ಐಪಿಎಲ್‌ನಲ್ಲಿ Shikhar Dhawan 6 ಸಾವಿರ ರನ್, ಕೊಹ್ಲಿಯನ್ನು ಹಿಂಬಾಲಿಸುತ್ತಾರೆ ಗಬ್ಬರ್‌ ಸಿಂಗ್..!

Published : Apr 26, 2022, 08:21 AM IST
ಐಪಿಎಲ್‌ನಲ್ಲಿ Shikhar Dhawan 6 ಸಾವಿರ ರನ್, ಕೊಹ್ಲಿಯನ್ನು ಹಿಂಬಾಲಿಸುತ್ತಾರೆ ಗಬ್ಬರ್‌ ಸಿಂಗ್..!

ಸಾರಾಂಶ

* ಐಪಿಎಲ್‌ನಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ * ಐಪಿಎಲ್‌ನಲ್ಲಿ 6 ಸಾವಿರ ರನ್ ಪೂರೈಸಿದ ಎರಡನೇ ಆಟಗಾರ ಧವನ್ * ಕೊಹ್ಲಿ ದಾಖಲೆ ಮುರಿಯಲು ರೆಡಿಯಾದ ಡೆಲ್ಲಿ ಮೂಲದ ಪಂಜಾಬ್ ಕಿಂಗ್ಸ್ ಓಪನರ್

ಮುಂಬೈ(ಏ.26): ಐಪಿಎಲ್‌ನಲ್ಲಿ 6,000 ರನ್‌ ಮೈಲಿಗಲ್ಲು ತಲುಪಿದ 2ನೇ ಆಟಗಾರ ಎನ್ನುವ ಹಿರಿಮೆಗೆ ಶಿಖರ್‌ ಧವನ್‌ (Shikhar Dhawan) ಪಾತ್ರರಾಗಿದ್ದಾರೆ. ಈ ಆವೃತ್ತಿಯಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings) ಪರ ಆಡುತ್ತಿರುವ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್‌, ಸೋಮವಾರ ನಡೆದ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದರು. 200 ಪಂದ್ಯಗಳನ್ನಾಡಿದ 7ನೇ ಆಟಗಾರ ಎನ್ನುವ ಖ್ಯಾತಿಗೂ ಪಾತ್ರರಾದ ಧವನ್‌ 199 ಇನ್ನಿಂಗ್ಸ್‌ಗಳಲ್ಲಿ 6086 ರನ್‌ ಕಲೆಹಾಕಿದ್ದಾರೆ. ಐಪಿಎಲ್‌ನಲ್ಲಿ ಶಿಖರ್ ಧವನ್ 2 ಶತಕ, 46 ಅರ್ಧಶತಕಗಳನ್ನು ಬಾರಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) 215 ಐಪಿಎಲ್‌ ಪಂದ್ಯಗಳನ್ನಾಡಿ 6402 ರನ್‌ ಕಲೆಹಾಕಿ, ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು 221 ಪಂದ್ಯಗಳಲ್ಲಿ 5,764 ರನ್‌ ಬಾರಿಸಿರುವ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್ ಶರ್ಮಾ (Rohit Sharma) ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇದೇ ವೇಳೆ ಟಿ20 ಕ್ರಿಕೆಟ್‌ನಲ್ಲಿ 9,000 ರನ್‌ಗಳನ್ನು ಸಹ ಅವರು ಪೂರೈಸಿದರು. ಇನ್ನು ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ 1,000 ರನ್‌ ಪೂರೈಸಿದ ಧವನ್‌, ಐಪಿಎಲ್‌ನಲ್ಲಿ ತಂಡವೊಂದರ ವಿರುದ್ಧ ಗರಿಷ್ಠ ರನ್‌ ಗಳಿಸಿದ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು.

ಪಂಜಾಬ್‌ ಕಿಂಗ್ಸ್‌ಗೆ ಶರಣಾದ ಚೆನ್ನೈ ಸೂಪರ್ ಕಿಂಗ್ಸ್

ಮುಂಬೈ: ಐಪಿಎಲ್‌ 15ನೇ ಆವೃತ್ತಿಯಲ್ಲಿ (IPL 2022) ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಪ್ಲೇ-ಆಫ್‌ ಹಾದಿ ಮತ್ತಷ್ಟು ಕಠಿಣಗೊಂಡಿದೆ. ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಚೆನ್ನೈ 11 ರನ್‌ಗಳ ಸೋಲು ಅನುಭವಿಸಿತು. ತಂಡಕ್ಕಿದು ಈ ಆವೃತ್ತಿಯಲ್ಲಿ 6ನೇ ಸೋಲು. ಬಾಕಿ ಇರುವ 6 ಪಂದ್ಯಗಳಲ್ಲಿ ಚೆನ್ನೈ ಎಲ್ಲಾ 6 ಪಂದ್ಯಗಳಲ್ಲಿ ಗೆದ್ದರೂ ಪ್ಲೇ-ಆಫ್‌ಗೇರುವುದು ಕಷ್ಟ.

ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌, ಶಿಖರ್‌ ಧವನ್‌ರ ಆಕರ್ಷಕ 88* ರನ್‌ ನೆರವಿನಿಂದ 20 ಓವರಲ್ಲಿ 4 ವಿಕೆಟ್‌ಗೆ 187 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಚೆನ್ನೈ, ಅಂಬಟಿ ರಾಯುಡು ಅವರ ಸ್ಫೋಟಕ ಇನ್ನಿಂಗ್ಸ್(78 ರನ್‌, 39 ಎಸೆತ, 7 ಬೌಂಡರಿ, 6 ಸಿಕ್ಸರ್‌) ಹೊರತಾಗಿಯೂ ಗೆಲುವಿನ ದಡ ಸೇರಲಿಲ್ಲ. ಪಂಜಾಬ್‌ 4ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದು, ಪ್ಲೇ-ಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಚೆನ್ನೈ ಮತ್ತೆ ಆರಂಭಿಕ ಆಘಾತ ಅನುಭವಿಸಿತು. 40 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈಗೆ ಅಂಬಟಿ ರಾಯುಡು ಆಸರೆಯಾದರು. ಅವರ ಆಕರ್ಷಕ ಆಟ ತಂಡ ಗೆಲುವಿನ ಆಸೆಯನ್ನು ಕೈಬಿಡದಂತೆ ಮಾಡಿತು.

IPL 2022 ಫಿನಿಶರ್ ಧೋನಿಗೆ ಚಮಕ್ ನೀಡಿದ ಆರ್ಶ್ ದೀಪ್, ಪಂಜಾಬ್ ಗೆ ಸೂಪರ್ ಗೆಲುವು!

18ನೇ ಓವರಲ್ಲಿ ರಾಯುಡು ಔಟಾದಾಗ ತಂಡವನ್ನು ಗೆಲ್ಲಿಸುವ ಹೊಣೆ ಎಂ.ಎಸ್‌.ಧೋನಿ (MS Dhoni) ಹೆಗಲಿಗೆ ಬಿತ್ತು. 1 ಬೌಂಡರಿ, 1 ಸಿಕ್ಸರ್‌ ಬಾರಿಸಿ ಧೋನಿ ಭರವಸೆ ಮೂಡಿಸಿದರು. ಈ ನಡುವೆ ಅಶ್‌ರ್‍ದೀಪ್‌ ಸಿಂಗ್‌ ಮತ್ತೊಮ್ಮೆ ಪಂಜಾಬ್‌ಗೆ ನೆರವಾದರು. 19ನೇ ಓವರಲ್ಲಿ ಕೇವಲ 8 ರನ್‌ ನೀಡಿ ಕೊನೆ ಓವರ್‌ನಲ್ಲಿ ಚೆನ್ನೈ 27 ರನ್‌ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿಸಿದರು. ರಿಶಿ ಧವನ್‌ ಎಸೆದ 20ನೇ ಓವರ್‌ನ 3ನೇ ಎಸೆತದಲ್ಲಿ ಧೋನಿ ಔಟಾಗುತ್ತಿದ್ದಂತೆ ಚೆನ್ನೈ ಜಯದ ಆಸೆ ಕಮರಿ ಹೋಯಿತು.

ಧವನ್‌ ಮಿಂಚು: ಪಂಜಾಬ್‌ ಮೊದಲ ವಿಕೆಟ್‌ಗೆ 37 ರನ್‌ ಜೊತೆಯಾಟ ಪಡೆಯಿತು. ಈ ಬಾರಿ ಎಚ್ಚರಿಕೆಯ ಆಟಕ್ಕೆ ಮೊರೆಹೋದ ಪಂಜಾಬ್‌ಗೆ ಧವನ್‌ ಹಾಗೂ ಭನುಕ ರಾಜಪಕ್ಸೆ 2ನೇ ವಿಕೆಟ್‌ಗೆ 110 ರನ್‌ ಜೊತೆಯಾಟವಾಡಿ ಆಸರೆಯಾದರು. ರಾಜಪಕ್ಸೆ 42 ರನ್‌ ಗಳಿಸಿ ಔಟಾದ ಬಳಿಕ ಕೊನೆಯಲ್ಲಿ ಲಿಯಾಮ್‌ ಲಿವಿಂಗ್‌ಸ್ಟೋನ್‌ 7 ಎಸೆತದಲ್ಲಿ 19 ರನ್‌ ಸಿಡಿಸಿ ತಂಡ 180 ರನ್‌ ದಾಟಲು ನೆರವಾದರು. ಧವನ್‌ 59 ಎಸೆತದಲ್ಲಿ 9 ಬೌಂಡರಿ, 2 ಸಿಕ್ಸರ್‌ನೊಂದಿಗೆ 88 ರನ್‌ ಗಳಿಸಿ ಔಟಾಗದೆ ಉಳಿದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!