Duleep Trophy ಭಾರತ ಸಿ 525ಕ್ಕೆ ಆಲೌಟ್‌: ‘ಬಿ’ ತಂಡವೂ ದಿಟ್ಟ ಉತ್ತರ

By Kannadaprabha News  |  First Published Sep 14, 2024, 9:01 AM IST

ದುಲೀಪ್ ಟ್ರೋಫಿ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ 'ಸಿ' ಹಾಗೂ ಭಾರತ 'ಬಿ' ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದು, ಉಭಯ ತಂಡಗಳು ಗೆಲುವಿನ ನಾಗಾಲೋಟ ಮುಂದುವರೆಸಿಕೊಂಡು ಹೋಗಲು ಸಜ್ಜಾಗಿವೆ


ಅನಂತಪುರ: ಈ ಬಾರಿ ದುಲೀಪ್‌ ಟ್ರೋಫಿ ಕ್ರಿಕೆಟ್‌ನಲ್ಲಿ ಸತತ 2ನೇ ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತ ‘ಬಿ’ ಹಾಗೂ ‘ಸಿ’ ತಂಡಗಳು ಅದಕ್ಕಾಗಿ ತೀವ್ರ ಹೋರಾಟ ನಡೆಸುತ್ತಿವೆ. ಇತ್ತಂಡಗಳ ನಡುವೆ ನಡೆಯತ್ತಿರುವ ಪಂದ್ಯದಲ್ಲಿ ಭಾರತ ‘ಬಿ’ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 525 ರನ್‌ ಕಲೆಹಾಕಿದೆ. ಇದಕ್ಕೆ ‘ಸಿ’ ತಂಡವೂ ದಿಟ್ಟ ಉತ್ತರ ನೀಡಿದ್ದು, 2ನೇ ದಿನದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 124 ರನ್‌ ಗಳಿಸಿದೆ. ತಂಡ ಇನ್ನೂ 401 ರನ್‌ ಹಿನ್ನಡೆಯಲ್ಲಿದೆ.

ಮೊದಲ ದಿನ 5 ವಿಕೆಟ್‌ಗೆ 357 ರನ್‌ ಕಲೆಹಾಕಿದ್ಧ ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ‘ಸಿ’ ತಂಡ ಶುಕ್ರವಾರವೂ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ಋತುರಾಜ್‌ 58 ರನ್‌ಗೆ ಔಟಾದರೆ, ಮಾನವ್‌ ಸುತಾರ್‌ 156 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್‌ನೊಂದಿಗೆ 82 ರನ್‌ ಸಿಡಿಸಿದರು. ಅನ್ಶುಲ್‌ ಕಂಬೋಜ್‌ 38 ರನ್‌ ಕೊಡುಗೆ ನೀಡಿದರು. ಮುಕೇಶ್‌ ಕುಮಾರ್‌, ರಾಹುಲ್‌ ಚಹರ್‌ ತಲಾ 4 ವಿಕೆಟ್‌ ಕಿತ್ತರು.

Tap to resize

Latest Videos

undefined

ಚಾಂಪಿಯನ್ಸ್‌ ಟ್ರೋಫಿ ಆಡಲು ಟೀಂ ಇಂಡಿಯಾ ಪಾಕ್ ಪ್ರವಾಸ ಮಾಡುತ್ತಾ? ಅಚ್ಚರಿಯ ಅಪ್‌ಡೇಟ್ ಕೊಟ್ಟ ಐಸಿಸಿ!

ಬಳಿಕ ಇನ್ನಿಂಗ್ಸ್‌ ಆರಂಭಿಸಿದ ಬಿ ತಂಡ ಕೂಡಾ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ನಾಯಕ ಅಭಿಮನ್ಯು ಈಶ್ವರನ್‌ ಔಟಾಗದೆ 51 ರನ್‌ ಗಳಿಸಿದ್ದು, ಎನ್‌.ಜಗದೀಶನ್‌(ಔಟಾಗದೆ 67) ಕೂಡಾ ಕ್ರೀಸ್‌ನಲ್ಲಿದ್ದಾರೆ.

