
ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ಐತಿಹಾಸಿಕ ದಾಖಲೆ ನಿರ್ಮಿಸಿರುವ ಟೀಂ ಇಂಡಿಯಾ, ಇದೀಗ ಸತತ ಎರಡು ಟಿ20 ಸರಣಿ ಸೋತು ಮುಖಭಂಗ ಅನುಭವಿಸಿದೆ. ಐರ್ಲೆಂಡ್ ಎದುರು 0-2 ಅಂತರದಲ್ಲಿ ವೈಟ್‌ವಾಷ್ ಅನುಭವಿಸಿದ್ದ ಟೀಂ ಇಂಡಿಯಾ, ಇದೀಗ ಇಂಗ್ಲೆಂಡ್ ಎದುರು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 3-0 ಅಂತರದಲ್ಲಿ ಟಿ20 ಸರಣಿಯನ್ನು ಕೈಚೆಲ್ಲಿದೆ. ಭಾರತ ತಂಡದ ಈ ನೀರಸ ಪ್ರದರ್ಶನ, ಟೀಮ್ ಮ್ಯಾನೇಜ್‌ಮೆಂಟ್ ಹಾಗೂ ಆಯ್ಕೆ ಸಮಿತಿಯ ಮೇಲೆ ಟೀಕೆಯ ಮಳೆಯೇ ಹರಿದು ಬರುತ್ತಿದೆ. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿ ಮುಂಬರುವ ಸರಣಿಗೂ ಮುನ್ನ ಕೆಲವೊಂದು ಕಠಿಣ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೀಗಾದಲ್ಲಿ ಇಂಗ್ಲೆಂಡ್ ಎದುರಿನ ಪ್ರವಾಸವೇ ಭಾರತದ ಈ ಮೂವರು ಆಟಗಾರರ ಪಾಲಿಗೆ ಕೊನೆಯ ಸರಣಿಯಾಗುವ ಸಾಧ್ಯತೆಯಿದೆ.
ಅಷ್ಟಕ್ಕೂ ಟಿ20 ಕ್ರಿಕೆಟ್ ಸಂಕಷ್ಟಕ್ಕೆ ದೂಡಿಕೊಂಡ ಆ ಮೂವರು ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.
ಟೀಂ ಇಂಡಿಯಾ ವೇಗದ ಬೌಲರ್ ಪ್ರಸಿದ್ದ್ ಕೃಷ್ಣ ಟಿ20 ಕ್ರಿಕೆಟ್‌ನಲ್ಲಿ ಪದೇ ಪದೇ ದುಬಾರಿ ಬೌಲರ್ ಎನಿಸಿಕೊಳ್ಳುತ್ತಿದ್ದಾರೆ. ಪ್ರಸಿದ್ದ್ ಕೃಷ್ಣ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರು ತಲಾ ಒಂದೊಂದು ಪಂದ್ಯವನ್ನಾಡಿದ್ದರು. ಈ ಎರಡೂ ಪಂದ್ಯದಲ್ಲೂ ಪ್ರಸಿದ್ದ್ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಪ್ರಸಿದ್ದ್ ಕೃಷ್ಣಗೆ ಮುಂಬರುವ ದಿನಗಳಲ್ಲಿ ಭಾರತ ಟಿ20 ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ ಎನಿಸಿದೆ.
ಸ್ಪಿನ್ ಬೌಲಿಂಗ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಕೂಡಾ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದು, ಇದೀಗ ಟಿ20 ತಂಡದಿಂದ ಹೊರಬೀಳುವ ಭೀತಿಗೆ ಸಿಲುಕಿದ್ದಾರೆ. ತಮಿಳುನಾಡು ಮೂಲದ ಆಲ್ರೌಂಡರ್ ಕಳೆದ ಕೆಲವು ಪಂದ್ಯಗಳಲ್ಲಿ ನಿರಂತರವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ದಯನೀಯ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಸುಂದರ್ ಮುಂಬರುವ ದಿನಗಳಲ್ಲಿ ಭಾರತ ಟಿ20 ತಂಡದಿಂದ ಹೊರಬೀಳುವ ಭೀತಿಗೆ ಸಿಲುಕಿದ್ದಾರೆ.
ಪ್ರಸಿದ್ದ್ ಕೃಷ್ಣ ಹಾಗೂ ವಾಷಿಂಗ್ಟನ್ ಸುಂದರ್ ಈ ಇಬ್ಬರು ಆಟಗಾರರು ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲೂ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಒಂದು ವೇಳೆ ಈ ಇಬ್ಬರು ಆಟಗಾರರು ಏಕದಿನ ಸರಣಿಯಲ್ಲೂ ಫೇಲ್ ಆದ್ರೆ, ಬಹುತೇಕ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡದ ಬಾಗಿಲು ಈ ಇಬ್ಬರು ಆಟಗಾರರಿಗೆ ಶಾಶ್ವತವಾಗಿ ಮುಚ್ಚಿದರೂ ಅಚ್ಚರಿಯೇನಿಲ್ಲ.
ಟೀಂ ಇಂಡಿಯಾ ಉಪನಾಯಕ ತಿಲಕ್ ವರ್ಮಾ ಇಂಗ್ಲೆಂಡ್ ಸರಣಿಯಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡುತ್ತಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳ ಎದುರು ತಿಲಕ್ ವರ್ಮಾ ರನ್ ಗಳಿಸಲು ಪರದಾಡುತ್ತಿದ್ದಾರೆ. ಮಂದಗತಿಯಲ್ಲಿ ಬ್ಯಾಟ್ ಬೀಸುತ್ತಿರುವ ತಿಲಕ್ ವರ್ಮಾ, ಕೆಟ್ಟ ಹೊಡೆತಕ್ಕೆ ಕೈಹಾಕಿ ವಿಕೆಟ್ ಕೈಚೆಲ್ಲುತ್ತಿದ್ದಾರೆ. ಹೀಗಾಗಿ ತಿಲಕ್ ವರ್ಮಾ ಅವರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಬದುಕು ಕೂಡಾ ಕವಲು ದಾರಿಯಲ್ಲಿದೆ.
ಸದ್ಯದ ತಿಲಕ್ ವರ್ಮಾ ಅವರ ಪ್ರದರ್ಶನವನ್ನು ಗಮನಿಸಿದರೆ, ಈಗಿರುವ ಉಪನಾಯಕ ಪಟ್ಟವನ್ನು ತಿಲಕ್ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ. ಇದಾದ ಬಳಿಕ ತಿಲಕ್ ವರ್ಮಾ, ಭಾರತ ಟಿ20 ತಂಡದ ಆಡುವ ಹನ್ನೊಂದರ ಬಳಗದಿಂದ ಹೊರಬಿದ್ದರೂ ಅಚ್ಚರಿಯೇನಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.