
ಬೆಂಗಳೂರು: ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಇತ್ತೀಚೆಗಷ್ಟೇ ತಾನಾಡಿದ ಆಟಗಾರರನ್ನೊಳಗೊಂಡ ಸಾರ್ವಕಾಲಿಕ ಶ್ರೇಷ್ಠ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿದ್ದರು, ದಿನೇಶ್ ಕಾರ್ತಿಕ್ ಆಯ್ಕೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ ತಂಡದ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಗಳು ವ್ಯಕ್ತವಾಗಿದ್ದವು. ಇದೀಗ ಇದೇ ವಿಚಾರದ ಕುರಿತಾಗಿ ತಮಿಳು ನಾಡು ಮೂಲದ ಮಾಜಿ ಕ್ರಿಕೆಟಿಗ ಡಿಕೆ, ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳ ಎದುರು ಕೈ ಮುಗಿದು ಕ್ಷಮೆಯಾಚನೆ ಮಾಡಿದ್ದಾರೆ.
ಹೌದು, ಭಾರತವು 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಲ್ಲಿದ್ದಾಗಲೇ, ದಿನೇಶ್ ಕಾರ್ತಿಕ್ ಕ್ರಿಕೆಟ್ ವೆಬ್‌ಸೈಟ್ Cricbuzz ಜತೆಗಿನ ಮಾತುಕತೆ ವೇಳೆ ಸಾರ್ವಕಾಲಿಕ ಶ್ರೇಷ್ಠ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿದ್ದರು. ಆದರೆ ಈ ತಂಡದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಮೂರು ಐಸಿಸಿ ಟ್ರೋಫಿ ಗೆಲ್ಲಿಸಿದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಡಿಕೆ ತಮ್ಮ ಕನಸಿನ ತಂಡದಲ್ಲಿ ಸ್ಥಾನ ನೀಡಿರಲಿಲ್ಲ. ಇದು ವ್ಯಾಪಕ ಚರ್ಚೆ ಹಾಗೂ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ದಿನೇಶ್ ಕಾರ್ತಿಕ್ ತಮ್ಮಿಂದ ತಪ್ಪಾಗಿದೆ ಎನ್ನುವುದನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ.
ಸಾರ್ವಕಾಲಿಕ ಶ್ರೇಷ್ಠ ಭಾರತ ಕ್ರಿಕೆಟ್ ತಂಡ ಆಯ್ಕೆ ಮಾಡಿದ ಡಿಕೆ: ಅವಕಾಶ ಕೊಟ್ಟ ಧೋನಿ, ಗಂಗೂಲಿಗೆ ಇಲ್ಲ ಸ್ಥಾನ..!
"ನನ್ನಿಂದ ದೊಡ್ಡ ತಪ್ಪಾಗಿ ಹೋಗಿದೆ. ನನ್ನನ್ನು ಕ್ಷಮಿಸಿಬಿಡಿ" ಎಂದು ದಿನೇಶ್ ಕಾರ್ತಿಕ್, ಧೋನಿ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ. ನನ್ನ ವಿಚಾರವನ್ನು ನಾನಿಲ್ಲಿ ತುಂಬಾ ಸ್ಪಷ್ಟವಾಗಿ ಹೇಳುತ್ತೇನೆ. ಧೋನಿ ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಸಲ್ಲಬಲ್ಲ ದಿಗ್ಗಜ ಕ್ರಿಕೆಟಿಗ. ನನ್ನ ಪ್ರಕಾರ ಅವರೊಬ್ಬ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಈಗ ಒಂದು ವೇಳೆ ಹೊಸದಾಗಿ ತಂಡವನ್ನು ಆಯ್ಕೆ ಮಾಡಿದರೆ, ಧೋನಿಗೆ 7ನೇ ಕ್ರಮಾಂಕದಲ್ಲಿ ಸ್ಥಾನ ನೀಡುತ್ತೇನೆ. ಅದೇ ರೀತಿ ಯಾವುದೇ ಮಾದರಿಯ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿದರೂ ಧೋನಿಯೇ ಕ್ಯಾಪ್ಟನ್ ಆಗಿರುತ್ತಾರೆ ಎಂದು ಡಿಕೆ ಹೇಳಿದ್ದಾರೆ.
ಈ ಮೊದಲು "ನನ್ನ ಕನಸಿನ ತಂಡದಲ್ಲಿ ಆರಂಭಿಕರಾಗಿ ವಿರೇಂದ್ರ ಸೆಹ್ವಾಗ್ ಹಾಗೂ ರೋಹಿತ್ ಶರ್ಮಾ ಇರುತ್ತಾರೆ. ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಇವರಿಬ್ಬರೂ ಉತ್ತಮ ಓಪನ್ನರ್ ಆಗಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ರಾಹುಲ್ ದ್ರಾವಿಡ್, ನಾಲ್ಕನೇ ಕ್ರಮಾಂಕದಲ್ಲಿ ಸಚಿನ್ ತೆಂಡುಲ್ಕರ್ ಹಾಗೂ 5ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ನೀಡುತ್ತೇನೆ" ಎಂದು ಡಿಕೆ ಹೇಳಿದ್ದರು.
ಮುಂದುವರೆದು. ಆರನೇ ಕ್ರಮಾಂಕವನ್ನು ಆಯ್ಕೆ ಮಾಡುವುದು ತುಂಬಾ ಕಷ್ಟವೆನಿಸುತ್ತಿದೆ. ಆರನೇ ಕ್ರಮಾಂಕದಲ್ಲಿ ಆಲ್ರೌಂಡರ್ ಯುವರಾಜ್ ಸಿಂಗ್ ಹಾಗೂ ಏಳನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾಗೆ ಸ್ಥಾನ ನೀಡುತ್ತಿದ್ದೇನೆ. ಇನ್ನು ಎಂಟನೇ ಕ್ರಮಾಂಕದಲ್ಲಿ ರವಿಚಂದ್ರನ್ ಅಶ್ವಿನ್, ಒಂಬತ್ತನೇ ಕ್ರಮಾಂಕದಲ್ಲಿ ಅನಿಲ್ ಕುಂಬ್ಳೆ, 10ನೇ ಕ್ರಮಾಂಕದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ 11ನೇ ಕ್ರಮಾಂಕದಲ್ಲಿ ಜಹೀರ್ ಖಾನ್‌ಗೆ ಸ್ಥಾನ ನೀಡುತ್ತೇನೆ" ಎಂದು ದಿನೇಶ್ ಕಾರ್ತಿಕ್ ಹೇಳಿದ್ದರು. ಇನ್ನು ಹರ್ಭಜನ್ ಸಿಂಗ್‌ಗೆ 12ನೇ ಆಟಗಾರನಾಗಿ ಸ್ಥಾನ ನೀಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.