
ಭಾರತೀಯ ಕ್ರಿಕೆಟ್‌ನಲ್ಲಿ ಕೆಲವು ಆಟಗಾರರ ವೃತ್ತಿಜೀವನ ಸಂಖ್ಯೆಗಳಿಗಿಂತಲೂ ವಿಚಿತ್ರ ಕಥೆಯನ್ನು ಹೇಳುತ್ತದೆ. ದೇಬಾಸಿಸ್ ಮೊಹಾಂತಿ ಅಂತಹ ಅಪರೂಪದ ಕ್ರಿಕೆಟಿಗ. ಒಡಿಶಾದ ವೇಗದ ಬೌಲರ್ ಆಗಿ ಬೆಳೆದ ಅವರು 1996ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಐದು ವಿಕೆಟ್‌ಗಳ ಸಾಧನೆ ಮಾಡಿದ್ದರು.
ಅವರ ಸ್ವಿಂಗ್, ವಿಶಿಷ್ಟ ಓಪನ್-ಚೆಸ್ಟ್ ಬೌಲಿಂಗ್ ಆ್ಯಕ್ಷನ್ ಮತ್ತು ಹೊಸ ಚೆಂಡಿನೊಂದಿಗೆ ವಿಕೆಟ್ ಪಡೆಯುವ ಸಾಮರ್ಥ್ಯ ಅವರನ್ನು ಬೇಗನೆ ರಾಷ್ಟ್ರೀಯ ತಂಡದ ಬಾಗಿಲಿಗೆ ಕರೆದೊಯ್ದಿತು.
1997ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ ಮೊಹಾಂತಿ, ಸನತ್ ಜಯಸೂರ್ಯ ಸೇರಿದಂತೆ ನಾಲ್ವರನ್ನು ಔಟ್ ಮಾಡಿದರು. ಆದರೆ ಇದು ಅವರ ಟೆಸ್ಟ್ ವೃತ್ತಿಜೀವನದ ಆರಂಭವೂ ಹೌದು, ಅಂತ್ಯಕ್ಕೂ ಮುನ್ನುಡಿಯಾಯಿತು.
ಮುಂದಿನ ಟೆಸ್ಟ್‌ನಲ್ಲಿ ವಿಕೆಟ್ ಪಡೆಯದ ಅವರು, ನಂತರ ಮತ್ತೆ ಭಾರತ ಪರ ಟೆಸ್ಟ್ ಆಡುವ ಅವಕಾಶ ಪಡೆಯಲಿಲ್ಲ. ಹೀಗಾಗಿ ಅವರ ಟೆಸ್ಟ್ ವೃತ್ತಿಜೀವನ ಕೇವಲ 2 ಪಂದ್ಯ, 4 ವಿಕೆಟ್ಗಳಿಗೆ ಸೀಮಿತವಾಯಿತು.
1999ರ ವಿಶ್ವಕಪ್‌ನಲ್ಲಿ ಮೊಹಂತಿ ತಮ್ಮ ನಿಜವಾದ ಸಾಮರ್ಥ್ಯ ತೋರಿಸಿದರು. ಆರು ಪಂದ್ಯಗಳಲ್ಲಿ 10 ವಿಕೆಟ್ ಪಡೆದ ಅವರು, ಭಾರತದ ಪರ ಜಾವಗಲ್ ಶ್ರೀನಾಥ್ ನಂತರ ಎರಡನೇ ಗರಿಷ್ಠ ವಿಕೆಟ್‌ಟೇಕರ್ ಆಗಿದ್ದರು.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಲೆಕ್ ಸ್ಟೀವರ್ಟ್ ಮತ್ತು ಗ್ರೇಮ್ ಹಿಕ್ ಅವರನ್ನು ಆರಂಭದಲ್ಲೇ ಪೆವಿಲಿಯನ್‌ಗೆ ಕಳುಹಿಸಿ ಭಾರತದ ಗೆಲುವಿಗೆ ಪ್ರಮುಖ ಕಾರಣರಾದರು. 1999ರಲ್ಲಿ ಒಟ್ಟಾರೆ 17 ಏಕದಿನ ಪಂದ್ಯಗಳಿಂದ 29 ವಿಕೆಟ್ ಪಡೆದದ್ದು ಅವರ ವೃತ್ತಿಜೀವನದ ಅತ್ಯುತ್ತಮ ವರ್ಷಗಳಲ್ಲಿ ಒಂದಾಯಿತು.
ಮೊಹಂತಿ ಅವರ ವೃತ್ತಿಜೀವನದ ಅತ್ಯಂತ ಅದ್ಭುತ ಕ್ಷಣ 2001ರ ದುಲೀಪ್ ಟ್ರೋಫಿಯಲ್ಲಿ ಬಂದಿತು. ದಕ್ಷಿಣ ವಲಯದ ಬ್ಯಾಟಿಂಗ್ ಸಾಲಿನಲ್ಲಿ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಸೇರಿದಂತೆ ಪ್ರಮುಖ ಆಟಗಾರರಿದ್ದರು.
ಆದರೆ ಮೊಹಂತಿ 19 ಓವರ್‌ಗಳಲ್ಲಿ ಕೇವಲ 46 ರನ್ ನೀಡಿ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿದರು. 19-5-46-10 ಎಂಬ ಅವರ ಬೌಲಿಂಗ್ ಅಂಕಿಅಂಶ ದುಲೀಪ್ ಟ್ರೋಫಿ ಇತಿಹಾಸದಲ್ಲಿ ವಿಶಿಷ್ಟ ದಾಖಲೆ.
ಅಂತರರಾಷ್ಟ್ರೀಯ ಅವಕಾಶಗಳು ಕಡಿಮೆಯಾಗಿದ್ದರೂ, ದೇಶೀಯ ಕ್ರಿಕೆಟ್‌ನಲ್ಲಿ ಮೊಹಂತಿಯ ಪ್ರಭಾವ ಅಪಾರವಾಗಿತ್ತು. 117 ಪ್ರಥಮ ದರ್ಜೆ ಪಂದ್ಯಗಳಲ್ಲಿ 417 ವಿಕೆಟ್ ಪಡೆದ ಅವರು 19 ಬಾರಿ ಐದು ವಿಕೆಟ್ ಮತ್ತು ಮೂರು ಬಾರಿ 10 ವಿಕೆಟ್‌ಗಳ ಸಾಧನೆ ಮಾಡಿದರು.
ನಂತರ ಕೋಚ್ ಮತ್ತು ಆಯ್ಕೆಗಾರರಾಗಿಯೂ ಅವರು ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಿದರು. ಆದರೆ ಅವರ ಆಟಗಾರನಾಗಿ ಉಳಿದ ದೊಡ್ಡ ಪ್ರಶ್ನೆ ಒಂದೇ—ಇಷ್ಟು ಅದ್ಭುತ ದಾಖಲೆಗಳಿದ್ದರೂ ಮೂರನೇ ಟೆಸ್ಟ್ ಏಕೆ ಸಿಗಲಿಲ್ಲ?
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.