
ಮೌಂಟ್ ಮಾಂಗನ್ಯುಯಿ(ಫೆ.18): ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್ ಹಾಗೂ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್, ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಇತಿಹಾಸ ನಿರ್ಮಿಸಿದ್ದು, ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎನ್ನುವ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಬ್ರೆಂಡನ್ ಮೆಕ್ಕಲಂ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ನಡೆಯುತ್ತಿರುವ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಮೂರನೇ ದಿನ ಬೆನ್ ಸ್ಟೋಕ್ಸ್ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್‌ನ ಸ್ಕಾಟ್ ಕುಗ್ಗಲಯನ್ ಓವರ್‌ನ ಮೂರನೇ ಎಸೆತವನ್ನು ಸಿಕ್ಸರ್‌ಗಟ್ಟುವ ಮೂಲಕ ಗುರು ಬ್ರೆಂಡನ್ ಮೆಕ್ಕಲಂ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಬೆನ್ ಸ್ಟೋಕ್ಸ್ ಯಶಸ್ವಿಯಾಗಿದ್ದಾರೆ.
ಬಜ್ ಬಾಲ್ ಆಟದ ಮೂಲಕ ಗಮನ ಸೆಳೆಯುತ್ತಿರುವ ಇಂಗ್ಲೆಂಡ್ ತಂಡದ ಪರ ನಾಯಕ ಬೆನ್ ಸ್ಟೋಕ್ಸ್ ಕೇವಲ 33 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್ ಸಿಡಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಅಂತಿಮವಾಗಿ ಬೆನ್ ಸ್ಟೋಕ್ಸ್, ಆಲ್ರಂಡರ್ ಮಿಚೆಲ್ ಬ್ರಾಸ್‌ವೆಲ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
Delhi Test: ಅಕ್ಷರ್-ಅಶ್ವಿನ್ ಆಕರ್ಷಕ ಶತಕದ ಜತೆಯಾಟ; ಆಸ್ಟ್ರೇಲಿಯಾಗೆ ಕೇವಲ 1 ರನ್ ಮುನ್ನಡೆ
ಬೆನ್ ಸ್ಟೋಕ್ಸ್ ಒಟ್ಟು 90 ಟೆಸ್ಟ್ ಪಂದ್ಯಗಳನ್ನಾಡಿ 12 ಶತಕ ಹಾಗೂ 28 ಅರ್ಧಶತಕ ಸಹಿತ 36 ರ ಸರಾಸರಿಯಲ್ಲಿ 5,652 ರನ್ ಬಾರಿಸಿದ್ದಾರೆ. ಇದರ ಜತೆಗೆ 109 ಸಿಕ್ಸರ್ ಸಿಡಿಸಿದ್ದಾರೆ. ಇನ್ನು ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಕಲಂ 101 ಟೆಸ್ಟ್ ಪಂದ್ಯಗಳನ್ನಾಡಿ 12 ಶತಕ ಹಾಗೂ 31 ಅರ್ಧಶತಕ ಸಹಿತ 38.64ರ ಬ್ಯಾಟಿಂಗ್ ಸರಾಸರಿಯಲ್ಲಿ 6,453 ರನ್ ಬಾರಿಸಿದ್ದಾರೆ. ಸ್ಪೋಟಕ ಬ್ಯಾಟರ್ ಮೆಕ್ಕಲಂ, ಟೆಸ್ಟ್ ಕ್ರಿಕೆಟ್‌ನಲ್ಲಿ 107 ಸಿಕ್ಸರ್ ಸಿಡಿಸಿದ್ದರು.
ಇನ್ನು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡುವುದಾದರೇ, ಇಂಗ್ಲೆಂಡ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ 374 ರನ್‌ಗಳಿ ಸರ್ವಪತನವಾಗುವ ಮೂಲಕ, ನ್ಯೂಜಿಲೆಂಡ್‌ಗೆ ಗೆಲ್ಲಲು 394 ರನ್‌ಗಳ ಗುರಿ ನೀಡಿದೆ. ಇನ್ನು ಕಠಿಣ ಗುರಿ ಬೆನ್ನತ್ತಿರುವ ನ್ಯೂಜಿಲೆಂಡ್ ತಂಡವು ಮೂರನೇ ದಿನದಾಟದ ಅಂತ್ಯದ ವೇಳೆಗೆ ಕೇವಲ 63 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಸ್ಟುವರ್ಟ್ ಬ್ರಾಡ್ ಕೇವಲ 21 ರನ್ ನೀಡಿ 4 ವಿಕೆಟ್ ಪಡೆದರೆ, ಓಲಿ ರಾಬಿನ್‌ಸನ್ ಒಂದು ವಿಕೆಟ್ ಕಬಳಿಸಿದ್ದಾರೆ. ಇನ್ನು ನ್ಯೂಜಿಲೆಂಡ್ ಪರ ಡೇರಲ್ ಮಿಚೆಲ್(13) ಹಾಗೂ ಮಿಚೆಲ್ ಬ್ರಾಸ್‌ವೆಲ್(25) ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.