ಸ್ಕೋರ್‌: ಭಾರತ ‘ಸಿ’ 525/10 (ಮಾನವ್‌ 82, ಋತುರಾಜ್‌ 58, ರಾಹುಲ್‌ 4-73), ಭಾರತ ‘ಬಿ’ 124/0 (2ನೇ ದಿನದಂತ್ಯಕ್ಕೆ) (ಜಗದೀಶನ್‌ 67*, ಈಶ್ವರನ್‌ 51*)

ಕುಸಿದ ಭಾರತ ‘ಎ’ ತಂಡಕ್ಕೆ ಮುಲಾನಿ, ಕೋಟ್ಯನ್‌ ಆಸರೆ

ಅನಂತಪುರ: ದುಲೀಪ್‌ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ‘ಡಿ’ ವಿರುದ್ಧ ಪಂದ್ಯದಲ್ಲಿ ಆರಂಭಿಕ ಕುಸಿತಕ್ಕೊಳಗಾದ ಭಾರತ ‘ಎ’ ತಂಡಕ್ಕೆ ಶಮ್ಸ್‌ ಮುಲಾನಿ ಹಾಗೂ ತನುಶ್‌ ಕೋಟ್ಯನ್‌ ಆಸರೆಯಾಗಿದ್ದಾರೆ. ಇವರಿಬ್ಬರ ತಲಾ ಅರ್ಧಶತಕದ ಕೊಡುಗೆಯಿಂದಾಗಿ ‘ಎ’ ತಂಡ ಮೊದಲ ದಿನದಂತ್ಯಕ್ಕೆ 8 ವಿಕೆಟ್‌ಗೆ 288 ರನ್‌ ಕಲೆಹಾಕಿದೆ.

‘ಎ’ ತಂಡ 21 ರನ್‌ ಗಳಿಸುವಷ್ಟರಲ್ಲಿ ಆರಂಭಿಕರನ್ನು ಕಳೆದುಕೊಂಡಿತು. ನಾಯಕ ಮಯಾಂಕ್‌ ಅಗರ್‌ವಾಲ್‌ 7 ರನ್‌ಗೆ ಔಟಾದರೆ, ಪ್ರಥಮ್‌ ಸಿಂಗ್‌(7), ತಿಲಕ್‌ ವರ್ಮಾ(10), ಶಾಶ್ವತ್‌ ರಾವತ್‌(15) ಕೂಡ ವಿಫಲರಾದರು. ರಿಯಾನ್‌ ಪರಾಗ್‌(37), ಕುಮಾರ್‌ ಕುಶಾಗ್ರ(28) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ.

ಭಾರತ ಎದುರಿನ ಟೆಸ್ಟ್‌ ಸರಣಿಗೆ ಬಲಿಷ್ಠ ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಕಟ!

93ಕ್ಕೆ 5, 144ಕ್ಕೆ 6 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಮುಲಾನಿ-ತನುಶ್‌ ಆಸರೆಯಾದರು. 7ನೇ ವಿಕೆಟ್‌ಗೆ ಇವರಿಬ್ಬರು 91 ರನ್‌ ಸೇರಿಸಿದರು. ತನುಶ್‌ 53ಕ್ಕೆ ಔಟಾದರೆ, ಶಮ್ಸ್‌ 88 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ವಿದ್ವತ್‌ ಕಾವೇರಪ್ಪ 2 ವಿಕೆಟ್‌ ಪಡೆದರು.

ಸ್ಕೋರ್‌: ಭಾರತ ‘ಎ’ 288/8(ಮೊದಲ ದಿನದಂತ್ಯಕ್ಕೆ) (ಶಮ್ಸ್‌ 88*, ತನುಶ್‌ 53, ವಿದ್ವತ್‌ 2/30)

click me!