ತಿಲಕ್ ವರ್ಮಾ-ಶ್ರೇಯಸ್ ಗೋಪಾಲ್ 175 ರನ್ ಜತೆಯಾಟ: ದುಲೀಪ್ ಟ್ರೋಫಿಯಲ್ಲಿ ದಕ್ಷಿಣ ವಲಯ ಮೇಲುಗೈ

Kannadaprabha News   | Kannada Prabha
Published : Sep 01, 2026, 11:15 AM IST
Tilak Verma

ಸಾರಾಂಶ

ದುಲೀಪ್‌ ಟ್ರೋಫಿ ಸೆಮಿಫೈನಲ್‌ನಲ್ಲಿ ತಿಲಕ್ ವರ್ಮಾ ಅವರ ಅಜೇಯ ಶತಕ ಹಾಗೂ ಶ್ರೇಯಸ್ ಗೋಪಾಲ್ ಅವರ ಅರ್ಧಶತಕದ ನೆರವಿನಿಂದ ದಕ್ಷಿಣ ವಲಯವು ಉತ್ತರ ವಲಯದ ವಿರುದ್ಧ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಮತ್ತೊಂದು ಪಂದ್ಯದಲ್ಲಿ, 15 ವರ್ಷದ ವೈಭವ್‌ ಸೂರ್ಯವಂಶಿ 57 ವರ್ಷಗಳ ಹಿಂದಿನ ದಾಖಲೆ ಮುರಿದು ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಗಳಿಸಿದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಬೆಂಗಳೂರು: ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಕಳೆದ ಬಾರಿ ರನ್ನರ್‌-ಅಪ್‌ ದಕ್ಷಿಣ ವಲಯ ತಂಡವು ಉತ್ತರ ವಲಯ ವಿರುದ್ಧ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ತಂಡ 2ನೇ ದಿನದಂತ್ಯಕ್ಕೆ 9 ವಿಕೆಟ್‌ ನಷ್ಟದಲ್ಲಿ 285 ರನ್‌ ಕಲೆಹಾಕಿದ್ದು, 90 ರನ್‌ ಮುನ್ನಡೆಯಲ್ಲಿದೆ.

ನಗರದ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸಲೆನ್ಸ್‌ನ 2ನೇ ಮೈದಾನದಲ್ಲಿ ನಡೆಯುತ್ತಿರುವ ಸೆಮಿಫೈನಲ್‌ನಲ್ಲಿ ಮೊದಲ ದಿನ ಉತ್ತರ ವಲಯವು 195 ರನ್‌ಗೆ ಆಲೌಟಾಗಿತ್ತು. ಇದಕ್ಕೆ ಉತ್ತರವಾಗಿ ದಿನದಂತ್ಯಕ್ಕೆ 2 ವಿಕೆಟ್‌ಗೆ 140 ರನ್‌ ಗಳಿಸಿದ್ದ ತಂಡ, ಸೋಮವಾರ ಮೊದಲ ಅವಧಿಯಲ್ಲಿ ಹಿನ್ನಡೆ ಅನುಭವಿಸಿತು. ಗುರ್ನೂರ್‌ ಬ್ರಾರ್‌ ಮೊದಲ ಅವಧಿಯಲ್ಲೇ 3 ವಿಕೆಟ್‌ ಪಡೆದರು. ಹೀಗಾಗಿ ತಂಡ 80 ರನ್‌ ಗಳಿಸುವಷ್ಟರಲ್ಲೇ 5 ವಿಕೆಟ್‌ ನಷ್ಟಕ್ಕೊಳಗಾಯಿತು. ಎನ್‌.ಜಗದೀಶನ್‌(36), ಕನ್ನಡಿಗ ಆರ್‌.ಸ್ಮರಣ್(27), ಹಿಮತೇಜ(0) ಬೇಗನೇ ಔಟಾದರು.

ತಿಲಕ್ ವರ್ಮಾ-ಶ್ರೇಯಸ್ ಗೋಪಾಲ್ ಭರ್ಜರಿ ಜತೆಯಾಟ:

ಈ ವೇಳೆ ತಂಡಕ್ಕೆ ಆಸರೆಯಾಗಿದ್ದು ನಾಯಕ ತಿಲಕ್‌ ವರ್ಮಾ ಹಾಗೂ ಕನ್ನಡಿಗ ಶ್ರೇಯಸ್ ಗೋಪಾಲ್‌. ಈ ಜೋಡಿ 6ನೇ ವಿಕೆಟ್‌ಗೆ ಬರೋಬ್ಬರಿ 175 ರನ್‌ ಕಲೆಹಾಕಿತು. ಈ ಜೋಡಿಯನ್ನು ದಿನದ ಕೊನೆ ಅವಧಿಯಲ್ಲಿ ಅರ್ಶ್‌ದೀಪ್‌ ಸಿಂಗ್‌ ಮುರಿದರು. ಶತಕದ ನಿರೀಕ್ಷೆಯಲ್ಲಿದ್ದ ಶ್ರೇಯಸ್‌ 87 ರನ್‌ಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಕೇವಲ 2 ರನ್‌ ಅಂತರದಲ್ಲಿ 3 ವಿಕೆಟ್‌ ಉರುಳಿದವು. ಮೊದಲ ಬೌಂಡರಿ ಬಾರಿಸಲು 154 ಎಸೆತ ತೆಗೆದುಕೊಂಡಿದ್ದ ತಿಲಕ್‌, 225 ಎಸೆತಗಳಲ್ಲಿ 106 ರನ್‌ ಸಿಡಿಸಿದ್ದು, 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಬ್ರಾರ್‌ 4 ವಿಕೆಟ್‌ ಪಡೆದಿದ್ದಾರೆ.

