ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾಗೂ ಆರ್‌ಸಿಬಿಯ ಪ್ರಮುಖ ಪ್ಲೇಯರ್ ಆಗಿದ್ದ ದಿನೇಶ್ ಕಾರ್ತಿಕ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಶನಿವಾರ ವಿದಾಯ ಘೋಷಣೆ ಮಾಡಿದ್ದಾರೆ.
ಚೆನ್ನೈ (ಜೂ.1): ಟೀಮ್ ಇಂಡಿಯಾದ ಅನುಭವಿ ವಿಕೆಟ್ ಕೀಪರ್ ಬ್ಯಾಟ್‌ಮನ್ ಹಾಗೂ ಐಪಿಎಲ್‌ನಲ್ಲಿ ಆರ್‌ಸಿಬಿಯ ಸ್ಟಾರ್ ಪ್ಲೇಯರ್ ಆಗಿದ್ದ 39 ವರ್ಷದ ದಿನೇಶ್ ಕಾರ್ತಿಕ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಶನಿವಾರ ವಿದಾಯ ಘೋಷಣೆ ಮಾಡಿದ್ದಾರೆ. ಈ ಕುರಿತಾದ ಮಾಹಿತಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ನಾನು ಅಧಿಕೃತವಾಗಿ ನನ್ನ ನಿವೃತ್ತಿಯನ್ನು ಘೋಷಿಸುತ್ತೇನೆ ಮತ್ತು ಮುಂದೆ ಇರುವ ಹೊಸ ಸವಾಲುಗಳಿಗೆ ನಾನು ಸಿದ್ಧನಾಗಿರುವಾಗ, ಆಟದ ದಿನಗಳನ್ನು ನನ್ನ ಹಿಂದೆ ಇಡುತ್ತೇನೆ" ಎಂದು ಕಾರ್ತಿಕ್ ಬರೆದುಕೊಂಡಿದ್ದಾರೆ. ಆರ್‌ಸಿಬಿ ಪರವಾಗಿ ಪ್ಲೇಆಫ್‌ನಲ್ಲಿ ಆಡಿದ ಬೆನ್ನಲ್ಲಿಯೇ ಅವರು ನಿವೃತ್ತಿಯಾಗುತ್ತಾರೆ ಎನ್ನಲಾಗಿತ್ತು. ಶನಿವಾರ ಇವರು ಅಧಿಕೃತವಾಗಿ ಇದನ್ನು ಘೋಷಣೆ ಮಾಡಿದ್ದಾರೆ. ಐಪಿಎಲ್ ಮಾತ್ರವಲ್ಲ ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಅವರು ವಿದಾಯ ಹೇಳಿದ್ದಾರೆ. ಐಪಿಎಲ್ ಫ್ರಾಂಚೈಸಿ ಆರ್‌ಸಿಬಿ, ಭಾವುಕ ವಿದಾಯ ನೀಡಿದಾಗಲೇ ದಿನೇಶ್ ಕಾರ್ತಿಕ್ ನಿವೃತ್ತಿ ಹೇಳುತ್ತಾರೆ ಅನ್ನೋದು ಖಚಿತವಾಗಿತ್ತು. ರಾಜಸ್ಥಾನ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೋಲು ಕಂಡ 10 ದಿನಗಳ ಬಳಿಕ ಅವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
'ಕಳೆದ ಕೆಲವು ದಿನಗಳಿಂದ ಸಾಕಷ್ಟು ಯೋಚನೆ ಮಾಡಿದ ಬಳಿಕ, ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಬೇಕು ಎಂದು ನಿರ್ಧಾರ ಮಾಡಿದ್ದೆ. ಈಗ ಅದನ್ನೇ ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದು, ನನ್ನ ಆಟದ ದಿನಗಳನ್ನು ಹಿಂದೆ ಇಡಲು ಬಯಸಿದ್ದು, ಮುಂದಿನ ಸವಾಲುಗಳಿಗೆ ಸಿದ್ಧವಾಗಿದ್ದೇನೆ' ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. RCB vs RR ನಡುವಿನ ಐಪಿಎಲ್ ಎಲಿಮಿನೇಟರ್ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಮಿಳುನಾಡು ಕ್ರಿಕೆಟಿಗನ ಕೊನೆಯ ಪಂದ್ಯ ಎನಿಸಿಕೊಂಡಿತು. ಅದರೊಂದಿಗೆ ಅವರ ಎರಡು ದಶಕಗಳ ಕಾಲ ವೃತ್ತಿಜೀವನ ಇದರೊಂದಿಗೆ ಅಂತ್ಯಗೊಂಡಿತು.
