ಸುತ್ತಾಮುತ್ತ ನನ್ನ ಪ್ರೀತಿಸುವ ಜನರಿದ್ದರೂ ನನ್ನಲ್ಲಿ ಒಂಟಿತನ ಕಾಡಿತ್ತು: ವಿರಾಟ್ ಕೊಹ್ಲಿ

By Naveen KodaseFirst Published Aug 18, 2022, 5:43 PM IST
Highlights

ಮಾನಸಿಕ ಆರೋಗ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ ವಿರಾಟ್ ಕೊಹ್ಲಿ
ಆಟಗಾರರಿಗೆ ಮಾನಸಿಕ ಆರೋಗ್ಯ ಉತ್ತಮವಾಗಿರಬೇಕು ಎಂದ ಮಾಜಿ ನಾಯಕ
ತಮಗೂ ಒಂಟಿತನ ಕಾಡಿತ್ತು ಎಂದು ಒಪ್ಪಿಕೊಂಡ ಕಿಂಗ್ ಕೊಹ್ಲಿ

ನವದೆಹಲಿ(ಆ.18): ಟೀಂ ಇಂಡಿಯಾ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್‌ ತಂಡದ ನಾಯಕನಾಗಿದ್ದ ಸಂದರ್ಭದಲ್ಲಿ ತಂಡವನ್ನು ಅತ್ಯುನ್ನತ ಹಂತಕ್ಕೇರಿಸಿದ್ದರು. ಯುವ ಕ್ರಿಕೆಟಿಗರ ಪಾಲಿಗೆ ಐಕಾನ್ ಆಟಗಾರ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಕೂಡಾ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ತಾವು ಕೂಡಾ ಮಾನಸಿಕ ಒತ್ತಡವನ್ನು ಅನುಭವಿಸಿದ್ದರ ಬಗ್ಗೆ ತುಟಿ ಬಿಚ್ಚಿದ್ದಾರೆ. 

ಡೆಲ್ಲಿ ಮೂಲದ 33 ವರ್ಷದ ಕ್ರಿಕೆಟಿಗ ಬ್ಯಾಟಿಂಗ್ ಹಾಗೂ ಕ್ಷೇತ್ರರಕ್ಷಣೆಯ ಸಂದರ್ಭದಲ್ಲಿ ಆಕ್ರಮಣಕಾರಿ ಮನೋಭಾವದ ಮೂಲಕ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಆದರೆ ಕಳೆದ ಮೂರು ವರ್ಷಗಳಿಂದ ಕಿಂಗ್ ಕೊಹ್ಲಿ ರನ್ ಬರ ಅನುಭವಿಸುತ್ತಾ ಬಂದಿದ್ದಾರೆ. ಇತ್ತೀಚಿಗಿನ ಮಾಧ್ಯಮ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ, ಮಾನಸಿಕ ಆರೋಗ್ಯದ ಕುರಿತಂತೆ ಮುಕ್ತವಾಗಿ ಮಾತನಾಡಿದ್ದಾರೆ. 

ಟೀಂ ಇಂಡಿಯಾ  ಮಾಜಿ ನಾಯಕ ವಿರಾಟ್ ಕೊಹ್ಲಿ, The Indian Express ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಮೇಲಾಗುವ ಒತ್ತಡದಿಂದಾಗಿ, ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ವೈಯುಕ್ತಿಕವಾಗಿಯೇ ಇದು ನನಗೆ ಅನುಭವಕ್ಕೆ ಬಂದಿದೆ. ನನ್ನ ಸುತ್ತಮುತ್ತ ನನ್ನನ್ನು ಇಷ್ಟಪಡುವ ಹಾಗೂ ಬೆಂಬಲಿಸುವ ಜನರಿದ್ದರೂ ಸಹಾ, ನನ್ನಲ್ಲಿ ಒಂಟಿತನ ಕಾಡಿತ್ತು. ಇದೇ ರೀತಿಯ ಅನುಭವ ಸಾಕಷ್ಟು ಜನರಿಗೂ ಆಗಿರಬಹುದು ಎಂದು ಭಾವಿಸಿದ್ದೇನೆಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Virat Kohli ಅಂತಾರಾಷ್ಟ್ರೀಯ ಪಾದಾರ್ಪಣೆಗೆ 14 ವರ್ಷ ಭರ್ತಿ; ವಿಡಿಯೋ ಸಂದೇಶ ರವಾನಿಸಿದ ಕಿಂಗ್ ಕೊಹ್ಲಿ..!

ಮಾನಸಿಕ ಆರೋಗ್ಯ ಎನ್ನುವುದು ಒಂದು ಗಂಭೀರ ವಿಚಾರವಾಗಿದೆ. ಎಲ್ಲಿಯವರೆಗೂ ನಾವು ಗಟ್ಟಿಯಾಗಿರುವುದಿಲ್ಲವೋ ಅಲ್ಲಿಯವರೆಗೂ ನಿಮ್ಮನ್ನು ಕಾಡುತ್ತಲೇ ಇರುತ್ತದೆ. ಆಟಗಾರರು ಒತ್ತಡದಲ್ಲಿದ್ದಾಗ ಕೆಲ ಕಾಲ ವಿಶ್ರಾಂತಿ ಪಡೆಯಬೇಕು ಹಾಗೂ ಸ್ವಲ್ಪ ಸುಧಾರಿಸಿಕೊಂಡ ಬಳಿಕ ಮತ್ತೆ ಕಣಕ್ಕಿಳಿಯಬೇಕು ಎಂದು ಹೇಳಿದ್ದಾರೆ. ವಿಶ್ವದ ಅತಿಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್‌ಗಳಲ್ಲಿ ಒಬ್ಬರೆನಿಸಿಕೊಂಡಿರುವ ವಿರಾಟ್ ಕೊಹ್ಲಿ, 2019ರಿಂದೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕವನ್ನೇ ಬಾರಿಸಿಲ್ಲ. 2019ರಲ್ಲಿ ಕೋಲ್ಕತಾದ ಈಡನ್‌ಗಾರ್ಡನ್ಸ್‌ ಮೈದಾನದಲ್ಲಿ ಬಾಂಗ್ಲಾದೇಶ ಎದುರು ನಡೆದ ಪಿಂಕ್ ಬಾಲ್ ಟೆಸ್ಟ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಶತಕ ಸಿಡಿಸಿದ್ದರು.
 
ವಿರಾಟ್‌ ಕೊಹ್ಲಿ, ಕಳೆದ ಒಂದೂವರೆ ದಶಕದಿಂದ ಭಾರತ ಕ್ರಿಕೆಟ್‌ ತಂಡದ ಮೂರು ಮಾದರಿಯಲ್ಲೂ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ ಇದುವರೆಗೂ ಭಾರತ ಪರ 102 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 27 ಶತಕ ಸಹಿತ 8,072 ರನ್ ಬಾರಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲೂ ಪ್ರಾಬಲ್ಯ ಮೆರೆದಿರುವ ವಿರಾಟ್ ಕೊಹ್ಲಿ, 262 ಪಂದ್ಯಗಳನ್ನಾಡಿ 43 ಶತಕ ಸಹಿತ 12,344 ರನ್‌ ಬಾರಿಸಿದ್ದಾರೆ.  ಇನ್ನು ಭಾರತ ಪರ 99 ಟಿ20 ಪಂದ್ಯಗಳನ್ನಾಡಿ 50.1ರ ಬ್ಯಾಟಿಂಗ್ ಸರಾಸರಿಯಲ್ಲಿ 3,308 ರನ್ ಬಾರಿಸಿದ್ದಾರೆ.

click me!