ನಿಮ್ಮೆದರು ಆಡಿದ್ದೇ ನನ್ನ ಪಾಲಿನ ಸೌಭಾಗ್ಯವೆಂದ ಜೋಸ್ ಬಟ್ಲರ್..!

By Suvarna NewsFirst Published Aug 16, 2020, 12:13 PM IST
Highlights

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳುತ್ತಿದ್ದಂತೆಯೇ ಇಂಗ್ಲೆಂಡ್ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಭಾವನಾತ್ಮಕವಾಗಿ ಶುಭ ಕೋರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಆ.16): ಚಾಣಾಕ್ಷ ವಿಕೆಟ್‌ ಕೀಪರ್, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ 16 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ದಿಢೀರ್ ನಿವೃತ್ತಿ ಘೋಷಣೆಗೆ ಕ್ರಿಕೆಟ್‌ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ.

ಧೋನಿ ಕ್ರಿಕೆಟ್ ಪಯಣವನ್ನು ಮೆಲುಕು ಹಾಕುತ್ತಲೇ ಭವಿಷ್ಯದ ಜೀವನಕ್ಕೆ ಹಲವು ಹಿರಿ-ಕಿರಿಯ ಆಟಗಾರರು ಶುಭ ಕೋರಿದ್ದಾರೆ. ಅದರಲ್ಲೂ ಧೋನಿ ತನ್ನ ಪಾಲಿನ ಹೀರೋ ಎಂದು ಯಾವಾಗಲೂ ಕರೆಯುವ ಇಂಗ್ಲೆಂಡ್ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕವಾಗಿ ಶುಭ ಕೋರಿದ್ದಾರೆ.

ಈ ಐವರು ಯಶಸ್ವಿ ಕ್ರಿಕೆಟಿಗರ ಹಿಂದಿದೆ ಧೋನಿ ಕೈವಾಡ..!

ನನ್ನನ್ನು ಸೇರಿದಂತೆ ಜಗತ್ತಿನ ಮೂಲೆ ಮೂಲೆಯಲ್ಲಿರುವ ಲಕ್ಷಾಂತರ ಅಭಿಮಾನಿಗಳ ಹೀರೋ ಧೋನಿ, ನಿಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಅತ್ಯದ್ಭುತ ಕ್ಷಣಗಳನ್ನು ನೀಡಿದ್ದಕ್ಕೆ ನಿಮಗೆ ಅಭಿನಂದನೆಗಳು. ನಾನು ನಿಮ್ಮೆದುರು ಆಡಿದ್ದೇನೆ ಎನ್ನುವುದೇ ನನ್ನ ಪಾಲಿಗೆ ಅತಿದೊಡ್ಡ ಗೌರವ ಎಂದು ಬರೆದುಕೊಂಡಿದ್ದಾರೆ.

ಇನ್ನು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹಸೇನ್ ಸಹಾ ಧೋನಿಯನ್ನು ಕೊಂಡಾಡಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ ಕಂಡ ಸೀಮಿತ ಓವರ್‌ಗಳ ಕ್ರಿಕೆಟ್‌ನ ಸರ್ವಶ್ರೇಷ್ಠ ನಾಯಕ ಧೋನಿ ಎಂದು ಗುಣಗಾನ ಮಾಡಿದ್ದಾರೆ.

 ಧೋನಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಜಗತ್ತಿನ ಏಕಮಾತ್ರ ಕ್ಯಾಪ್ಟನ್ ಎನಿಸಿದ್ದಾರೆ. ತಮ್ಮ ದಿಟ್ಟ ನಾಯಕತ್ವದಿಂದಾದಿ ಭಾರತ ಕ್ರಿಕೆಟ್ ತಂಡದ ಚಹರೆಯನ್ನೇ ಬದಲಿಸಿದರು. ಧೋನಿ ಭಾರತ ಪರ 90 ಟೆಸ್ಟ್, 350 ಏಕದಿನ ಹಾಗೂ 98 ಟಿ20 ಪಂದ್ಯಗಳನ್ನಾಡಿದ್ದು, 17 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಧೋನಿ ಚಾಣಾಕ್ಷ ವಿಕೆಟ್‌ ಕೀಪಿಂಗ್‌ ಕೌಶಲ್ಯಕ್ಕೆ ಮಾರುಹೋಗದ ಕ್ರಿಕೆಟ್‌ ಅಭಿಮಾನಿಗಳೇ ಇಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.

click me!