ಈ ಹಂತದಲ್ಲಿ ನನ್ನೆಲ್ಲಾ ಕೋಚ್‌ಗಳು, ನಾಯಕರು, ಆಯ್ಕೆಗಾರರು, ಸಹ ಆಟಗಾರರು ಹಾಗೂ ತಂಡದ ಸಿಬ್ಬಂದಿಗೆ ಈ ಸುದೀರ್ಘ ಪ್ರಯಾಣ ಸಂತೋಷದಿಂದ ಇರುವಂತೆ ನೋಡಿಕೊಂಡಿದ್ದಕ್ಕಾಗಿ ಥ್ಯಾಂಕ್ಸ್ ಹೇಳುತ್ತೇನೆ. ದೇಶದಲ್ಲಿ ಕೋಟ್ಯಂತರ ಮಂದಿ ಕ್ರಿಕೆಟ್ ಆಡುತ್ತಾರೆ. ಆದರೆ, ದೇಶವನ್ನು ಪ್ರತಿನಿಧಿಸುವ ಅವಕಾಶ ನನಗೆ ಸಿಕ್ಕಿದ್ದಕ್ಕೆ ನಾನು ಬಹಳ ಅದೃಷ್ಟವಂತ ಎಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.
ಭಾರತದ ಪರವಾಗಿ 26 ಟೆಸ್ಟ್, 94 ಏಕದಿನ ಹಾಗೂ 60 ಟಿ20 ಪಂದ್ಯಗಳನ್ನು ದಿನೇಶ್ ಕಾರ್ತಿಕ್ ಆಡಿದ್ದರು. ದಿನೇಶ್ ಕಾರ್ತಿಕ್ ತಂಡದಲ್ಲಿ ಪೂರ್ಣ ಪ್ರಮಾಣದ ಸ್ಥಾನ ಪಡೆಯಲು ವಿಫಲರಾದರೂ, ಸಿಕ್ಕ ಅವಕಾಶಗಳಲ್ಲಿ ಅವರು ಮನಸೆಳೆಯುವಂಥ ಪ್ರದರ್ಶನ ನೀಡಿದ್ದರು. ಕಳೆದ ಕೆಲವು ವರ್ಷಗಳಿಂದ ಅವರು ಮೈದಾನಕ್ಕಿಂತ ಹೆಚ್ಚಾಗಿ ಕಾಮೆಂಟರಿ ಬಾಕ್ಸ್‌ಗಳಲ್ಲೇ ಕಾಣಿಸಿಕೊಂಡಿದ್ದರು. ಐಪಿಎಲ್‌ನಲ್ಲಿ ಆಡಿದ 257 ಪಂದ್ಯಗಳಿಂದ 4842 ರನ್ ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮ ಜೊತೆ ಜಂಟಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿ 22 ಅರ್ಧಶತಕವನ್ನೂ ಇವರು ಬಾರಿಸಿದ್ದಾರೆ. ತಮ್ಮ ಐಪಿಎಲ್ ಜೀವನದಲ್ಲಿ ದಿನೇಶ್ ಕಾರ್ತಿಕ್ 17 ಫ್ರಾಂಚೈಸಿಗಳ ಪರವಾಗಿ ಆಡಿದ್ದಾರೆ. 2008ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರವಾಗಿ ಆಡಿದ್ದ ಕಾರ್ತಿಕ್ ಬಳಿಕ, 2011ರಲ್ಲಿ ಪಂಜಾಬ್ ಕಿಂಗ್ಸ್, ಬಳಿಕ ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್, ಕೆಕೆಆರ್ ಹಾಗೂ ಆರ್‌ಸಿಬಿ ಪರ ಆಡಿದ್ದರು.
17 ವರ್ಷದ ಐಪಿಎಲ್‌ನಲ್ಲಿ ಕಾರ್ತಿಕ್ ತಪ್ಪಿಸಿಕೊಂಡಿದ್ದು ಕೇವಲ ಎರಡೇ ಪಂದ್ಯ!
It's official 💖
Thanks
DK 🙏🏽 pic.twitter.com/NGVnxAJMQ3