ಹೈದರಬಾದ್ ಟೆಸ್ಟ್: ಭಾರತ ಎದುರು ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

By Naveen Kodase  |  First Published Jan 25, 2024, 9:16 AM IST

ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದೆ. ಟೀಂ ಇಂಡಿಯಾ ಮೂವರು ಸ್ಪಿನ್ನರ್‌ಗಳು ಹಾಗೂ ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿದಿದೆ.


ಹೈದರಾಬಾದ್(ಜ.25): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಚಾಲನೆ ಸಿಕ್ಕಿದ್ದು, ಭಾರತ ಎದುರು ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದೆ. ಟೀಂ ಇಂಡಿಯಾ ಮೂವರು ಸ್ಪಿನ್ನರ್‌ಗಳು ಹಾಗೂ ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿದಿದೆ.

Latest Videos

undefined

ಇಂಗ್ಲೆಂಡ್‌ ತಂಡದಲ್ಲಿ ಆ್ಯಂಡರ್‌ಸನ್‌ ಇಲ್ಲ

ಮೊದಲ ಪಂದ್ಯಕ್ಕೆ ಇಂಗ್ಲೆಂಡ್‌ ತಂಡ ಪ್ರಕಟಿಸಲಾಗಿದ್ದು, ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿಲ್ಲ. 3 ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಾಗಿದೆ. ಜ್ಯಾಕ್‌ ಲೀಚ್‌, ರಿಹಾನ್ ಅಹ್ಮದ್‌ ಜೊತೆ ಟಾಮ್‌ ಹಾರ್ಟ್ಲಿ ಚೊಚ್ಚಲ ಬಾರಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮಾರ್ಕ್ ತಂಡದಲ್ಲಿರುವ ಏಕೈಕ ವೇಗಿ.

ಟೀಂ ಇಂಡಿಯಾ ಕಳೆದ 11 ವರ್ಷಗಳಿಂದಲೂ ತವರಿನಲ್ಲಿ ಅಜೇಯವಾಗಿದ್ದು, ಯಾವುದೇ ಟೆಸ್ಟ್‌ ಸರಣಿ ಸೋತಿಲ್ಲ. ಕೊನೆ ಬಾರಿ 2012ರಲ್ಲಿ ತಂಡಕ್ಕೆ ತವರಲ್ಲಿ ಸೋಲು ಎದುರಾಗಿದ್ದು ಇಂಗ್ಲೆಂಡ್‌ ವಿರುದ್ಧವೇ. ಈಗ ಅದೇ ಇಂಗ್ಲೆಂಡ್‌ ವಿರುದ್ಧ ಮತ್ತೆ ಭಾರತ ಸೆಣಸಲಿದ್ದು, ಕ್ರೀಡಾಭಿಮಾನಿಗಲ್ಲಿ ಭಾರೀ ಕುತೂಹಲ ಮನೆ ಮಾಡಿದೆ.

ಇಂಗ್ಲೆಂಡ್‌ ಬ್ಯಾಟರ್ಸ್‌ಗೆ ಅಶ್ವಿನ್‌-ಜಡೇಜಾ ಭೀತಿ!

ಇಂಗ್ಲೆಂಡ್‌ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿದ್ದರೂ ಈ ಬಾರಿ ಸರಣಿಯಲ್ಲಿ ತಂಡದ ಬ್ಯಾಟರ್‌ಗಳಿಗೆ ಹೆಚ್ಚಿನ ಭೀತಿ ಹುಟ್ಟಿಸಿದ್ದು ಅಶ್ವಿನ್‌ ಮತ್ತು ಜಡೇಜಾ. ಇಬ್ಬರೂ ಜೊತೆಯಾಗಿ 49 ಟೆಸ್ಟ್‌ ಆಡಿದ್ದು, ಪಡೆದ ವಿಕೆಟ್‌ಗಳ ಸಂಖ್ಯೆ 500. ತವರಿನ ಪಿಚ್‌ಗಳಲ್ಲಿ ಈ ಇಬ್ಬರು ಎಷ್ಟು ಅಪಾಯಕಾರಿ ಎಂಬುದು ಇಂಗ್ಲೆಂಡ್‌ ಬ್ಯಾಟರ್‌ಗಳಿಗೆ ಅರಿವಿದೆ. ಇನ್ನು ಇಬ್ಬರೂ ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡಲಿದ್ದಾರೆ. ಸರಣಿಯಲ್ಲಿ ಭಾರತದ ಟ್ರಂಪ್‌ಕಾರ್ಡ್‌ ಎನಿಸಿಕೊಳ್ಳುವುದು ಖಚಿತ.

36ನೇ ಸರಣಿ: ಭಾರತ-ಇಂಗ್ಲೆಂಡ್‌ ನಡುವೆ ಇದು 36ನೇ ಟೆಸ್ಟ್‌ ಸರಣಿ. ಈ ವರೆಗಿನ 35ರಲ್ಲಿ 11 ಸರಣಿಯಲ್ಲಿ ಭಾರತ, 19ರಲ್ಲಿ ಇಂಗ್ಲೆಂಡ್‌ ಗೆದ್ದಿದೆ. ಉಳಿದ 5 ಸರಣಿಗಳು ಡ್ರಾಗೊಂಡಿವೆ.

ಆಟಗಾರರ ಪಟ್ಟಿ

ಭಾರತ: ರೋಹಿತ್‌(ನಾಯಕ), ಜೈಸ್ವಾಲ್‌, ಶುಭ್‌ಮನ್‌, ಶ್ರೇಯಸ್‌, ರಾಹುಲ್‌, ಭರತ್‌, ಜಡೇಜಾ, ಅಕ್ಷರ್‌, ಅಶ್ವಿನ್‌, ಬುಮ್ರಾ, ಸಿರಾಜ್‌.

ಇಂಗ್ಲೆಂಡ್(ಆಡುವ 11): ಜ್ಯಾಕ್‌ ಕ್ರಾವ್ಲಿ, ಡಕೆಟ್‌, ಓಲಿ ಪೋಪ್‌, ರೂಟ್‌, ಬೇರ್‌ಸ್ಟೋವ್‌, ಸ್ಟೋಕ್ಸ್‌, ಬೆನ್‌ ಫೋಕ್ಸ್‌, ರಿಹಾನ್‌, ಹಾರ್ಟ್ಲೆ, ವುಡ್‌, ಜ್ಯಾಕ್‌ ಲೀಚ್‌

ಪಿಚ್‌ ರಿಪೋರ್ಟ್:

ಹೈದ್ರಾಬಾದ್‌ ಪಿಚ್‌ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡಿದರೂ, ಬೌಲರ್‌ಗಳೂ ಯಶಸ್ಸು ಸಾಧಿಸಿದ ಉದಾಹರಣೆ ಇದೆ. ಪಂದ್ಯ ಸಾಗಿದಂತೆ ಹೆಚ್ಚು ತಿರುವು ಉಂಟಾಗಲಿದ್ದು, ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚು.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, 
ನೇರಪ್ರಸಾರ: ಜಿಯೋ ಸಿನಿಮಾ, ಸ್ಪೋರ್ಟ್ಸ್‌ 18.

click me!