
ಲಂಡನ್(ಡಿ.14): ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಫ್ಲಿಂಟಾಫ್, ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಅಪಘಾತ ಸ್ಥಳದಿಂದಲೇ ಏರ್‌ಲಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ. ಬಿಬಿಸಿ ವಾಹಿನಿಯ 'ಟಾಪ್ ಗಿಯರ್' ಎಫಿಸೋಡ್ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.
ಸರ್ರೆಯಲ್ಲಿನ ಡನ್ಸ್‌ಫೋಲ್ಡ್ ಪಾರ್ಕ್ ಏರೋಡ್ರೋಮ್‌ನಲ್ಲಿ ಸಾಕಷ್ಟು ಮಂಜು ಬಿದ್ದ ವಾತಾವರಣದಲ್ಲಿ ಚಿತ್ರೀಕರಣ ಮಾಡುವ ವೇಳೆ 45 ವರ್ಷದ ಫ್ಲಿಂಟಾಫ್ ಅವರಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಇದೀಗ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಬಿಸಿ ಮಾಧ್ಯಮ ಸಂಸ್ಥೆಯು, "ಇಂದು ಮುಂಜಾನೆ, ಟಾಪ್ ಗಿಯರ್ ಟೆಸ್ಟ್ ಟ್ರ್ಯಾಕ್ ಚಿತ್ರೀಕರಣದ ವೇಳೆ ಫ್ರೆಡ್ಡಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ, ತಕ್ಷಣವೇ ವೈದ್ಯಕೀಯ ಸಿಬ್ಬಂದಿಗಳು ಅವರಿಗೆ ಪ್ರಥಮ ಚಿಕಿತ್ಸೆ ಮಾಡಿದ್ದಾರೆ" ಎಂದು ತಿಳಿಸಿದೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗೆ ತಕ್ಷಣವೇ ಅಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಈ ಘಟನೆಯ ಕುರಿತಂತೆ ಇನ್ನಷ್ಟು ಮಾಹಿತಿಯನ್ನು ಸದ್ಯದಲ್ಲಿಯೇ ನಿಮಗೆ ನೀಡಲಿದ್ದೇವೆ ಎಂದು ಬಿಬಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಆಂಡ್ರ್ಯೂ ಫ್ಲಿಂಟಾಫ್ ಅವರು ಈ ಅಪಘಾತವು ಮಾರಣಾಂತಿಕವಲ್ಲವೆಂದು ಹಾಗೂ ಅವರು ಟ್ರ್ಯಾಕ್‌ನಲ್ಲಿ ಸಾಮಾನ್ಯವಾಗಿಯೇ ಡ್ರೈವಿಂಗ್ ಮಾಡುತ್ತಿದ್ದರು, ಅವರು ಅತಿ ವೇಗದ ಚಾಲನೆ ಮಾಡುತ್ತಿರಲಿಲ್ಲವೆಂದು 'ದ ಸನ್' ವರದಿ ಮಾಡಿದೆ. ಈ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ವೈದ್ಯಕೀಯ ಹಾಗೂ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು 'ದ ಸನ್' ವರದಿ ಮಾಡಿದೆ. ಈ ಅಪಘಾತವಾದ ತಕ್ಷಣವೇ ಅವರನ್ನು ಏರ್ ಆಂಬುಲೆನ್ಸ್ ಮೂಲಕ ಏರ್‌ಲಿಫ್ಟ್ ಮಾಡಲಾಯಿತು ಎಂದು ವರದಿಯಾಗಿದೆ.
IPL Auction 2022: ಮಿನಿ ಹರಾಜಿಗೆ 405 ಆಟಗಾರರು ಫೈನಲ್
2019ರಲ್ಲಿಯೂ ಆಂಡ್ರ್ಯೂ ಫ್ಲಿಂಟಾಫ್, ಇದೇ ಟಾಪ್ ಗಿಯರ್, ಎಫಿಸೋಡ್ ಚಿತ್ರೀಕರಣ ವೇಳೆ ಗಂಭೀರವಾಗಿ ಗಾಯಗೊಂಡಿದ್ದರು. 125 ಕಿಲೋಮೀಟರ್ ವೇಗದಲ್ಲಿ ಕಾರು ಚಲಾಯಿಸುವಾಗ ಫ್ಲಿಂಟಾಫ್ ಗಾಯಗೊಂಡಿದ್ದರು. ಇನ್ನು ಗಾಯದಿಂದ ಚೇತರಿಸಿಕೊಂಡ ಬಳಿಕ ಫ್ಲಿಂಟಾಫ್ ತಾವು ಸಂಪೂರ್ಣ ಫಿಟ್ ಇರುವುದಾಗಿ ತಿಳಿಸಿದ್ದರು.
ಇಂಗ್ಲೆಂಡ್ ಕ್ರಿಕೆಟ್ ಕಂಡ ಯಶಸ್ವಿ ಆಲ್ರೌಂಡರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಆಂಡ್ರ್ಯೂ ಫ್ಲಿಂಟಾಫ್, ಇಂಗ್ಲೆಂಡ್ ಪರ 79 ಟೆಸ್ಟ್, 141 ಏಕದಿನ ಹಾಗೂ 7 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 3,845, 3,394 ಹಾಗೂ 76 ರನ್ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ ಫ್ಲಿಂಟಾಫ್ ಒಟ್ಟು 400 ವಿಕೆಟ್ ಕಬಳಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.