ದುಬಾರಿ ಮೊತ್ತಕ್ಕೆ ಐಪಿಎಲ್ ಪ್ರಸಾರ ಹಕ್ಕನ್ನು ಖರೀದಿಸಿದ್ದರೂ, ಜನರಿಗೆ ಫ್ರೀಯಾಗಿ ವೀಕ್ಷಣೆಯ ಅವಕಾಶ ನೀಡಿದ್ದ ಜಿಯೋ ಸಿನಿಮಾಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಡಿಸ್ನಿ+ಹಾಟ್‌ಸ್ಟಾರ್ ಕೂಡ ಮುಂಬರುವ ಏಷ್ಯಾಕಪ್ ಹಾಗೂ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೀಕ್ಷಣೆಯನ್ನು ಜನರಿಗೆ ಉಚಿತವಾಗಿ ನೀಡಲಿದೆ.
ಬೆಂಗಳೂರು (ಜೂ.9): ಓವರ್ ದಿ ಟಾಪ್ ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಶುಕ್ರವಾರ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ನ್ಯೂಸ್ ನೀಡಿದೆ. ತನ್ನೆಲ್ಲಾ ಬಳಕೆದಾರರು ಮುಂಬರುವ ಏಷ್ಯಾಕಪ್ ಹಾಗೂ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನ ಎಲ್ಲಾ ಪಂದ್ಯಗಳನ್ನು ಉಚಿತವಾಗಿ ವೀಕ್ಷಣೆ ಮಾಡಬಹುದು ಎಂದು ಹೇಳಿದೆ. ಐಪಿಎಲ್ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ತನ್ನ ವೀಕ್ಷಕ ಬಳಗವನ್ನು ಕಳೆದುಕೊಂಡಿದ್ದ ಡಿಸ್ನಿ ಹಾಟ್‌ಸ್ಟಾರ್, ಈಗ ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಮುಖೇಶ್ ಅಂಬಾನಿಯವರ ಜಿಯೋ ಸಿನಿಮಾದ ವಿಧಾನವನ್ನೇ ಪ್ರಯತ್ನಿಸಿದೆ. ಆ ಮೂಲಕ ಡಿಸ್ನಿ+ಹಾಟ್‌ಸ್ಟಾರ್ ಭಾರತದಲ್ಲಿ ಜಿಯೋ ಸಿನಿಮಾದ ಬೆಳವಣಿಗೆಯ ಮೇಲೆ ಕಡಿವಾಣ ಹೇರಲು ಬಯಸಿದೆ. ಅಂದಾಜು 20 ಸಾವಿರ ಕೋಟಿಗೂ ಅಧಿಕ ಮೊತ್ತಕ್ಕೆ ಐಪಿಎಲ್‌ನ ಡಿಜಿಟಲ್ ಹಕ್ಕುಗಳನ್ನು ಖರೀದಿ ಮಾಡಿದ್ದ ವಯೋಕಾಮ್ ತನ್ನ ಒಟಿಟಿ ವೇದಿಕೆ ಜಿಯೋ ಸಿನಿಮಾದ ಮೂಲಕ ಈ ಬಾರಿಯ ಐಪಿಎಲ್‌ನ ಎಲ್ಲಾ ಪಂದ್ಯಗಳನ್ನು ಯಾವುದೇ ಕಂಡೀಷನ್ ಇಲ್ಲದೆ ಉಚಿತವಾಗಿ ಜನರಿಗೆ ನೀಡಿತ್ತು. ಇದರಿಂದಾಗಿ ಕಂಪನಿ ಕೂಡ ದಾಖಲೆಯ ಪ್ರಮಾಣದ ವೀಕ್ಷಕರನ್ನು ಪಡೆದುಕೊಂಡಿತ್ತು.
ಚಂದಾದಾರರಾಗುವ ಅಗತ್ಯವಿಲ್ಲ: ಏಷ್ಯಾಕಪ್ ಹಾಗೂ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಡಿಜಿಟಲ್ ವೇದಿಕೆಗಳಲ್ಲಿ ಉಚಿತವಾಗಿ ಜನರಿಗೆ ನೀಡುವ ಮೂಲಕ ದಾಖಲೆ ಪ್ರಮಾಣದ ವೀಕ್ಷಕರನ್ನು ಸೆಳೆದುಕೊಳ್ಳುವ ನಿರ್ಧಾರ ಮಾಡಿದೆ. ಮೊಬೈಲ್‌ನಲ್ಲಿ ಡಿಸ್ನಿ ಹಾಟ್‌ಸ್ಟಾರ್ ಅಪ್ಲಿಕೇಶನ್ ಬಳಕೆ ಮಾಡುತ್ತಿರುವ ವ್ಯಕ್ತಿಗಳು ಏಷ್ಯಾಕಪ್ ಹಾಗೂ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸುವ ಸಲುವಾಗಿ ಯಾವುದೇ ಚಂದಾದಾರಿಕೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಕಂಪನಿ ತಿಳಿಸಿದೆ.
ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್, ಬಳಿಕ ವಿಶ್ವಕಪ್: ತಮ್ಮ ಮೊಬೈಲ್ ಫೋನ್‌ಗಳಲ್ಲಿ ಈ ಅಪ್ಲಿಕೇಶನ್‌ಗಳನ್ನು ಹಾಕಿಕೊಂಡರೆ, ಈ ಎರಡೂ ಟೂರ್ನಿಗಳ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು. ಇದರಿಂದಾಗಿ ಅಂದಾಜು 54 ಕೋಟಿ ಮೊಬೈಲ್ ಬಳಕೆದಾರರು ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಸೆಪ್ಟರಂಬರ್‌ನಲ್ಲಿ ಏಷ್ಯಾಕಪ್ ಟೂರ್ನಿ ನಡೆಯಲಿದ್ದರೆ, ಅಕ್ಟೋಬರ್-ನವೆಂಬರ್‌ನಲ್ಲಿ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ.
ಡಿಸ್ನಿ + ಹಾಟ್‌ಸ್ಟಾರ್ ಮುಖ್ಯಸ್ಥ ಸಜಿತ್ ಶಿವಾನಂದನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಮ್ಮ ಕಂಪನಿಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಒಟಿಟಿ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ವೀಕ್ಷಕರ ಅನುಭವವನ್ನು ಹೆಚ್ಚಿಸಲು ನಾವು ಇಲ್ಲಿಯವರೆಗೆ ಹಲವಾರು ಆವಿಷ್ಕಾರಗಳನ್ನು ಪರಿಚಯಿಸಿದ್ದೇವೆ, ಅದರೊಂದಿಗೆ ನಾವು ಜಾಗತಿಕವಾಗಿ ನಮ್ಮ ವೀಕ್ಷಕರನ್ನು ಸಂತೋಷಪಡಿಸಿದ್ದೇವೆ. ನಾವು ಈಗ ಏಷ್ಯಾ ಕಪ್ ಮತ್ತು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಅನ್ನು ಎಲ್ಲಾ ವೀಕ್ಷಕರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತಿದ್ದೇವೆ. ಇದನ್ನು ಮಾಡುವುದರಿಂದ, ಒಟ್ಟಾರೆ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಕಂಪನಿಗೆ ಸಹಾಯವಾಗುತ್ತದೆ ಎಂದು ನಾವು ನಂಬುತ್ತೇವೆ' ಎಂದು ತಿಳಿಸಿದ್ದಾರೆ.
IPL 2023: ಮುಂಬೈ ಇಂಡಿಯನ್ಸ್ ಮಾಲೀಕತ್ವದಿಂದ ನೀತಾ, ಮುಕೇಶ್ ಅಂಬಾನಿ ಆದಾಯವೆಷ್ಟು?
ಜಿಯೋ ಸಿನಿಮಾಗೆ ದಾಖಲೆಯ ವೀಕ್ಷಕರು:ಇತ್ತೀಚೆಗೆ ಬಿಡುಗಡೆಯಾದ ಹೊಸ ಸ್ಟ್ರೀಮಿಂಗ್ ಸೇವೆ ಜಿಯೋ ಸಿನಿಮಾ ಅಪ್ಲಿಕೇಶನ್ ಇಂಡಿಯನ್ ಪ್ರೀಮಿಯರ್ ಲೀಗ್ 2023 ಫೈನಲ್‌ನಲ್ಲಿ ದಾಖಲೆಯ 3.2 ಕೋಟಿ ವೀಕ್ಷಕರನ್ನು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದೆ. ಇದು ವಿಶ್ವದ ಲೈವ್ ಸ್ಟ್ರೀಮಿಂಗ್ ಈವೆಂಟ್‌ನ ಅತಿ ಹೆಚ್ಚು ವೀಕ್ಷಕರ ದಾಖಲೆಯಾಗಿದೆ. ಜುಲೈ 2019 ರಲ್ಲಿ, ಐಪಿಎಲ್‌ನ ಹಿಂದಿನ ಡಿಜಿಟಲ್ ಸ್ಟ್ರೀಮಿಂಗ್ ಪಾಲುದಾರ ಡಿಸ್ನಿ ಹಾಟ್‌ಸ್ಟಾರ್, ಕ್ರಿಕೆಟ್ ಪಂದ್ಯಕ್ಕಾಗಿ ಏಕಕಾಲದಲ್ಲಿ 25 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಕರನ್ನು ಸೇರಿಸಿತ್ತು. ಹಲವು ವರ್ಷಗಳಿಂದ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಈ ಪಂದ್ಯವು 2019 ರ ODI ವಿಶ್ವಕಪ್‌ನ ಸೆಮಿಫೈನಲ್ ಪಂದ್ಯವಾಗಿದ್ದು, ಇದರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದವು.
Disney+Hotstar ವೀಕ್ಷಣೆಯಲ್ಲಿ ಆರ್ಸಿಬಿ-ಲಖನೌ ಪಂದ್ಯ ದಾಖಲೆ..!