ಧರ್ಮಶಾಲಾ ಟೆಸ್ಟ್‌ನಲ್ಲೂ ಆಂಗ್ಲರ ಮೇಲೆ ಟೀಂ ಇಂಡಿಯಾ ಸವಾರಿ..!

By Naveen KodaseFirst Published Mar 7, 2024, 5:20 PM IST
Highlights

ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭವಾದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 218 ರನ್‌ಗಳಿಗೆ ನಿಯಂತ್ರಿಸಿದ ಟೀಂ ಇಂಡಿಯಾ, ಆ ಬಳಿಕ ಬ್ಯಾಟಿಂಗ್‌fನಲ್ಲಿ ಭರ್ಜರಿ ಆರಂಭವನ್ನೇ ಪಡೆಯಿತು. ಟೀಂ ಇಂಡಿಯಾ ಪರ ರೆಡ್ ಹಾಟ್ ಫಾರ್ಮ್‌ನಲ್ಲಿರುವ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮಾ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು.

ಧರ್ಮಶಾಲಾ(ಮಾ.07): ಈಗಾಗಲೇ ಇಂಗ್ಲೆಂಡ್ ಎದುರು ಟೆಸ್ಟ್ ಸರಣಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇದೀಗ ಕೊನೆಯ ಟೆಸ್ಟ್‌ನಲ್ಲೂ ಪ್ರವಾಸಿ ಇಂಗ್ಲೆಂಡ್ ಮೇಲೆ ಸವಾರಿ ನಡೆಸಿದೆ. 5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 218 ರನ್‌ಗಳಿಗೆ ಕಟ್ಟಿಹಾಕಿದ ಭಾರತ, ಇದೀಗ ಮೊದಲ ದಿನದಾಟದಂತ್ಯದ ವೇಳೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡು 135 ರನ್ ಬಾರಿಸಿದ್ದು, ಇನ್ನು ಕೇವಲ 83 ರನ್‌ಗಳ ಹಿನ್ನಡೆಯಲ್ಲಿದೆ.

ಹೌದು, ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭವಾದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 218 ರನ್‌ಗಳಿಗೆ ನಿಯಂತ್ರಿಸಿದ ಟೀಂ ಇಂಡಿಯಾ, ಆ ಬಳಿಕ ಬ್ಯಾಟಿಂಗ್‌fನಲ್ಲಿ ಭರ್ಜರಿ ಆರಂಭವನ್ನೇ ಪಡೆಯಿತು. ಟೀಂ ಇಂಡಿಯಾ ಪರ ರೆಡ್ ಹಾಟ್ ಫಾರ್ಮ್‌ನಲ್ಲಿರುವ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮಾ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 20.4 ಓವರ್‌ಗಳಲ್ಲಿ 104 ರನ್‌ಗಳ ಜತೆಯಾಟವಾಡಿತು.

Stumps on the opening day in Dharamsala! 🏔️ move to 135/1, trail by 83 runs.

Day 2 action will resume with Captain Rohit Sharma (52*) & Shubman Gill (26*) in the middle 💪

Scorecard ▶️ https://t.co/OwZ4YNtCbQ | pic.twitter.com/nhUXwzACi4

— BCCI (@BCCI)

Dharamsala Test: ಅಶ್ವಿನ್-ಕುಲ್ದೀಪ್ ಸ್ಪಿನ್ ಮೋಡಿ; ಸಾಧಾರಣ ಮೊತ್ತಕ್ಕೆ ಇಂಗ್ಲೆಂಡ್ ಆಲೌಟ್

ಸರಣಿಯಲ್ಲಿ 700 ರನ್ ಸಿಡಿಸಿದ ಜೈಸ್ವಾಲ್: ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಅಮೋಘ ಲಯದಲ್ಲಿರುವ ಯಶಸ್ವಿ ಜೈಸ್ವಾಲ್, ಇದೀಗ ಮತ್ತೊಂದು ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ 58 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 57 ರನ್ ಬಾರಿಸಿ ಶೋಯೆಬ್ ಬಷೀರ್‌ಗೆ ವಿಕೆಟ್ ಒಪ್ಪಿಸಿದರು.

ಇನ್ನು ಇದೀಗ ಯಶಸ್ವಿ ಜೈಸ್ವಾಲ್, ಟೆಸ್ಟ್ ಸರಣಿಯೊಂದರಲ್ಲಿ ಭಾರತ ಪರ 700+ ರನ್ ಬಾರಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಮೊದಲು ಸುನಿಲ್ ಗವಾಸ್ಕರ್ ಎರಡು ಬಾರಿ ಟೆಸ್ಟ್ ಸರಣಿಯೊಂದರಲ್ಲಿ 700+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ. ಗವಾಸ್ಕರ್ ವೆಸ್ಟ್ ಇಂಡೀಸ್ ಎದುರು ಒಮ್ಮೆ 774 ರನ್ ಹಾಗೂ ಇನ್ನೊಮ್ಮೆ 732 ರನ್ ಬಾರಿಸಿದ್ದಾರೆ. ಸದ್ಯ ಜೈಸ್ವಾಲ್ 712 ರನ್ ಬಾರಿಸಿದ್ದು, ಗವಾಸ್ಕರ್ ದಾಖಲೆ ಮುರಿಯಲು ಇನ್ನೊಂದು ಇನಿಂಗ್ಸ್‌ ಆಡುವ ಅವಕಾಶವಿದೆ.

