
ನವದೆಹಲಿ(ಫೆ.19): ಸತತ ವೈಫಲ್ಯ ಅನುಭವಿಸುತ್ತಿರುವ ಕೆ.ಎಲ್.ರಾಹುಲ್ ಬಗ್ಗೆ ಭಾರತದ ಮಾಜಿ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್ ಟೀಕೆ ಮುಂದುವರಿಸಿದ್ದು, ರಾಹುಲ್ ಆಯ್ಕೆಯಿಂದಾಗಿ ನ್ಯಾಯದ ಮೇಲಿನ ನಂಬಿಕೆ ಹುಸಿಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ಕಳೆದ 20 ವರ್ಷದಲ್ಲಿ ಯಾವುದೇ ಆರಂಭಿಕ ಬ್ಯಾಟರ್ ಕಳಪೆ ಸರಾಸರಿಯಲ್ಲಿ ಇಷ್ಟು ಪಂದ್ಯಗಳನ್ನು ಆಡಿಲ್ಲ. ರಾಹುಲ್ಗೆ ಸಿಕ್ಕಷ್ಟುಅವಕಾಶ ನೈಜ ಪ್ರತಿಭೆಗಳಿಗೆ ಸಿಕ್ಕಿಲ್ಲ. ಶಿಖರ್ ಧವನ್, ಮಯಾಂಕ್ ಸರಾಸರಿ 40+ ಇದ್ದರೂ ಅವರಿಗೆ ಅವಕಾಶವಿಲ್ಲ. ಶುಭ್ಮನ್ ಗಿಲ್, ಸರ್ಫರಾಜ್ ಖಾನ್ ತಂಡದಲ್ಲಿ ಸ್ಥಾನ ಗಿಟ್ಟಿಸಲು ಇನ್ನೂ ಕಾಯುತ್ತಿದ್ದಾರೆ. ಕುಲ್ದೀಪ್ ಯಾದವ್ ಪಂದ್ಯಶ್ರೇಷ್ಠ ಪಡೆದು ಮುಂದಿನ ಟೆಸ್ಟ್ನಿಂದ ಹೊರಗುಳಿಯುವ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ಎದುರು ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ ಎಲ್ ರಾಹುಲ್, 71 ಎಸೆತಗಳನ್ನು ಎದುರಿಸಿ ಕೇವಲ ಒಂದು ಬೌಂಡರಿ ಸಹಿತ 20 ರನ್ ಬಾರಿಸಿ ಟೋಡ್ ಮರ್ಫಿಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೆ ಎಲ್ ರಾಹುಲ್ 41 ಎಸೆತಗಳನ್ನು ಎದುರಿಸಿ 17 ರನ್ ಬಾರಿಸಿ ನೇಥನ್ ಲಯನ್ ಎಲ್‌ಬಿ ಬಲೆಗೆ ಬಿದ್ದರು.
ಇನ್ನು ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲೂ ಕೆ ಎಲ್ ರಾಹುಲ್ ದಯನೀಯ ಬ್ಯಾಟಿಂಗ್ ವೈಫಲ್ಯ ಮುಂದುವರೆದಿದ್ದು, ಕೇವಲ ಒಂದು ರನ್ ಬಾರಿಸಿ ನೇಥನ್ ಲಯನ್‌ಗೆ ವಿಕೆಟ್ ಒಪ್ಪಿಸಿದರು.
