
ಲಂಡನ್(ಮೇ.26): ನ್ಯೂಜಿಲೆಂಡ್ ವಿರುದ್ದ ತವರಿನಲ್ಲಿ ಜೂನ್ 02ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಗಾಯದ ಸಮಸ್ಯೆಯಿಂದಾಗಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೆನ್ ಫೋಕ್ಸ್ ಇಂಗ್ಲೆಂಡ್ ಕ್ರಿಕೆಟ್ ತಂಡದಿಂದ ಹೊರಬಿದ್ದಿದ್ದಾರೆ.
ಕೌಂಟಿ ಚಾಂಪಿಯನ್‌ಶಿಪ್‌ನ ಸರ್ರೆ ಹಾಗೂ ಮಿಡಲ್‌ಸೆಕ್ಸ್ ನಡುವಿನ ಪಂದ್ಯದ ವೇಳೆ ಬೆನ್ ಫೋಕ್ಸ್ ಡ್ರೆಸ್ಸಿಂಗ್ ರೂಮ್‌ನಲ್ಲೇ ಜಾರಿ ಬಿದ್ದು ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಪಂದ್ಯವನ್ನೇ ಆಡದ ಜೇಮ್ಸ್ ಬ್ರಾಸಿ, ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ವಿಕೆಟ್ ಕೀಪರ್ ಪಾತ್ರ ನಿಭಾಯಿಸಲಿದ್ದಾರೆ. ಇನ್ನುಳಿದಂತೆ ಮೀಸಲು ಆಟಗಾರರಾಗಿ ಹಸೀಬ್ ಹಮೀದ್ ಹಾಗೂ ಸ್ಯಾಮ್ ಬಿಲ್ಲಿಂಗ್ಸ್‌ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಬುಲಾವ್ ನೀಡಿದೆ.
ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ
ಹಸೀಬ್ ಹಮೀದ್ ಇಂಗ್ಲೆಂಡ್ ತಂಡದಲ್ಲಿ 2016ರ ನವೆಂಬರ್‌ನಲ್ಲಿ ಕಡೆಯ ಬಾರಿಗೆ ಕಾಣಿಸಿಕೊಂಡಿದ್ದರು. ಹಸೀಬ್ ಹಮೀದ್ 2021ನೇ ಸಾಲಿನ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ 52.66ರ ಬ್ಯಾಟಿಂಗ್ ಸರಾಸರಿಯಲ್ಲಿ 474 ರನ್ ಚಚ್ಚುವ ಮೂಲಕ ಗಮನ ಸೆಳೆದಿದ್ದಾರೆ. ಇನ್ನು ಸ್ಯಾಮ್ ಬಿಲ್ಲಿಂಗ್ಸ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ.
ನ್ಯೂಜಿಲೆಂಡ್ ಎದುರಿನ ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ:
ಜೋ ರೂಟ್(ನಾಯಕ), ಜೇಮ್ಸ್ ಆ್ಯಂಡರ್‌ಸನ್, ಜೇಮ್ಸ್ ಬ್ರಾಸಿ, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜಾಕ್ ಕ್ರಾವ್ಲಿ, ಡೇನಿಯಲ್ ಲಾರೆನ್ಸ್, ಜಾಕ್ ಲೀಚ್, ಕ್ರೇಗ್ ಓವರ್‌ಟನ್, ಓಲಿ ಪೋಪ್, ಓಲಿ ರಾಬಿನ್‌ಸನ್, ಡಾಮ್ ಸಿಬ್ಲಿ, ಓಲಿ ಸ್ಟೋನ್, ಮಾರ್ಕ್ ವುಡ್.
ಕವರ್ ಪ್ಲೇಯರ್: ಸ್ಯಾಮ್ ಬಿಲ್ಲಿಂಗ್ಸ್, ಹಸೀಬ್ ಹಮೀದ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.