ಸ್ಕೋರ್‌: ಉತ್ತರ ವಲಯ ಮೊದಲ ಇನ್ನಿಂಗ್ಸ್‌ 195/10, ದಕ್ಷಿಣ ವಲಯ ಮೊದಲ ಇನ್ನಿಂಗ್ಸ್‌ 285/9(2ನೇ ದಿನದಂತ್ಯಕ್ಕೆ) (ತಿಲಕ್‌ ಔಟಾಗದೆ 106, ಶ್ರೇಯಸ್‌ 87, ಗುರ್ನೂರ್‌ 4-70)

ವೈಭವ್‌ ಸ್ಫೋಟಕ 92 ರನ್‌: ಆದ್ರೂ ಪೂರ್ವಕ್ಕಿಲ್ಲ ಮುನ್ನಡೆ

ವೈಭವ್‌ ಸೂರ್ಯವಂಶಿ ಸ್ಫೋಟಕ ಆಟದ ಹೊರತಾಗಿಯೂ ಹಾಲಿ ಚಾಂಪಿಯನ್‌ ಕೇಂದ್ರ ವಲಯ ವಿರುದ್ಧ ಇನ್ನಿಂಗ್ಸ್‌ ಮುನ್ನಡೆ ಸಾಧಿಸಲು ಪೂರ್ವ ವಲಯ ವಿಫಲವಾಗಿದೆ. ಮೊದಲ ವಿಕೆಟ್‌ಗೆ ವೈಭವ್‌ ಹಾಗೂ ಅಭಿಮನ್ಯು ಈಶ್ವರನ್‌ 25.2 ಓವರ್‌ಗಳಲ್ಲಿ 161 ರನ್‌ ಜೊತೆಯಾಟವಾಡಿದರೂ, ತಂಡ ಬಳಿಕ ಕುಸಿತ ಕಂಡು 266ಕ್ಕೆ ಆಲೌಟಾಯಿತು. ಭಾನುವಾರ ಕೇಂದ್ರ ತಂಡವೂ 266 ರನ್‌ಗೆ ಆಲೌಟಾಗಿತ್ತು.

ಪೂರ್ವ ತಂಡ ಪರ ಅಭಿಮನ್ಯು 69 ರನ್‌ ಸಿಡಿಸಿದರೆ, ವೈಭವ್‌ 92 ರನ್‌ ಗಳಿಸಿ ಔಟಾದರು. ಇಶಾನ್‌ ಕಿಶನ್(16), ಕುಮಾರ್‌ ಕುಶಾಗ್ರ(0), ಸುದೀಪ್‌ ಕುಮಾರ್(25), ವಿರಾಟ್‌ ಸಿಂಗ್(5) ಮಿಂಚಲಿಲ್ಲ. ಹರ್ಷ್‌ ದುಬೆ 4, ಆರ್ಯನ್‌ ಪಾಂಡೆ, ಯಶ್‌ ಠಾಕೂರ್‌ ತಲಾ 3 ವಿಕೆಟ್‌ ಕಿತ್ತರು.

ಬಳಿಕ 2ನೇ ಇನ್ನಿಂಗ್ಸ್‌ ಆರಂಭಿಸಿರುವ ರಜತ್‌ ನಾಯಕತ್ವದ ಕೇಂದ್ರ 2ನೇ ದಿನದಂತ್ಯಕ್ಕೆ 3 ವಿಕೆಟ್ ನಷ್ಟದಲ್ಲಿ 45 ರನ್‌ ಗಳಿಸಿದೆ. ಪಂದ್ಯ ಇನ್ನೂ 2 ದಿನ ಬಾಕಿಯಿದೆ.

57 ವರ್ಷ ಹಿಂದಿನ ದಾಖಲೆ ಮುರಿದ ವೈಭವ್‌

15 ವರ್ಷ, 157 ದಿನ ಪ್ರಾಯದ ವೈಭವ್‌ ಈ ಪಂದ್ಯದಲ್ಲಿ 92 ರನ್‌ ಸಿಡಿಸಿದ್ದು, ದುಲೀಪ್‌ ಟ್ರೋಫಿ ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿದ ಅತಿ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ 1969ರಲ್ಲಿ ಲಕ್ಷ್ಮಣ್‌ ಸಿಂಗ್‌ ತಮಗೆ 16 ವರ್ಷಗಳಾಗಿದ್ದಾಗ ಅರ್ಧಶತಕ ಸಿಡಿಸಿದ್ದರು. 57 ವರ್ಷದ ದಾಖಲೆಯನ್ನು ಈಗ ವೈಭವ್‌ ಮುರಿದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

"ಮಗು ಹೊಟ್ಟೆಯಲ್ಲಿದ್ದಾಗಲೇ ಕೈಕೊಟ್ಟಿದ್ದ!" - ಪಾಕಿಸ್ತಾನದ ಸ್ಟಾರ್ ಕ್ರಿಕೆಟರ್‌ನ ಅಸಲಿ ಮುಖವಾಡ ಕಳಚಿದ ಮಾಜಿ ಹೆಂಡತಿ!
IPLನಲ್ಲಿ ಮಸ್ತ್ 'ಮಜಾ ಕೊಡುವ ಆಟಗಾರ'ನಿಗೆ ಕೋಕ್: ಬಿಸಿಸಿಐ ಹೊಸ ನಿರ್ಧಾರಕ್ಕೆ ಫ್ರಾಂಚೈಸಿಗಳು ಶಾಕ್