
ಕೊಲೊಂಬೊ(ಜು.20): ಟೀಂ ಇಂಡಿಯಾದ 7 ವಿಕೆಟ್ ಪತನಗೊಂಡಿತ್ತು. ಘಟಾನುಘಟಿ ಬ್ಯಾಟ್ಸ್‌ಮನ್ ಪೆವಿಲಿಯನ್ ಸೇರಿಕೊಂಡಿದ್ದರು. ಗೆಲವಿನ ಆಸೆ ಸಂಪೂರ್ಣ ನೆಲಕಚ್ಚಿತ್ತು. ಆದರೆ ವೇಗಿ ದೀಪಕ್ ಚಹಾರ್ ಮಾತ್ರ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. ಗುರಿ ಸಾಕಷ್ಟು ದೂರವಿದ್ದರೂ, ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪರಿಣಾಮ ಶ್ರೀಲಂಕಾ ವಿರುದ್ಧಧ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 3 ವಿಕೆಟ್ ರೋಚಕ ಗೆಲುವು ದಾಖಲಿಸಿದೆ.
ಈ ಗೆಲವಿನ ಪ್ರಮುಖ ರೂವಾರಿ ದೀಪಕ್ ಚಹಾರ್ ಹಾಗೂ ಸೂರ್ಯಕುಮಾರ್ ಯಾದವ್. ಆರಂಭಿಕ ಹಂತದಲ್ಲಿ ಭಾರತ ದಿಢೀರ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಟೀಂ ಇಂಡಿಯಾವನ್ನು ಪಾರುಮಾಡಿತು. ಅರ್ಧಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್ ಹೋರಾಟ ಟೀಂ ಇಂಡಿಯಾದಲ್ಲಿ ಹೊಸ ಚೈತನ್ಯ ಮೂಡಿಸಿತ್ತು.
ಯಾದವ್ 53 ರನ್ ಸಿಡಿಸಿ ಔಟಾದ ಬಳಿಕ ಮತ್ತೆ ಆತಂಕ, ಕ್ರುನಾಲ್ ಹೋರಾಟವೂ ಸಾಕಾಗಲಿಲ್ಲ. ಇನ್ನೇನು ಸೋಲು ಕಟ್ಟಿಟ್ಟ ಬುತ್ತಿ ಅಂದುಕೊಂಡಾಗಲೇ, ದೀಪಕ್ ಚಹಾರ್ ಹೋರಾಟ ಟೀಂ ಇಂಡಿಯಾದ ಚೇಸಿಂಗ್ ಗೇರ್ ಬದಲಿಸಿತು. 276 ರನ್ ಟಾರ್ಗೆಟ್ ಚೇಸ್ ಮಾಡಲು ಸಾಧ್ಯ ಅನ್ನೋ ವಿಶ್ವಾಸ ಮೂಡ ತೊಡಗಿತು.
ದೀಪಕ್ ಚಹಾರ್ ಹಾಗೂ ಭುವನೇಶ್ವರ್ ಕಮಾರ್ ಹೋರಾಟ ಟೀಂ ಇಂಡಿಯಾ ಪಾಳದಲ್ಲಿ ಮತ್ತೆ ಗೆಲುವಿನ ಆಸೆ ಚಿಗುರಿಸಿತು. ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ದೀಪಕ್ ಚಹಾರ್ ಹಾಫ್ ಸೆಂಚುರಿ ಸಿಡಿಸಿದರು. ಇದು ದೀಪಕ್ ಚಹಾರ್ ಚೊಚ್ಚಲ ಹಾಫ್ ಸೆಂಚುರಿಯಾಗಿದೆ.
ಚಹಾರ್ ಹಾಗು ಭುವಿ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ಗೆಲುವಿಗೆ ಅಂತಿಮ 12 ಎಸೆತದಲ್ಲಿ 15 ರನ್ ಅವಶ್ಯಕತೆ ಇತ್ತು. ದೀಪಕ್ ಚಹಾರ್ ಅಜೇಯ 69 ರನ್ ಹಾಗೂ ಭುವನೇಶ್ವರ್ ಅಜೇಯ 19 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 49 .1 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ರೋಚಕ ಗೆಲುವು ಸಾಧಿಸಿತು. ಇಷ್ಟೇ ಅಲ್ಲ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದುಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.