Duleep Trophy: ಆಕರ್ಷಕ ಶತಕ ಬಾರಿಸಿದ ಹನುಮ ವಿಹಾರಿ, ದೊಡ್ಡ ಮೊತ್ತದತ್ತ ದಕ್ಷಿಣ ವಲಯ

By Naveen KodaseFirst Published Sep 16, 2022, 9:42 AM IST
Highlights

* ದುಲೀಪ್‌ ಟ್ರೋಫಿ ಟೂರ್ನಿಯಲ್ಲಿ ದಿಟ್ಟ ಆರಂಭ ಪಡೆದ ದಕ್ಷಿಣ ವಲಯ
* ಉತ್ತರ ವಲಯ ವಿರುದ್ದ ಮೊದಲ ದಿನವೇ ಭರ್ಜರಿ ಆರಂಭ ಪಡೆದ ದಕ್ಷಿಣ ವಲಯ
* ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ  ರೋಹಣ್‌ ಕುನ್ನುಮ್ಮಾಲ್‌, ಹನುಮ ವಿಹಾರಿ

ಸೇಲಂ/ಕೊಯಮತ್ತೂರು(ಸೆ.16): ಪ್ರತಿಷ್ಠಿತ ದುಲೀಪ್‌ ಟ್ರೋಫಿ ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತರ ವಲಯದ ವಿರುದ್ಧ ದಕ್ಷಿಣ ವಲಯ ತಂಡ ಮೇಲುಗೈ ಸಾಧಿಸಿದೆ. ಸೇಲಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ದಕ್ಷಿಣ ತಂಡಕ್ಕೆ ರೋಹಣ್‌ ಕುನ್ನುಮ್ಮಾಲ್‌, ನಾಯಕ ಹನುಮ ವಿಹಾರಿ ಶತಕದಾಟ ನೆರವಾಯಿತು. ರೋಹಣ್‌ 143 ರನ್‌ ಸಿಡಿಸಿದರೆ, ವಿಹಾರಿ(107) 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮಯಾಂಕ್‌ ಅಗರ್‌ವಾಲ್‌ 49 ರನ್‌ ಬಾರಿಸಿದರು.

ಕೊಯಮತ್ತೂರಿನಲ್ಲಿ ನಡೆಯುತ್ತಿರುವ ಮತ್ತೊಂದು ಸೆಮೀಸ್‌ನಲ್ಲಿ ಕೇಂದ್ರ ವಲಯದ ವಿರುದ್ಧ ಪಶ್ಚಿಮ ವಲಯ ಸಾಧಾರಣ ಬ್ಯಾಟಿಂಗ್‌ ಪ್ರದರ್ಶಿಸಿತು. ತಂಡ ಮೊದಲ ದಿನದಂತ್ಯಕ್ಕೆ 9 ವಿಕೆಟ್‌ ಕಳೆದುಕೊಂಡು 252 ರನ್‌ ಕಲೆ ಹಾಕಿದೆ. ಪೃಥ್ವಿ ಶಾ 60, ಶಮ್ಸ್‌ ಮುಲಾನಿ 41, ರಾಹುಲ್‌ ತ್ರಿಪಾಠಿ ಔಟಾಗದೆ 64 ರನ್‌ ಬಾರಿಸಿದರು. ಕುಮಾರ್‌ ಕಾರ್ತಿಕೇಯ 5 ವಿಕೆಟ್‌ ಪಡೆದರು.

