
ನವದೆಹಲಿ(ಆ.28): ಭಾರತದಲ್ಲಿ ಮುಂದಿನ 4 ವರ್ಷಗಳ ಜಾಗತಿಕ ಮಟ್ಟದ ಐಸಿಸಿ ಕ್ರಿಕೆಟ್ ಪಂದ್ಯಗಳ ಪ್ರಸಾರ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಇದನ್ನು ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಮೂಲಗಳು ಖಚಿತಪಡಿಸಿದ್ದು, ಡಿಸ್ನಿ ಸ್ಟಾರ್ 2024-2027ರ ಅವಧಿಯಲ್ಲಿ ಟಿ.ವಿ. ಹಾಗೂ ಡಿಜಿಟಲ್‌ನಲ್ಲಿ ಐಸಿಸಿ ಪುರುಷ ಹಾಗೂ ಮಹಿಳಾ ಪಂದ್ಯಗಳನ್ನು ಪ್ರಸಾರ ಮಾಡಲಿದೆ ಎಂದು ತಿಳಿಸಿದೆ. ಆದರೆ ಪ್ರಸಾರ ಹಕ್ಕಿನ ಮೌಲ್ಯವನ್ನು ಬಹಿರಂಗಪಡಿಸಿಲ್ಲ.
ವರದಿಗಳ ಪ್ರಕಾರ ಪ್ರಸಾರ ಹಕ್ಕಿಗೆ ಸ್ಟಾರ್ ಸಂಸ್ಥೆಯು 3 ಬಿಲಿಯನ್ ಯುಎಸ್ ಡಾಲರ್(ಸುಮಾರು 24,000 ಕೋಟಿ ರುಪಾಯಿ) ಪಾವತಿಸಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು 2015-23ರ ಅವಧಿಗೆ ಸ್ಟಾರ್ ಸಂಸ್ಥೆಯು 2.1 ಬಿಲಿಯನ್ ಡಾಲರ್(ಸುಮಾರು 16,700 ಕೋಟಿ ರು.)ಗೆ ಪ್ರಸಾರ ಹಕ್ಕನ್ನು ಪಡೆದಿತ್ತು. ಈ ಬಾರಿ ಸ್ಟಾರ್ ಜೊತೆ ಹರಾಜಿನಲ್ಲಿ ವಯಾಕಾಂ 18, ಸೋನಿ ಸ್ಪೋರ್ಟ್ಸ್, ಝೀ ಸಮೂಹ ಸ್ಪರ್ಧೆಯಲ್ಲಿದ್ದವು.
ಕ್ರೀಡಾ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 20ರ ಗಡುವು
ನವದೆಹಲಿ: 2022ರ ಸಾಲಿನ ಕ್ರೀಡಾ ಪ್ರಶಸ್ತಿಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ಅರ್ಜಿ ಅಹ್ವಾನಿಸಿದ್ದು, ಸೆ.20ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಕೋರಿದೆ. ಈ ಬಗ್ಗೆ www.yas.nic.in ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ‘ಕ್ರೀಡಾಪಟುಗಳು ತಮ್ಮ ಅರ್ಜಿಗಳನ್ನು ಸೆಪ್ಟೆಂಬರ್ 20ರ ಮೊದಲು dbtyas-sports.gov.in ವೆಬ್‌ಸೈಟ್‌ನಲ್ಲಿ ಸಲ್ಲಿಸಬೇಕು. ನಿಗದಿತ ದಿನದ ಬಳಿಕ ಸಲ್ಲಿಕೆಯಾದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಕ್ರೀಡಾಪಟುಗಳು ಯಾವುದೇ ವ್ಯಕ್ತಿ/ಸಂಸ್ಥೆಗಳ ನಾಮನಿರ್ದೇಶನವಿಲ್ಲದೇ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಬೇಕು’ ಎಂದು ಸೂಚಿಸಿದೆ.
2ನೇ ಟೆಸ್ಟ್: ಇನಿಂಗ್ಸ್ ಜಯ ಸಾಧಿಸಿದ ಇಂಗ್ಲೆಂಡ್
ಮ್ಯಾಂಚೆಸ್ಟರ್: ದಕ್ಷಿಣ ಆಫ್ರಿಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಇನಿಂಗ್ಸ್ ಹಾಗೂ 85 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದೆ. 264 ರನ್‌ಗಳ ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ಕೇವಲ 179 ರನ್‌ಗಳಿಗೆ ಸರ್ವಪತನ ಕಂಡಿದೆ.
Asia Cup 2022: ಇಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಫೈಟ್..!
ಇಂಗ್ಲೆಂಡ್ ಪರ ವೇಗಿ ಓಲಿ ರಾಬಿಸನ್4, ಜೇಮ್ಸ್ ಆಂಡರ್‌ಸನ್ 3 ವಿಕೆಟ್ ಕಬಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ151 ರನ್‌ಗಳಿಗೆ ಸರ್ವಪತನ ಕಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು ಆರಂಭಿಕ ಆಘಾತದ ಹೊರತಾಗಿಯೂ 9 ವಿಕೆಟ್ ಕಳೆದುಕೊಂಡು 415 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಇನಿಂಗ್ಸ್ ಜಯ ದಾಖಲಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.