ಟಿ20 ರ‍್ಯಾಂಕಿಂಗ್: ಬಾಬರ್ ಅಜಂ ಅವರ ನಂ.1 ಸ್ಥಾನ ಕಸಿದುಕೊಂಡ ಡೇವಿಡ್ ಮಲಾನ್..!

By Suvarna NewsFirst Published Sep 9, 2020, 2:55 PM IST
Highlights

ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಐಸಿಸಿ ನೂತನ ಟಿ20 ಶ್ರೇಯಾಂಕ ಪ್ರಕಟಗೊಂಡಿದೆ. ಈ ಶ್ರೇಯಾಂಕದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಸೆ.09): ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ನೂತನವಾಗಿ ಬಿಡುಗಡೆಯಾದ ಐಸಿಸಿ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ನಂ.1 ಪಟ್ಟಕ್ಕೇರಿದ್ದಾರೆ. ಇದರೊಂದಿಗೆ ಪಾಕಿಸ್ತಾನ ಟಿ20  ತಂಡದ ನಾಯಕ ಬಾಬರ್ ಅಜಂ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳುವಲ್ಲಿ ಮಲಾನ್ ಯಶಸ್ವಿಯಾಗಿದ್ದಾರೆ.

33 ವರ್ಷದ ಮಲಾನ್ ನಾಲ್ಕು ಸ್ಥಾನ ಮೇಲೇರಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸ್ಥಿರ ಪ್ರದರ್ಶನ ತೋರುವ ಮೂಲಕ (129 ರನ್) ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ನಂ.1 ಸ್ಥಾನ ಅಲಂಕರಿಸಿದ್ದಾರೆ. ಈ ಮೊದಲು ಮಲಾನ್ ಕಳೆದ ವರ್ಷದ ನವೆಂಬರ್‌ನಲ್ಲಿ 2ನೇ ಸ್ಥಾನ ತಲುಪಿದ್ದರು. ಮಲಾನ್ ಹಾಗೂ ಬಟ್ಲರ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯಾದ ವಿರುದ್ಧ ಆತಿಥೇಯ ಇಂಗ್ಲೆಂಡ್ ತಂಡವು 2-1 ಅಂತರದಲ್ಲಿ ಜಯಭೇರಿ ಬಾರಿಸಿತ್ತು.

ICC T20 ರ‍್ಯಾಂಕಿಂಗ್: ಇಂಗ್ಲೆಂಡ್ ಮಣಿಸಿ ಅಗ್ರಸ್ಥಾನಕ್ಕೇರಿದ ಆಸೀಸ್..!

ಇನ್ನುಳಿದಂತೆ ಮಲಾನ್ ಸಹಪಾಠಿಗಳಾದ ಜಾನಿ ಬೇರ್‌ಸ್ಟೋವ್ ಮೂರು ಸ್ಥಾನ ಮೇಲೇರಿ 19ನೇ ಸ್ಥಾನಕ್ಕೆ ಲಗ್ಗೆಯಿಟ್ಟರೆ, ಬಟ್ಲರ್ 40ನೇ ಸ್ಥಾನದಿಂದ ಲಾಗ್‌ ಜಂಪ್ ಮಾಡಿ 28ನೇ ಸ್ಥಾನಕ್ಕೆ ಎಂಟ್ರಿಕೊಟ್ಟಿದ್ದಾರೆ. ಕೇವಲ ಎರಡು ಪಂದ್ಯಗಳಲ್ಲಿ ಬಟ್ಲರ್ 121 ರನ್ ಬಾರಿಸಿದ್ದರು. ಇನ್ನುಳಿದಂತೆ ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ ಮೂರನೇ ಸ್ಥಾನ ಉಳಿಸಿಕೊಂಡಿದ್ದರೆ, ಗ್ಲೆನ್ ಮ್ಯಾಕ್ಸ್ 6ನೇ ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ.

ಬೌಲಿಂಗ್ ವಿಭಾಗವನ್ನು ಗಮನಿಸುವುದಾದರೆ ಈ ಸರಣಿಯಲ್ಲಿ 6 ವಿಕೆಟ್ ಕಬಳಿಸಿದ ಇಂಗ್ಲೆಂಡ್ ಲೆಗ್‌ ಸ್ಪಿನ್ನರ್ ಆದಿಲ್ ರಶೀದ್ ಎರಡು ಸ್ಥಾನ ಮೇಲೇರಿ 7ನೇ ಸ್ಥಾನ ಪ್ರವೇಶಿಸಿದ್ದಾರೆ. ಇನ್ನು ಆಸ್ಟ್ರೇಲಿಯಾದ ಆಸ್ಟನ್ ಅಗರ್ ಮೂರನೇ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು ಆಫ್ಘಾನಿಸ್ತಾನದ ಸ್ಪಿನ್ ಜೋಡಿ ರಶೀದ್ ಖಾನ್ ಹಾಗೂ ಮುಜೀಬ್ ಉರ್ ರೆಹಮಾನ್ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲೇ ಮುಂದುವರೆದಿದ್ದಾರೆ.

click me!