ವಿವಾದಿತ ತೀರ್ಪಿಗೆ ಬಲಿಯಾದ ಕೊಹ್ಲಿ
ವಿರಾಟ್ ಕೊಹ್ಲಿ ಶನಿವಾರ ವಿವಾದಾತ್ಮಕ ಎಲ್‌ಬಿಡಬ್ಲ್ಯು ತೀರ್ಪಿಗೆ ಬಲಿಯಾದರು. 49.3ನೇ ಓವರಲ್ಲಿ ಕುಹ್ನೆಮಾನ್ ಎಸೆದ ಬಾಲ್ ಕೊಹ್ಲಿ ಪ್ಯಾಡ್‌ಗೆ ಬಡಿಯಿತು. ಅಂಪೈರ್ ಔಟ್ ಎಂದು ತೀರ್ಪಿತ್ತರು. ಕೊಹ್ಲಿ ಡಿಆರ್ಎಸ್ ಮೊರೆ ಹೋದಾಗ ಬಾಲ್ ಪ್ಯಾಡ್ ಹಾಗೂ ಬ್ಯಾಟ್‌ಗೆ ಒಂದೇ ಸಮಯದಲ್ಲಿ ಬಡಿದದ್ದಾಗಿ ಕಂಡುಬಂದರೂ ಅಂಪೈರ್ ತಮ್ಮ ನಿಲುವು ಬದಲಿಸದೆ ಔಟ್ ಎಂದು ಘೋಷಿಸಿದರು. ಈ ಬಗ್ಗೆ ವಿರಾಟ್ ಕೊಹ್ಲಿ ಪೆವಿಲಿಯನ್ ತೆರಳಿದ ಬಳಿಕವೂ ಸಿಟ್ಟು ಹೊರಹಾಕಿದರು. ಅಂಪೈರ್ ನಿರ್ಧಾರ ಭಾರೀ ಚರ್ಚೆಗೆ ಗ್ರಾಸವಾಗಿದೆ.
ತಲೆಗೆ ಪೆಟ್ಟು: ಪಂದ್ಯಕ್ಕೆ ವಾರ್ನರ್ ಅಲಭ್ಯ
ಮೊದಲ ಇನ್ನಿಂಗ್್ಸನಲ್ಲಿ ಸಿರಾಜ್ ಎಸೆತದಲ್ಲಿ ತಲೆಗೆ ಏಟು ಬಿದ್ದ ಕಾರಣ ಡೇವಿಡ್ ವಾರ್ನರ್ 2ನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅವರ ಬದಲು ಮ್ಯಾಟ್ ರೆನ್ಶಾ ತಂಡಕ್ಕೆ ಸೇರ್ಪಡೆಗೊಂಡಿದ್ದು, ಶನಿವಾರ ಫೀಲ್ಡಿಂಗ್ ನಡೆಸಿದರು. 2ನೇ ಇನ್ನಿಂಗ್್ಸನಲ್ಲಿ ಖವಾಜ ಜೊತೆ ಟ್ರ್ಯಾವಿಸ್ ಹೆಡ್ ಆರಂಭಿಕನಾಗಿ ಕಣಕ್ಕಿಳಿದರು.
2ನೇ ಟೆಸ್ಟ್ ಎರಡನೇ ದಿನದಾಟದ ಅಂಕಿ-ಅಂಶ:
5ನೇ ಭಾರತೀಯ: ಆರ್.ಅಶ್ವಿನ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 5000+ ರನ್ ಹಾಗೂ 700+ ವಿಕೆಟ್ ಕಿತ್ತ 5ನೇ ಭಾರತೀಯ. ವಿನೂ ಮಂಕಡ್, ವೆಂಕಟರಾಘವನ್, ಕಪಿಲ್ ದೇವ್, ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ ಇತರರು.
2ನೇ ಬೌಲರ್: ಆಸೀಸ್ ವಿರುದ್ಧ ಟೆಸ್ಟ್‌ನಲ್ಲಿ 100+ ವಿಕೆಟ್ ಕಿತ್ತ 2ನೇ ಭಾರತೀಯ ಬೌಲರ್ ಅಶ್ವಿನ್. ಅನಿಲ್ ಕುಂಬ್ಳೆ 111 ವಿಕೆಟ್ ಪಡೆದಿದ್ದಾರೆ.
3ನೇ ಬೌಲರ್: ಭಾರತದಲ್ಲಿ ಟೆಸ್ಟ್‌ನಲ್ಲಿ 100+ ವಿಕೆಟ್ ಕಿತ್ತ 3ನೇ ಬೌಲರ್ ನೇಥನ್ ಲಯನ್. ಆ್ಯಂಡರ್ಸನ್(139), ಮುರಳೀಧರನ್(105) ಕೂಡಾ ಈ ಸಾಧನೆ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.