
ಗಾಲೆ: ಭಾರತ ವಿರುದ್ಧ ನಡೆಯುತ್ತಿರುವ ಗಾಲೆ ಟೆಸ್ಟ್‌ನ ನಾಲ್ಕನೇ ದಿನ ಶ್ರೀಲಂಕಾ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಫೀಲ್ಡಿಂಗ್ ಮಾಡುವಾಗ ಭುಜ ಮತ್ತು ಕುತ್ತಿಗೆಗೆ ಗಂಭೀರವಾಗಿ ಗಾಯಗೊಂಡ ಅನುಭವಿ ಆಟಗಾರ ದಿನೇಶ್ ಚಂಡಿಮಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಗಾಯದಿಂದಾಗಿ ಚಂಡಿಮಾಲ್ ಪಂದ್ಯದಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಅವರ ಬದಲಿಗೆ ಪಸಿಂಧು ಸೂರ್ಯಬಂಡಾರ ಅವರನ್ನು 'ಕನ್ಕಷನ್ ಸಬ್ಸ್ಟಿಟ್ಯೂಟ್' ಆಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಭಾರತದ ಎರಡನೇ ಇನ್ನಿಂಗ್ಸ್ ಆರಂಭದಲ್ಲಿ ಈ ಘಟನೆ ನಡೆದಿದೆ. 36 ವರ್ಷದ ಚಂಡಿಮಾಲ್ ಬೌಂಡರಿ ತಡೆಯಲು ಡೈವ್ ಹೊಡೆದರು. ಈ ವೇಳೆ ಅವರ ಕುತ್ತಿಗೆಯ ಬಲಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮೈದಾನದಲ್ಲೇ ನೋವಿನಿಂದ ಕುಸಿದುಬಿದ್ದರು. ತಕ್ಷಣವೇ ಫಿಸಿಯೋ ಮತ್ತು ತಂಡದ ವೈದ್ಯರು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ನಂತರ ಹೆಚ್ಚಿನ ಪರೀಕ್ಷೆಗಾಗಿ ಅವರನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಲು ಆಸ್ಪತ್ರೆಗೆ ಕರೆದೊಯ್ಯಲಾಯಿತು.
India Tour of Sri Lanka 2026: Team Update
Pasindu Sooriybandara comes in as the 'concussion replacement' for Dinesh Chandimal
Dinesh Chandimal sustained an injury while fielding during the first session of the day fourth day, hitting his shoulder and head hard on the ground.… pic.twitter.com/Hx8DuhksF7— Sri Lanka Cricket 🇱🇰 (@OfficialSLC) August 18, 2026
ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 178 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 193 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ದೇವದತ್ ಪಡಿಕ್ಕಲ್ (44) ಮತ್ತು ಕೆ.ಎಲ್. ರಾಹುಲ್ (35) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಎರಡನೇ ಸೆಷನ್‌ನಲ್ಲಿ ರಿಷಭ್ ಪಂತ್ ಕೇವಲ 8 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 66 ರನ್ ಚಚ್ಚಿ, ಭಾರತದ ಮುನ್ನಡೆಯನ್ನು 350ರ ಗಡಿ ದಾಟಿಸಿದರು. ಇದರೊಂದಿಗೆ ಭಾತ ತಂಡವು ಗಾಲೆ ಟೆಸ್ಟ್ ಪಂದ್ಯವನ್ನು ಗೆಲ್ಲಲು ಆತಿಥೇಯ ಶ್ರೀಲಂಕಾ ತಂಡಕ್ಕೆ 372 ರನ್‌ಗಳ ಕಠಿಣ ಗುರಿ ನೀಡಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕನಸನ್ನು ಜೀವಂತವಾಗಿರಿಸಿಕೊಳ್ಳಲು ಭಾರತ ಹಾಗೂ ಶ್ರೀಲಂಕಾ ಎರಡೂ ತಂಡಗಳಿಗೂ ಈ ಟೆಸ್ಟ್ ಗೆಲುವು ಅತ್ಯಗತ್ಯವಾಗಿದೆ. ಸದ್ಯ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಟಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರೇ, ಶ್ರೀಲಂಕಾ ಆರನೇ ಸ್ಥಾನದಲ್ಲಿದೆ.
ಇಂತಹ ಮಹತ್ವದ ಪಂದ್ಯದಲ್ಲಿ ಬೃಹತ್ ಗುರಿ ಬೆನ್ನಟ್ಟಬೇಕಾದ ಶ್ರೀಲಂಕಾಕ್ಕೆ ಚಂಡಿಮಾಲ್ ಅನುಪಸ್ಥಿತಿ ದೊಡ್ಡ ಹೊಡೆತ ನೀಡಿದೆ. ಸದ್ಯ ಶ್ರೀಲಂಕಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 7 ಓವರ್ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 13 ರನ್ ಗಳಿಸಿದೆ. ಲಂಕಾ ಆರಂಭಿಕ ಬ್ಯಾಟರ್ ನಿಶಾನ್ ಮಧುಶಕಾ 6 ರನ್ ಗಳಿಸಿ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.