ಶಿವಮೊಗ್ಗದ ಹಳ್ಳಿ ಹುಡುಗ ಗಗನ್ ಗೌಡ ಯುಪಿ ಯೋಧಾಸ್‌ ಫ್ರಾಂಚೈಸಿ ಕಣ್ಣಿಗೆ ಬಿದ್ದಿದ್ದು ಹೇಗೆ?

ಇನ್ನುಳಿದಂತೆ ಜೈಸ್ವಾಲ್‌ ಜತೆ ಜವಾಬ್ದಾರಿಯುತ ಆಟವಾಡಿದ ನಾಯಕ ರೋಹಿತ್ ಶರ್ಮಾ 18ನೇ ಟೆಸ್ಟ್ ಅರ್ಧಶತಕ ಸಿಡಿಸಿದರು. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ 83 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 52 ರನ್ ಬಾರಿಸಿದರೆ, ಶುಭ್‌ಮನ್ ಗಿಲ್ 26 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.  

ಇನ್ನು ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಾದ ಬೆನ್ ಡಕೆಟ್ ಹಾಗೂ ಜಾಕ್ ಕ್ರಾಲಿ ಅರ್ಧಶತಕದ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 64 ರನ್‌ಗಳ ಜತೆಯಾಟ ನಿಭಾಯಿಸಿತು. ಡಕೆಟ್ ಬಲಿ ಪಡೆಯುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾದರು. ಇದಾದ ಬಳಿಕ ಕ್ರಾಲಿ ಕೊಂಚ ಟೀಂ ಇಂಡಿಯಾ ಬೌಲರ್‌ಗಳೆದುರು ಪ್ರತಿರೋಧ ತೋರಿದರು

ಒಂದು ಹಂತದಲ್ಲಿ ಇಂಗ್ಲೆಂಡ್ ತಂಡವು 175 ರನ್‌ಗಳಿಗೆ ಕೇವಲ 3 ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಕುಲ್ದೀಪ್ ಯಾದವ್ ಹಾಗೂ ರವಿಚಂದ್ರನ್ ಅಶ್ವಿನ್ ಮಾರಕ ದಾಳಿಗೆ ತತ್ತರಿಸಿ ಕೇವಲ 43 ರನ್ ಅಂತರದಲ್ಲಿ ಉಳಿದ 7 ವಿಕೆಟ್ ಕಳೆದುಕೊಂಡಿತು.

ಕುಲ್ದೀಪ್‌ಗೆ 5 ವಿಕೆಟ್: ಇಂಗ್ಲೆಂಡ್ ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಜಾಕ್ ಕ್ರಾಲಿ, ಓಲಿ ಪೋಪ್, ಜಾನಿ ಬೇರ್‌ಸ್ಟೋವ್, ಹಾಗೂ ಬೆನ್ ಸ್ಟೋಕ್ಸ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಈ ಮೂಲಕ 5 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿಯುವಲ್ಲಿ ಯಶಸ್ವಿಯಾದರು. ಕುಲ್ದೀಪ್ ಯಾದವ್ 15 ಓವರ್ ಬೌಲಿಂಗ್ ಮಾಡಿ 72 ರನ್ ನೀಡಿ 5 ವಿಕೆಟ್ ಕಬಳಿಸಿದರು.

ಅಶ್ವಿನ್‌ ಬುಟ್ಟಿಗೆ 4 ವಿಕೆಟ್: ಇನ್ನು ಟೆಸ್ಟ್ ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್‌ನ ನಾಲ್ವರು ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಅಶ್ವಿನ್ ಕೇವಲ 51 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ನೂರನೇ ಟೆಸ್ಟ್ ಪಂದ್ಯವನ್ನು ಮತ್ತಷ್ಟು ಸ್ಮರಣೀಯವಾಗಿಸಿಕೊಂಡರು.

ಇಂಗ್ಲೆಂಡ್ ಪರ ಜಾಕ್ ಕ್ರಾಲಿ ಭಾರತೀಯ ಬೌಲರ್‌ಗಳ ಮೇಲೆ ಕೊಂಚ ಪ್ರತಿರೋಧ ತೋರಿದರು. ಕ್ರಾಲಿ 108 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 79 ರನ್ ಸಿಡಿಸಿದರು. ಕ್ರಾಲಿ ಹೊರತುಪಡಿಸಿ ಇಂಗ್ಲೆಂಡ್‌ನ ಉಳಿದ್ಯಾವ ಬ್ಯಾಟರ್‌ಗಳು ಕೂಡಾ 30 ರನ್ ಗಡಿದಾಟಲು ಸಾಧ್ಯವಾಗಲಿಲ್ಲ.
 

click me!