ಧವನ್‌, ಪಂತ್‌, ಪಾಂಡ್ಯ ಫಿಫ್ಟಿ: ಇಂಗ್ಲೆಂಡ್‌ಗೆ ಕಠಿಣ ಗುರಿ

By Suvarna NewsFirst Published Mar 28, 2021, 5:29 PM IST
Highlights

ಟೀಂ ಇಂಡಿಯಾದ ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ 329 ರನ್‌ ಬಾರಿಸಿ ಸರ್ವಪತನ ಕಂಡಿದ್ದು, ಪ್ರವಾಸಿ ಇಂಗ್ಲೆಂಡ್‌ಗೆ ಗೆಲ್ಲಲು ಕಠಿಣ ಗುರಿ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಪುಣೆ(ಮಾ.28): ಧವನ್‌, ಪಂತ್‌ ಹಾಗೂ ಹಾರ್ದಿಕ್‌ ಪಾಂಡ್ಯ ಸ್ಪೋಟಕ ಅರ್ಧಶತಕದ ನೆರವಿನಿಂದ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 329 ರನ್‌ ಬಾರಿಸಿದ್ದು, ಪ್ರವಾಸಿ ಇಂಗ್ಲೆಂಡ್‌ ತಂಡ ಸರಣಿ ಗೆಲ್ಲಲು ಕಠಿಣ ಗುರಿ ನೀಡಿದೆ.

ಇಲ್ಲಿನ ಎಂಸಿಎ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್‌ ಜೋಡಿ ಶತಕದ ಜತೆಯಾಟವಾಡುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಸ್ಪೋಟಕ ಆರಂಭ ಒದಗಿಸಿಕೊಟ್ಟ ಈ ಜೋಡಿ ಕೇವಲ 14.4 ಓವರ್‌ಗಳಲ್ಲಿ 103 ರನ್‌ಗಳ ಜತೆಯಾಟ ನಿಭಾಯಿಸಿತು. ಇದರೊಂದಿಗೆ ಈ ಜೋಡಿ ಏಕದಿನ ಕ್ರಿಕೆಟ್‌ನಲ್ಲಿ 17ನೇ ಬಾರಿಗೆ ಶತಕದ ಜತೆಯಾಟವಾಡಿ ಆಡಂ ಗಿಲ್‌ಕ್ರಿಸ್ಟ್ ಹಾಗೂ ಮ್ಯಾಥ್ಯೂ ಹೇಡನ್‌ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಆದಿಲ್‌ ರಶೀದ್‌ ಯಶಸ್ವಿಯಾದರು. ರೋಹಿತ್‌ 37 ರನ್‌ ಬಾರಿಸಿ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್‌ ಸೇರಿದರು. ಇದರ ಬೆನ್ನಲ್ಲೇ ಆಕರ್ಷಕ ಅರ್ಧಶತಕ ಬಾರಿಸಿದ್ದ ಶಿಖರ್ ಧವನ್‌(67) ಕೂಡಾ ಆದಿಲ್‌ ರಶೀದ್‌ ಬೌಲಿಂಗ್‌ನಲ್ಲೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್ ಸೇರಿದರು.

ಗಿಲ್ಲಿ-ಹೇಡನ್‌ ದಾಖಲೆ ಧೂಳೀಪಟ ಮಾಡಿದ ರೋಹಿತ್-ಧವನ್‌ ಜೋಡಿ

India are bowled out for 329!

The last four wickets fell for just eight runs, and England will need to chase down 330 to seal the series. ➡️ https://t.co/HvQMFer0ri pic.twitter.com/GmkRUJBhnx

— ICC (@ICC)

ಕೈಕೊಟ್ಟ ಮಧ್ಯಮ ಕ್ರಮಾಂಕ; ಒಂದು ಹಂತದಲ್ಲಿ 103 ರನ್‌ಗಳ ವರೆಗೆ ಯಾವುದೇ ವಿಕೆಟ್‌ ಕಳೆದುಕೊಳ್ಳದೇ ಬೃಹತ್ ಮೊತ್ತದತ್ತ ಮುನ್ನುಗ್ಗುತ್ತಿದ್ದ ಟೀಂ ಇಂಡಿಯಾ  ರೋಹಿತ್ ವಿಕೆಟ್‌ ಪತನದ ಬಳಿಕ ನಾಟಕೀಯ ಕುಸಿತ ಕಂಡಿತು. ನಾಯಕ ವಿರಾಟ್‌ ಕೊಹ್ಲಿ ಹಾಗೂ ಕಳೆದ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದ್ದ ಕೆ.ಎಲ್‌. ರಾಹುಲ್ ತಲಾ 7 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. 

ತಂಡಕ್ಕೆ ಬಲ ತುಂಬಿದ ಪಾಂಡ್ಯ-ಪಂತ್: ಒಂದು ಹಂತದಲ್ಲಿ 157 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಹಾಗೂ ಹಾರ್ದಿಕ್‌ ಪಾಂಡ್ಯ 5ನೇ ವಿಕೆಟ್‌ಗೆ 99 ರನ್‌ಗಳ ಜತೆಯಾಟವಾಡುವ ಮೂಲಕ ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ಪಂತ್‌ 62 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ ನೆರವಿನಿಂದ 64 ರನ್‌ ಬಾರಿಸಿದರೆ, ಹಾರ್ದಿಕ್‌ ಪಾಂಡ್ಯ 44 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ ನೆರವಿನಿಂದ 64 ರನ್‌ ಬಾರಿಸಿ ಸ್ಟೋಕ್ಸ್‌ಗೆ ವಿಕೆಟ್‌ ಒಪ್ಪಿಸಿದರು.

ಕೊನೆಯಲ್ಲಿ ಶಾರ್ದೂಲ್ ಠಾಕೂರ್(30) ಹಾಗೂ ಕೃನಾಲ್ ಪಾಂಡ್ಯ(25) ಕೆಳಕ್ರಮಾಂಕದಲ್ಲಿ ಉಪಯುಕ್ತ ರನ್‌ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ನೆರವಾದರು.

ಇಂಗ್ಲೆಂಡ್‌ ಪರ ಮಾರ್ಕ್‌ ವುಡ್ 3 ವಿಕೆಟ್ ಪಡೆದರೆ, ಆದಿಲ್ ರಶೀದ್‌ 2, ಸ್ಯಾಮ್ ಕರ್ರನ್‌, ಬೆನ್ ಸ್ಟೋಕ್ಸ್, ರೀಸೇ ಟೋಪ್ಲೆ, ಮೋಯಿನ್ ಅಲಿ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್‌ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ಭಾರತ: 329/10
ರಿಷಭ್ ಪಂತ್: 78
ಮಾರ್ಕ್‌ ವುಡ್‌: 34/3
(* ಭಾರತದ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)

click me!