
ನವದೆಹಲಿ[ನ.01]: ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ವಾಯು ಮಾಲಿನ್ಯವಿದ್ದರೂ ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯ ನ.3ರಂದು ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲೇ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ರೋಹಿತ್ ಶರ್ಮಾ, ಮಾಲಿನ್ಯದಿಂದಾಗಿ ತಮಗೇನು ತೊಂದರೆಯಾಗಿಲ್ಲ. ಪಂದ್ಯದ ದಿನವೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ; ಮಾಸ್ಕ್ ಧರಿಸಿ ಬಾಂಗ್ಲಾ ಕ್ರಿಕೆಟಿಗರ ಅಭ್ಯಾಸ!
ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಗುರುವಾರ ಮಾತನಾಡಿದ ಗಂಗೂಲಿ, ‘ಈಗ ಪಂದ್ಯ ಸ್ಥಳಾಂತರಿಸುವುದು ಅಸಾಧ್ಯ. ಟಿಕೆಟ್ ಮಾರಾಟ ಸೇರಿದಂತೆ ಹಲವು ಸವಾಲುಗಳು ಎದುರಾಗಲಿವೆ. ಕೊನೆ ಕ್ಷಣದ ಬದಲಾವಣೆ ಕಷ್ಟ. ಆದರೆ ಮುಂದಿನ ದಿನಗಳಲ್ಲಿ ದೀಪಾವಳಿ ಬಳಿಕ ಕೆಲ ದಿನಗಳ ವರೆಗೂ ಹಾಗೂ ಚಳಿಗಾಲದಲ್ಲಿ, ಉತ್ತರ ಭಾರತದಲ್ಲಿ ಪಂದ್ಯಗಳನ್ನು ಆಯೋಜಿಸುವಾಗ ಎಚ್ಚರ ವಹಿಸಲಾಗುತ್ತದೆ’ ಎಂದರು.
ಡೇ & ನೈಟ್ ಟೆಸ್ಟ್ ಪಂದ್ಯಕ್ಕೆ 72 ಪಿಂಕ್ ಬಾಲ್!
ಗುರುವಾರ ದೆಹಲಿಗೆ ಬಂದಿಳಿದ ಭಾರತ ತಂಡ, ಅಭ್ಯಾಸ ನಡೆಸಲಿಲ್ಲ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರೋಹಿತ್, ಮಾಧ್ಯಮಗಳೊಂದಿಗೆ ಮಾತನಾಡುತ್ತಾ ‘ನಾವಿಲ್ಲಿ ಶ್ರೀಲಂಕಾ ವಿರುದ್ಧ ಇಂಥದ್ದೇ ವಾತಾವರಣದಲ್ಲಿ ಟೆಸ್ಟ್ ಆಡಿದ್ದೇವೆ. ಸದ್ಯದ ಸ್ಥಿತಿ ಬಗ್ಗೆ ತಂಡದಲ್ಲಿ ಗಂಭೀರವಾದ ಚರ್ಚೆ ಏನು ಆಗಿಲ್ಲ. ಆದರೆ ವೈಯಕ್ತಿಕವಾಗಿ ನನಗೆ ಯಾವುದೇ ಸಮಸ್ಯೆಯಾಗಿಲ್ಲ’ ಎಂದರು.
ಬುಧವಾರ ಭಾರತಕ್ಕೆ ಬಂದ ಬಾಂಗ್ಲಾದೇಶ ತಂಡ, ಗುರುವಾರ ಕೋಟ್ಲಾ ಮೈದಾನದಲ್ಲಿ ಅಭ್ಯಾಸ ನಡೆಸಿತು. ತಂಡದ ಆಟಗಾರ ಲಿಟನ್ ದಾಸ್ ಮಾಸ್ಕ್ ಧರಿಸಿ ಅಭ್ಯಾಸಕ್ಕಿಳಿದಿದ್ದು ಹಲವರಲ್ಲಿ ಅಚ್ಚರಿ ಮೂಡಿಸಿತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಲಿಟನ್, ದೆಹಲಿ ಮಾಲಿನ್ಯಕ್ಕೂ ತಾವು ಮಾಸ್ಕ್ ಧರಿಸಿರುವುದಕ್ಕೂ ಸಂಬಂಧವಿಲ್ಲ ಎಂದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.