
ಬೆಂಗಳೂರು(ನ.25): 15 ವರ್ಷದ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಕ್ರಿಕೆಟ್ ಲೋಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯುಎಇ ವಿರುದ್ಧ ಭಾರತ ಎ ತಂಡದ ಪರ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿದ ವೈಭವ್, ಲಿಸ್ಟ್ ಎ ಕ್ರಿಕೆಟ್ನಲ್ಲಿ ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದೀಗ ಅವರ ಆಟದ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಆರ್ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ನೀಡಿರುವ ಹಾಸ್ಯಮಯ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
ಭಾರತ ಎ ತಂಡ ಯುಎಇ ನೀಡಿದ್ದ 250 ರನ್ಗಳ ಗುರಿಯನ್ನು ಕೇವಲ 14.2 ಓವರ್ಗಳಲ್ಲಿ ಬೆನ್ನಟ್ಟಿ ಏಳು ವಿಕೆಟ್ಗಳ ಜಯ ಸಾಧಿಸಿತ್ತು. ವೈಭವ್ ಅವರ ದ್ವಿಶತಕದ ಇನ್ನಿಂಗ್ಸ್ ನೋಡಿ ದಿನೇಶ್ ಕಾರ್ತಿಕ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸ್ಕೋರ್ಕಾರ್ಡ್ ನೋಡಿದಾಗ ತಮಗೆ ನಗುವುದನ್ನು ತಡೆಯಲಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ವೈಭವ್ ಅವರ ಇನ್ನಿಂಗ್ಸ್ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್, “ಓಹ್ ದೇವರೇ, ನೀವು ಸ್ಕೋರ್ಕಾರ್ಡ್ ನೋಡಿದ್ದೀರಾ? ಭಾರತ ಎ ವಿರುದ್ಧ ಯುಎಇ. 248 ರನ್ಗಳನ್ನು ಬೆನ್ನಟ್ಟಿದ ಭಾರತ 14 ಓವರ್ಗಳಲ್ಲಿ 253 ರನ್ ಗಳಿಸಿದೆ. ವೈಭವ್ ಸೂರ್ಯವಂಶಿ 53 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದಾರೆ. ಇದು ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ,” ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
“ಕ್ರಿಕೆಟ್ ಆಟ ಯಾವಾಗಲೂ ನಿಮ್ಮನ್ನು ಅಚ್ಚರಿಗೊಳಿಸುತ್ತದೆ ಎಂದು ಹೇಳುತ್ತಾರೆ. ವೈಭವ್ ಎದುರಿಸಿದ 53 ಎಸೆತಗಳಲ್ಲಿ 35 ಎಸೆತಗಳಲ್ಲಿ ಬೌಂಡರಿ ಅಥವಾ ಸಿಕ್ಸರ್ ಬಾರಿಸಿದ್ದಾರೆ. ವಿಡಿಯೋ ಗೇಮ್ಗಳಲ್ಲೂ ಹೀಗೆ ಮಾಡಲು ಸಾಧ್ಯವಿಲ್ಲ. ಯುಎಇ ಆಟಗಾರರ ಬಗ್ಗೆ ನನಗೆ ಕನಿಕರವಾಗುತ್ತಿದೆ. ಇದು ಹಿಂದೆಂದೂ ನೋಡದ, ಊಹಿಸಲೂ ಸಾಧ್ಯವಾಗದ ಪ್ರದರ್ಶನ,” ಎಂದು ಡಿಕೆ ನಗುತ್ತಾ ಹೇಳಿದ್ದಾರೆ. ವೈಭವ್ ಅವರ ಆಟವನ್ನು ನೋಡಿದ ಬಳಿಕ ಸ್ಕೋರ್ಕಾರ್ಡ್ ನೋಡಿ ಇಷ್ಟು ನಗುವುದು ಇದೇ ಮೊದಲು ಎಂದು ಕಾರ್ತಿಕ್ ಹೇಳಿದ್ದಾರೆ. ಅವರ ಪ್ರತಿಕ್ರಿಯೆ ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.
ವೈಭವ್ ಆಟಕ್ಕೆ ಕ್ರಿಕೆಟ್ ಲೋಕವೇ ಬೆರಗು
ಯುಎಇ ವಿರುದ್ಧ ವೈಭವ್ ಆರಂಭದಿಂದಲೇ ಬೌಲರ್ಗಳ ಮೇಲೆ ದಾಳಿ ನಡೆಸಿದರು. ಕೇವಲ 16 ಎಸೆತಗಳಲ್ಲಿ ಅರ್ಧಶತಕ ಹಾಗೂ 28 ಎಸೆತಗಳಲ್ಲಿ ಶತಕ ಪೂರೈಸಿದರು. ನಂತರ 52 ಎಸೆತಗಳಲ್ಲಿ ದ್ವಿಶತಕದ ಗಡಿ ದಾಟಿ ಲಿಸ್ಟ್ ಎ ಕ್ರಿಕೆಟ್ನ ಅತ್ಯಂತ ವೇಗದ ದ್ವಿಶತಕದ ದಾಖಲೆ ನಿರ್ಮಿಸಿದರು.
ಅವರ 204 ರನ್ಗಳ ಇನ್ನಿಂಗ್ಸ್ನಲ್ಲಿ 28 ಸಿಕ್ಸರ್ಗಳು ಸೇರಿದ್ದವು. ಇದರ ಜತೆಗೆ ಏಳು ಬೌಂಡರಿಗಳನ್ನು ಬಾರಿಸಿದ್ದಾರೆ. ಒಂದೇ ಲಿಸ್ಟ್ ಎ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನೂ ವೈಭವ್ ತಮ್ಮದಾಗಿಸಿಕೊಂಡರು. 15 ವರ್ಷದ ಆಟಗಾರನ ಈ ಅಸಾಧಾರಣ ಪ್ರದರ್ಶನಕ್ಕೆ ದಿನೇಶ್ ಕಾರ್ತಿಕ್ ಸೇರಿದಂತೆ ಕ್ರಿಕೆಟ್ ವಲಯದ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಭಾರತ ಎ ತಂಡದ ಸುಲಭ ಗೆಲುವಿನ ಜೊತೆಗೆ ವೈಭವ್ ಅವರ ದಾಖಲೆಯ ಇನ್ನಿಂಗ್ಸ್ ಈ ಪಂದ್ಯವನ್ನು ಟೂರ್ನಿಯ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.