ್ಲಿ ಜೊತೆಗಿನದ್ದು!'

"ಇಲ್ಲ, ಇಲ್ಲ, ಆತನೇ ಅವುಗಳನ್ನು ಖರೀದಿಸುತ್ತಾನೆ. ಜಗತ್ತಿನಲ್ಲಿ ಸಿಗುವ ಅತ್ಯಂತ ವಿರಳವಾದ, ಅತ್ಯುತ್ತಮ ವಾಚ್‌ಗಳ ಸಂಗ್ರಹ ಆತನ ಬಳಿಯಿದೆ. ಆರಂಭದಲ್ಲಿ ನಾನು, 'ಗೆಳೆಯಾ, ಒಂದು ವಾಚ್‌ಗಾಗಿ ಇಷ್ಟೊಂದು ಹಣ ಖರ್ಚು ಮಾಡಬಾರದು' ಎಂದುಕೊಳ್ಳುತ್ತಿದ್ದೆ. ಏಕೆಂದರೆ ನಮ್ಮ ದೃಷ್ಟಿಕೋನವೇ ಹಾಗಿರುತ್ತದೆ. ಆದರೆ ನನ್ನ ಜೀವನದ ಅತ್ಯಂತ ದುಬಾರಿ ಸಂಬಂಧ ವಿರಾಟ್ ಕೊಹ್ಲಿ ಜೊತೆಗಿನದ್ದು. ಏಕೆಂದರೆ ನಾನು ಎಂದಿಗೂ ಖರೀದಿಸಲೇಬಾರದು ಎಂದುಕೊಂಡಿದ್ದ ದುಬಾರಿ ವಾಚ್‌ಗಳನ್ನು ಖರೀದಿಸುವಂತೆ ಆತ ನನ್ನನ್ನು ಪ್ರೇರೇಪಿಸಿದ್ದಾನೆ" ಎಂದು ಫಾಫ್ ತಮಾಷೆಯಾಗಿ ಹೇಳಿದ್ದಾರೆ.

ಕೊಹ್ಲಿ ಅವರ ವಾಚ್‌ಗಳ ಮೇಲಿನ ಆಸಕ್ತಿ ತಮ್ಮ ಮೇಲೂ ಪರಿಣಾಮ ಬೀರಿದೆ ಎಂಬುದನ್ನು ಫಾಫ್ ಈ ಮೂಲಕ ಬಹಿರಂಗಪಡಿಸಿದ್ದಾರೆ. ಕೊಹ್ಲಿ ಜೊತೆಗಿನ ಸ್ನೇಹ ಮತ್ತು ಸಹವಾಸದಿಂದ ತಾವು ದುಬಾರಿ ವಾಚ್‌ಗಳತ್ತ ಆಕರ್ಷಿತರಾದೆ ಎಂದು ಅವರು ಹಾಸ್ಯಮಯವಾಗಿ ವಿವರಿಸಿದ್ದಾರೆ.

2022ರಿಂದ 2024ರವರೆಗೆ RCB ಡ್ರೆಸ್ಸಿಂಗ್ ರೂಮ್‌ನಲ್ಲಿ ಒಟ್ಟಿಗೆ ಆಡಿದ್ದ ಕೊಹ್ಲಿ-ಫಾಫ್

ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ 2022ರಿಂದ 2024ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ಈ ಅವಧಿಯಲ್ಲಿ ಫಾಫ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಇದರಿಂದಾಗಿ ಕೊಹ್ಲಿಯ ದೀರ್ಘಕಾಲದ ನಾಯಕತ್ವದ ಅವಧಿ ಅಂತ್ಯಗೊಂಡಿತ್ತು. 2025ರ IPL ಆವೃತ್ತಿಗೂ ಮುನ್ನ RCB ಫಾಫ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಬಳಿಕ ಅವರು ದೆಹಲಿ ಕ್ಯಾಪಿಟಲ್ಸ್ ಪರ ಒಂದು ಆವೃತ್ತಿಯಲ್ಲಿ ಆಡಿದರು. 2026ರ IPLಗಾಗಿ ತಮ್ಮ ಹೆಸರನ್ನು ಹರಾಜಿಗೆ ನೋಂದಾಯಿಸಿಕೊಳ್ಳದಿರಲು ನಿರ್ಧರಿಸಿದರು.

ಒಟ್ಟಿನಲ್ಲಿ, ಮೈದಾನದಲ್ಲಿ ಎದುರಾಳಿಗಳಾಗಿದ್ದರೂ RCB ತಂಡದಲ್ಲಿ ಸಹ ಆಟಗಾರರಾಗಿದ್ದ ಕೊಹ್ಲಿ ಮತ್ತು ಫಾಫ್ ನಡುವಿನ ಸ್ನೇಹಕ್ಕೆ ಈ ವಾಚ್ ಪ್ರಸಂಗ ಮತ್ತೊಂದು ತಮಾಷೆಯ ಉದಾಹರಣೆಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Final ಗೆಲ್ಲುತ್ತಿದ್ದಂತೆ ಪಾಕ್ ಕೆಣಕಿದ ಟೀಂ ಇಂಡಿಯಾ; ಗರಂ ಆದ ಅಖ್ತರ್ ಸೆಹ್ವಾಗ್ ಹೆಸರೆಳೆದು ಹೇಳಿದ್ದೇನು?
ಏಕದಿನ ಸರಣಿಯಲ್ಲಿ ಸತತ ಮೂರು ಸಲ ಸಿಂಗಲ್ ಡಿಜಿಟ್; 13 ವರ್ಷಗಳ ಬಳಿಕ ಮತ್ತೆ ಕೆಟ್ಟ ದಾಖಲೆಗೆ ಪಾತ್ರರಾದ ವಿರಾಟ್ ಕೊಹ್ಲಿ..!