
ಚೆನ್ನೈ(ಅ.08): ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್, ಭಾರತ ಎದುರಿನ ಪಂದ್ಯದ ವೇಳೆ ವಿಶ್ವಕಪ್ ಟೂರ್ನಿಯಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಕಾಂಗರೂ ಪಡೆಯ ಆರಂಭಿಕ ಬ್ಯಾಟರ್ ವಾರ್ನರ್, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿವೇಗವಾಗಿ 1000 ರನ್ ಬಾರಿಸಿದ ಬ್ಯಾಟರ್ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ.
ಹೌದು, ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಡೇವಿಡ್ ವಾರ್ನರ್, ಬೌಂಡರಿ ಬಾರಿಸುತ್ತಿದ್ದಂತೆಯೇ ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಅತಿ ಕಡಿಮೆ ಇನಿಂಗ್ಸ್‌ಗಳನ್ನಾಡಿ ಒಂದು ಸಾವಿರ ರನ್ ಪೂರೈಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಡೇವಿಡ್ ವಾರ್ನರ್ ಕೇವಲ 19 ಇನಿಂಗ್ಸ್‌ಗಳನ್ನಾಡಿ ಈ ಸಾಧನೆ ಮಾಡುವ ಮೂಲಕ ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡುಲ್ಕರ್ ಹಾಗೂ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಅಳಿಸಿ ಹಾಕಿದ್ದಾರೆ. ಈ ಮೊದಲು ಸಚಿನ್ ತೆಂಡುಲ್ಕರ್ ಹಾಗೂ ಎಬಿ ಡಿವಿಲಿಯರ್ಸ್ 20 ಇನಿಂಗ್ಸ್‌ಗಳನ್ನಾಡಿ ಏಕದಿನ ವಿಶ್ವಕಪ್‌ನಲ್ಲಿ ಒಂದು ಸಾವಿರ ರನ್ ಬಾರಿಸಿದ್ದರು. ಇನ್ನು ಡೇವಿಡ್ ವಾರ್ನರ್, ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅತಿವೇಗದ ಒಂದು ಸಾವಿರ ರನ್ ಪೂರೈಸಲು ಭಾರತ ಎದುರು ಕೇವಲ 8 ರನ್ ಅಗತ್ಯವಿತ್ತು.
ಇನಿಂಗ್ಸ್‌ಗಳ ಆಧಾರದಲ್ಲಿ ಅತಿವೇಗವಾಗಿ ವಿಶ್ವಕಪ್‌ನಲ್ಲಿ 1000 ರನ್ ಬಾರಿಸಿದ ಟಾಪ್ 5 ಬ್ಯಾಟರ್‌ಗಳು.
ಡೇವಿಡ್ ವಾರ್ನರ್: 19 ಇನಿಂಗ್ಸ್
ಸಚಿನ್ ತೆಂಡುಲ್ಕರ್: 20 ಇನಿಂಗ್ಸ್
ಎಬಿ ಡಿವಿಲಿಯರ್ಸ್: 20 ಇನಿಂಗ್ಸ್
ವಿವ್ ರಿಚರ್ಡ್ಸ್: 21 ಇನಿಂಗ್ಸ್
ಸೌರವ್ ಗಂಗೂಲಿ: 21 ಇನಿಂಗ್ಸ್
ಇನ್ನು ಸ್ಪೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಡೇವಿಡ್ ವಾರ್ನರ್, ಭಾರತ ಎದುರಿನ ಪಂದ್ಯದಲ್ಲಿ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ಆರಂಭದಲ್ಲೇ ಮಿಚೆಲ್ ಮಾರ್ಷ್ ವಿಕೆಟ್ ಪತನವಾಗಿದ್ದರಿಂದ, ವಾರ್ನರ್ ಸಾಕಷ್ಟು ರಕ್ಷಣಾತ್ಮಕ ಆಟವಾಡಿದರು. ಅಂತಿಮವಾಗಿ ಡೇವಿಡ್ ವಾರ್ನರ್ 52 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 41 ರನ್ ಬಾರಿಸಿ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.
ಸದ್ಯ ರವೀಂದ್ರ ಜಡೇಜಾ ಮಾರಕ ಸ್ಪಿನ್ ದಾಳಿಗೆ ತತ್ತರಿಸಿರುವ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 35 ಓವರ್ ಅಂತ್ಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 138 ರನ್ ಬಾರಿಸಿದೆ. ಸದ್ಯ ಮ್ಯಾಕ್ಸ್‌ವೆಲ್(14) ಹಾಗೂ ಕ್ಯಾಮರೋನ್ ಗ್ರೀನ್ ಕ್ರೀಸ್‌ನಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.