ಕ್ರಿಕೆಟಿಗ ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ದಂಪತಿ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದು, ವಿಚ್ಛೇದನದ ವದಂತಿಗಳಿಗೆ ಪುಷ್ಟಿ ನೀಡಿದೆ. ಚಹಲ್ ತಮ್ಮ ಪತ್ನಿಯೊಂದಿಗಿನ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಬೆಳವಣಿಗೆಗಳು ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಊಹಾಪೋಹಗಳನ್ನು ಹುಟ್ಟುಹಾಕಿವೆ.
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಹಾಗೂ ಖ್ಯಾತ ಕೊರಿಯೋಗ್ರಾಪರ್ ಧನಶ್ರೀ ವರ್ಮಾ ಅವರ ದಾಂಪತ್ಯ ಜೀವನ ಮುರಿದುಬಿತ್ತಾ ಎನ್ನುವ ಅನುಮಾನ ಶುರುವಾಗಿದೆ. ಕಳೆದ ಕೆಲ ವರ್ಷಗಳಿಂದಲೂ ಚಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕುಬಿಟ್ಟಿದೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು. ಇದೀಗ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಈ ಇಬ್ಬರೂ ಸೋಷಿಯಲ್ ಮೀಡಿಯಾವಾದ ಇನ್‌ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಚಹಲ್ ತಮ್ಮ ಪತ್ನಿಯ ಇಬ್ಬರು ಜತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿರುವುದು ಈ ಎಲ್ಲಾ ಗಾಳಿ ಸುದ್ದಿಗೆ ಮತ್ತಷ್ಟು ಬಲ ಬರುವಂತೆ ಮಾಡಿದೆ. ಆದರೆ ಧನ್ರಶ್ರೀ ವರ್ಮಾ ತಮ್ಮ ಪತಿ ಚಹಲ್ ಜತೆಗಿನ ಫೋಟೋಗಳನ್ನು ಡಿಲೀಟ್ ಮಾಡಿಲ್ಲ.
ಇನ್ನು ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಡಿವೋರ್ಸ್ ಪಡೆಯುವ ಸುದ್ದಿ ಖಚಿತ ಎಂದು ಹೇಳಿದೆ. 'ಧನಶ್ರೀ ವರ್ಮಾ ಹಾಗೂ ಯುಜುವೇಂದ್ರ ಚಹಲ್ ವಿಚ್ಛೇದನಾ ಪಡೆದುಕೊಳ್ಳುವುದು ನಿಶ್ಚಿತ. ಆದರೆ ಅವರು ಯಾವಾಗ ಅಧಿಕೃತವಾಗಿ ಘೋಷಿಸುತ್ತಾರೆ ಎನ್ನುವುದಷ್ಟೇ ಬಾಕಿ ಇರುವ ವಿಚಾರ. ಆದರೆ ಯಾವ ವಿಚಾರಕ್ಕೆ ಈ ಜೋಡಿ ಬೇರ್ಪಡುತ್ತಿದೆ ಎನ್ನುವುದು ಖಚಿತವಾಗಿಲ್ಲ. ಆದರೆ ಒಂದಂತೂ ಸ್ಪಷ್ಟ ಚಹಲ್ ಹಾಗೂ ಧನಶ್ರೀ ಬೇರೆ ಬೇರೆ ಜೀವನ ನಡೆಸಲು ತೀರ್ಮಾನಿಸಿದ್ದಾರೆ ಎಂದು ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸಿಡ್ನಿಯಲ್ಲಿ ಗುಡುಗಿದ ರಿಷಭ್ ಪಂತ್; ರೋಚಕಘಟ್ಟದಲ್ಲಿ ಭಾರತ-ಆಸೀಸ್ ಕೊನೆಯ ಟೆಸ್ಟ್!
2023ರಲ್ಲಿ ಧನಶ್ರೀ ವರ್ಮಾ ತಮ್ಮ ಸರ್‌ನೇಮ್‌ನಲ್ಲಿ ಚಹಲ್ ಅವರನ್ನು ಕೈಬಿಟ್ಟಿದ್ದರು. ಇದರ ಬೆನ್ನಲ್ಲೇ ಚಹಲ್ ಕೂಡಾ ನ್ಯೂ ಲೈಫ್ ಲೋಡಿಂಗ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಆಗಲೇ ಚಹಲ್ ಹಾಗೂ ಚಹಲ್ ವಿಚ್ಛೇದನಾ ಪಡೆಯಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು.
ಧನಶ್ರೀ ವರ್ಮಾ ಹಾಗೂ ಯುಜುವೇಂದ್ರ ಚಹಲ್ 2020ರ ಡಿಸೆಂಬರ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗಷ್ಟೇ ತಮ್ಮ ಲವ್‌ಸ್ಟೋರಿ ಬಗ್ಗೆ ಧನಶ್ರೀ ವರ್ಮಾ ಬಾಯ್ಬಿಟ್ಟಿದ್ದರು. ಕೊರೋನಾ ಕಾಲದ ಲಾಕ್‌ಡೌನ್ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು ಎಂದು ಹೇಳಿದ್ದರು.