ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸಿವಿಸಿ ಕ್ಯಾಪಿಟಲ್ ತಮ್ಮ ಗುಜರಾತ್ ಟೈಟಾನ್ಸ್ ತಂಡವನ್ನು ಮಾರಾಟ ಮಾಡಲು ಮುಂದಾಗಿದ್ದು, ಈ ಎರಡು ಉದ್ಯಮಿಗಳು ಗುಜರಾತ್ ತಂಡ ಖರೀದಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು: ಐಪಿಎಲ್‌ನಲ್ಲಿ ತಾನಾಡಿದ ಚೊಚ್ಚಲ ಟೂರ್ನಿಯಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಗುಜರಾತ್ ಟೈಟಾನ್ಸ್ ತಂಡವು ಮಾರಾಟಕ್ಕಿದೆ. ಹೌದು, ಹೀಗೊಂದು ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಖಾಸಗಿ ಉದ್ಯಮವಾಗಿರುವ ಸಿವಿಸಿ ಕ್ಯಾಪಿಟಲ್, ಗುಜರಾತ್ ಟೈಟಾನ್ಸ್ ತಂಡದ ಬಹುತೇಕ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.
ದಿ ಎಕಾನಮಿಕ್ಸ್ ಟೈಮ್ಸ್ ವರದಿಯ ಪ್ರಕಾರ, ಹೊಸ ತಂಡಗಳು ತಮ್ಮ ಪಾಲನ್ನು ಮಾರಾಟ ಮಾಡುವುದನ್ನು ತಡೆಯುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಲಾಕ್-ಇನ್ ಅವಧಿಯು ಫೆಬ್ರವರಿ 2025 ರಲ್ಲಿ ಕೊನೆಗೊಳ್ಳುತ್ತದೆ. ಇದರ ಬೆನ್ನಲ್ಲೇ ಸಿವಿಸಿ ಕ್ಯಾಪಿಟಲ್ಸ್ ಗುಜರಾತ್ ಟೈಟಾನ್ಸ್ ತಂಡದ ಅಲ್ಪ ಷೇರುಗಳನ್ನು ಮಾತ್ರ ಉಳಿಸಿಕೊಳ್ಳಲು ಮುಂದಾಗಿದೆ.
undefined
ಸದ್ಯ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಮೂರು ವರ್ಷ ಹಳೆಯದಾದ ಫ್ರಾಂಚೈಸಿಯಾಗಿದ್ದು, ಗುಜರಾತ್ ಟೈಟಾನ್ಸ್ ತಂಡದ ಬ್ರ್ಯಾಂಡ್ ವ್ಯಾಲ್ಯೂ ಒಂದರಿಂದ ಒಂದೂವರೆ ಬಿಲಿಯನ್ ಡಾಲರ್ ಆಗಿದೆ ಎಂದು ಅಂದಾಜಿಸಲಾಗಿದೆ. 2021ರಲ್ಲಿ ಸಿವಿಸಿ ಕ್ಯಾಪಿಟಲ್ಸ್, ಬರೋಬ್ಬರಿ 745 ಮಿಲಿಯನ್ ಡಾಲರ್ ನೀಡಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯನ್ನು ಖರೀದಿಸಿತ್ತು. ಇದೀಗ ಗುಜರಾತ್ ಫ್ರಾಂಚೈಸಿಯನ್ನು ಖರೀದಿಸಲು ಅದಾನಿ ಗ್ರೂಪ್ ಹಾಗೂ ಟೊರೆಂಟ್ ಗ್ರೂಪ್ ಒಲವು ತೋರಿವೆ ಎಂದು ವರದಿಯಾಗಿದೆ.
ಅದಾನಿ ಹಾಗೂ ಟೊರೆಂಟ್ ಎರಡೂ ಉದ್ಯಮಗಳ ಮೂಲ ಅಹಮದಾಬಾದ್ ಆಗಿದೆ, ಇನ್ನೊಂದೆಡೆ ಸಿವಿಸಿ ಕ್ಯಾಪಿಟಲ್‌ನ ಹೆಡ್‌ಕ್ವಾರ್ಟರ್ಸ್ ಲುಕ್ಸೇನ್‌ಬರ್ಗ್‌ನಲ್ಲಿದೆ. ಟೊರೆಂಟ್ ಇನ್ನೂ ಕ್ರಿಕೆಟ್ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ, ಆದರೆ ಅದಾನಿ ಗ್ರೂಪ್ ಈಗಾಗಲೇ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಹಾಗೂ ಯುಎಇ ಮೂಲದ ಟಿ20 ಕ್ರಿಕೆಟ್ ಲೀಗ್‌ನಲ್ಲಿ ತನ್ನ ಬಂಡವಾಳ ಹೂಡಿಕೆ ಮಾಡಿದೆ. 2021ರ ಐಪಿಎಲ್ ಹೊಸ ತಂಡಗಳನ್ನು ಖರೀದಿಸಲು ಅದಾನಿ ಹಾಗೂ ಟೊರೆಂಟೊ ಗ್ರೂಪ್‌ಗಳು ಒಲವು ತೋರಿದ್ದವು. ಗುಜರಾತ್ ತಂಡ ಖರೀದಿಸಲು ಆಗ ಅದಾನಿ ಗ್ರೂಪ್ 5,100 ಕೋಟಿ ರುಪಾಯಿ ಬಿಡ್ ಮಾಡಿದರೆ, ಟೊರೆಂಟ್ ಗ್ರೂಪ್ 4,653 ಕೋಟಿ ರುಪಾಯಿ ಬಿಡ್ ಮಾಡಿತ್ತು.
ಸದ್ಯ ಅದಾನಿ ಗ್ರೂಪ್ 2023ರಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ 1298 ಕೋಟಿ ರುಪಾಯಿ ನೀಡಿ ಅಹಮದಾಬಾದ್ ಫ್ರಾಂಚೈಸಿಯನ್ನು ಖರೀದಿಸುವಲ್ಲಿ ಯಶಸ್ವಿಯಾಗಿತ್ತು.