
ಬೆಂಗಳೂರು(ಆ.21): ಟೀಂ ಇಂಡಿಯಾ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಹಾಗೂ ದೀಪಿಕಾ ಪಲ್ಲಿಕಲ್ 7ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ದಿನೇಶ್ ಕಾರ್ತಿಕ್ ಹಾಗೂ ದೀಪಿಕಾ ಪಲ್ಲಿಕಲ್ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ತಮ್ಮ ದಾಂಪತ್ಯ ಜೀವನಕ್ಕೆ 7 ವರ್ಷ ತುಂಬಿದ ಬೆನ್ನಲ್ಲೇ ತಮ್ಮ ಪತಿ ಜತೆಗಿನ ರೊಮ್ಯಾಂಟಿಕ್ ಫೋಟೋವನ್ನು ದೀಪಿಕಾ ಹಂಚಿಕೊಂಡಿದ್ದಾರೆ.
ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಆಗಸ್ಟ್ 18ರಂದು ತಮ್ಮ ಪತ್ನಿಯ ಜತೆಗಿನ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದರು. ಇದೀಗ ಶನಿವಾರ ದೀಪಿಕಾ ಪಲ್ಲಿಕಲ್ ಕೂಡಾ ರೊಮ್ಯಾಂಟಿಕ್ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದಿನೇಶ್ ಕಾರ್ತಿಕ್ ಹಾಗೂ ದೀಪಿಕಾ ಪಲ್ಲಿಕಲ್ 2015ರ ಆಗಸ್ಟ್ 19ರಂದು ಈ ದಂಪತಿ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇದಾದ ಮರುದಿನ ಅಂದರೆ ಆಗಸ್ಟ್ 20ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.
ದಿನೇಶ್ ಕಾರ್ತಿಕ್ ಸದ್ಯ ಭಾರತ ಟಿ20 ಕ್ರಿಕೆಟ್ ತಂಡದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ದಿನೇಶ್ ಕಾರ್ತಿಕ್, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮ್ಯಾಚ್ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಟೀಂ ಇಂಡಿಯಾಗೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ದಿನೇಶ್ ಕಾರ್ತಿಕ್, ಮುಂಬರುವ ಏಷ್ಯಾಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಈ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ತೋರಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ICC T20 World Cup 2022: ಸೆಪ್ಟೆಂಬರ್ 15ಕ್ಕೆ ಭಾರತ ಕ್ರಿಕೆಟ್ ತಂಡ ಪ್ರಕಟ..!
ಇನ್ನೊಂದೆಡೆ ಸ್ಕ್ವಾಶ್ ಆಟಗಾರ್ತಿಯಾಗಿರುವ ದೀಪಿಕಾ ಪಲ್ಲಿಕಲ್, ಇತ್ತೀಚೆಗಷ್ಟೇ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸ್ಕ್ವಾಶ್ ಮಿಶ್ರ ಡಬಲ್ಸ್‌ನಲ್ಲಿ ದೀಪಿಕಾ, ಸೌರವ್ ಘೋಷಾಲ್ ಜತೆಗೂಡಿ ಪದಕ ಬೇಟೆಯಾಡುವಲ್ಲಿ ಯಶಸ್ವಿಯಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.