* ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಆರಂಭ
* ವಿರಾಟ್ ಕೊಹ್ಲಿ ಕುರಿತಂತೆ ಪಾಕ್ ತಂಡಕ್ಕೆ ಎಚ್ಚರಿಕೆ ನೀಡಿದ ಯಾಸಿರ್ ಶಾ
* ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ
ಕರಾಚಿ(ಆ.21): ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯನ್ನು ಅಷ್ಟೊಂದು ಸುಲಭವಾಗಿ ಪರಿಗಣಿಸಬೇಡಿ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಲೆಗ್‌ಸ್ಪಿನ್ನರ್ ಯಾಸಿರ್ ಶಾ ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಷ್ಟೇ ಅಲ್ಲದೇ ಐಸಿಸಿ ಟಿ20 ಶ್ರೇಯಾಂಕದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ 32ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇದೆಲ್ಲದರ ನಡುವೆ ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ತಂಡದ ಮೊದಲ ಆಯ್ಕೆಯ ಸ್ಪಿನ್ನರ್ ಯಾಸಿರ್ ಶಾ, ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಗುರವಾಗಿ ಪರಿಗಣಿಸಬೇಡಿ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ವಿರಾಟ್ ಕೊಹ್ಲಿಯನ್ನು ಸುಲಭವಾಗಿ ಪರಿಗಣಿಸಲು ಹೋಗಬೇಡಿ. ಹೌದು, ಅವರು ಸದ್ಯ ಫಾರ್ಮ್‌ನಲ್ಲಿ ಇಲ್ಲದೇ ಇರಬಹುದು. ರನ್‌ಗಳಿಸಲು ಸಾಕಷ್ಟು ಪರದಾಡುತ್ತಿದ್ದಾರೆ. ಆದರೆ ಅವರೊಬ್ಬ ವಿಶ್ವ ದರ್ಜೆಯ ಆಟಗಾರರಾಗಿದ್ದು, ಯಾವುದೇ ಸಮಯದಲ್ಲಾದರೂ ಕಮ್‌ಬ್ಯಾಕ್ ಮಾಡಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ದ ಅತ್ಯದ್ಭುತ ದಾಖಲೆಯನ್ನು ಹೊಂದಿದ್ದಾರೆ. ಕಳೆದ ವರ್ಷ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಏಕಾಂಗಿಯಾಗಿ ಅರ್ಧಶತಕ ಬಾರಿಸಿದ್ದರು. ಹೀಗಿದ್ದೂ ಭಾರತ ತಂಡದ ಎದುರು ಪಾಕಿಸ್ತಾನ ಕ್ರಿಕೆಟ್ ತಂಡವು 10 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿತ್ತು.
ಟೀಂ ಇಂಡಿಯಾ ‘ರನ್ ಮಷಿನ್’ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸದೆ ಈಗಾಗಲೇ 1000 ದಿನಗಳು ಕಳೆದಿವೆ. ಲಯದ ಸಮಸ್ಯೆ ಎದುರಿಸುತ್ತಿರುವ ವಿರಾಟ್, ವೆಸ್ಟ್‌ಇಂಡೀಸ್ ಮತ್ತು ಜಿಂಬಾಬ್ವೆ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದರು. ಏಷ್ಯಾಕಪ್ ಟಿ20ಯಲ್ಲಿ ಕಣಕ್ಕಿಳಿಯಲಿರುವ ಕೊಹ್ಲಿ ಶತಕ ಬಾರಿಸುವ ನಿರೀಕ್ಷೆಯಲ್ಲಿದ್ದಾರೆ. ಕೊನೆಯ ಬಾರಿಗೆ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಶತಕ ಸಿಡಿದಿದ್ದು 2019ರ ನವೆಂಬರ್ 23ರಂದು. ಬಾಂಗ್ಲಾದೇಶ ವಿರುದ್ಧ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದಿದ್ದ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 136 ರನ್ ಗಳಿಸಿದ್ದರು. ಇದಾದ ಬಳಿಕ ಶತಕ ಬಾರಿಸಲು ವಿರಾಟ್ ಕೊಹ್ಲಿಗೆ ಸಾಧ್ಯವಾಗಿಲ್ಲ.
ಯಾವುದೇ ಭದ್ರತೆ ಇಲ್ಲದೆ ಗಲ್ಲಿ ಗಲ್ಲಿಯಲ್ಲಿ ವಿರುಷ್ಕಾ ದಂಪತಿಯ ಸ್ಕೂಟಿ ರೈಡ್, ವಿಡಿಯೋ ವೈರಲ್!
ವಿರಾಟ್ ಕೊಹ್ಲಿ, ಕಳೆದ ಒಂದೂವರೆ ದಶಕದಿಂದ ಭಾರತ ಕ್ರಿಕೆಟ್ ತಂಡದ ಮೂರು ಮಾದರಿಯಲ್ಲೂ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ ಇದುವರೆಗೂ ಭಾರತ ಪರ 102 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 27 ಶತಕ ಸಹಿತ 8,072 ರನ್ ಬಾರಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲೂ ಪ್ರಾಬಲ್ಯ ಮೆರೆದಿರುವ ವಿರಾಟ್ ಕೊಹ್ಲಿ, 262 ಪಂದ್ಯಗಳನ್ನಾಡಿ 43 ಶತಕ ಸಹಿತ 12,344 ರನ್ ಬಾರಿಸಿದ್ದಾರೆ. ಇನ್ನು ಭಾರತ ಪರ 99 ಟಿ20 ಪಂದ್ಯಗಳನ್ನಾಡಿ 50.1ರ ಬ್ಯಾಟಿಂಗ್ ಸರಾಸರಿಯಲ್ಲಿ 3,308 ರನ್ ಬಾರಿಸಿದ್ದಾರೆ.