ಟೆಸ್ಟ್‌: ಭಾರತಕ್ಕೆ ‘ಎ’ಗೆ ಋುತುರಾಜ್‌ ಶತಕದಾಸರೆ

ಬೆಂಗಳೂರು: ನ್ಯೂಜಿಲೆಂಡ್‌ ‘ಎ’ ತಂಡದ ವಿರುದ್ಧ 3ನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಭಾರತ ಸಾಧಾರಣ ಬ್ಯಾಟಿಂಗ್‌ ಪ್ರದರ್ಶಿಸಿದ್ದು, 293 ರನ್‌ಗೆ ಆಲೌಟಾಗಿದೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ತಂಡಕ್ಕೆ ಆರಂಭದಲ್ಲೇ ಆಘಾತ ಎದುದಾಯಿತು. ನಾಯಕ ಪ್ರಿಯಾಂಕ್‌ ಪಾಂಚಾಲ್‌(5) ಬೇಗನೇ ಔಟಾದ ಬಳಿಕ ಋುತುರಾಜ್‌ ಗಾಯಕ್ವಾಡ್‌ ತಂಡಕ್ಕೆ ಅಸರೆಯಾದರು. 127 ಎಸೆತಗಳನ್ನು ಎದುರಿಸಿದ ಅವರು 12 ಬೌಂಡರಿ, 2 ಸಿಕ್ಸರನ್ನೊಳಗೊಂಡ 108 ರನ್‌ ಸಿಡಿಸಿದರು. ವಿಕೆಟ್‌ ಕೀಪರ್‌ ಬ್ಯಾಟರ್‌ ಉಪೇಂದ್ರ ಯಾದವ್‌ 76 ರನ್‌ ಗಳಿಸಿದರೆ, ಅಭಿಮನ್ಯು ಈಶ್ವರನ್‌ 38, ರಜತ್‌ ಪತಿದಾರ್‌ 30 ರನ್‌ ಕೊಡುಗೆ ನೀಡಿದರು. ಮ್ಯಾಥ್ಯೂ ಫಿಶರ್‌ 4 ವಿಕೆಟ್‌ ಕಿತ್ತರು.

ಮುಂಬೈ ಇಂಡಿಯನ್ಸ್‌ಗೆ ಬೌಷರ್‌ ಮುಖ್ಯ ಕೋಚ್‌?

ಮುಂಬೈ: ದ.ಆಫ್ರಿಕಾ ಮಾಜಿ ಕ್ರಿಕೆಟಿಗ ಮಾರ್ಕ್ ಬೌಷರ್‌ ಐಪಿಎಲ್‌ ಫ್ರಾಂಚೈಸಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮುಖ್ಯ ಕೋಚ್‌ ಆಗಿ ನೇಮಕಗೊಳ್ಳಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ಈವರೆಗೆ ಕೋಚ್‌ ಸ್ಥಾನ ನಿಭಾಯಿಸಿದ್ದ ಮಹೇಲಾ ಜಯವರ್ಧನೆ ಅವರನ್ನು ಫ್ರಾಂಚೈಸಿಯು ಜಾಗತಿಕ ಕೋಚ್‌ ಆಗಿ ನೇಮಿಸಿದ್ದು, ಅವರ ಸ್ಥಾನವನ್ನು ಬೌಷರ್‌ ತುಂಬುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

Mumbai Indians ಕೇಪ್‌ಟೌನ್ ತಂಡಕ್ಕೆ ಕೋಚಿಂಗ್ ಸ್ಟಾಪ್ ನೇಮಕ, ಕ್ಯಾಟಿಚ್, ಆಮ್ಲಾಗೆ ಮಹತ್ವದ ಜವಾಬ್ದಾರಿ!

2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಬೌಷರ್‌ 2019ರಿಂದ ದ.ಆಫ್ರಿಕಾ ತಂಡಕ್ಕೆ ಕೋಚ್‌ ಆಗಿ ಕಾರ‍್ಯನಿರ್ವಹಿಸುತ್ತಿದ್ದಾರೆ. ಆದರೆ ಟಿ20 ವಿಶ್ವಕಪ್‌ ಬಳಿಕ ದ.ಆಫ್ರಿಕಾ ಕೋಚ್‌ ಸ್ಥಾನ ತ್ಯಜಿಸಲಿದ್ದಾರೆ ಎಂದು ಅವರು ಘೋಷಿಸಿದ್ದಾರೆ.

click me!